ಸಿಂಧನೂರು: ಈ ದೇಶಕ್ಕೆ ಸ್ವಾತಂತ್ರ್ಯ ತರುವ ನಿಟ್ಟಿನಲ್ಲಿ ಮಹತ್ವದ ಪಾತ್ರವಹಿಸಿದ ಕಾಂಗ್ರೆಸ್ ಹೋರಾಟ, ಇತಿಹಾಸವನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕು ಎಂದು ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಹೇಳಿದರು.
ಶುಕ್ರವಾರ ತಾಲೂಕಿನ ದಿದ್ದಗಿ ಗ್ರಾಮದಲ್ಲಿ ಬ್ಲಾಕ್ ಕಾಂಗ್ರೆಸ್‌ನಿಂದ ಹಮ್ಮಿಕೊಂಡಿದ್ದ ಪಾದಯಾತ್ರೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
1835ರಲ್ಲಿ ಹುಟ್ಟಿದ ಕಾಂಗ್ರೆಸ್ ಪಕ್ಷವೂ ಅನೇಕ ಕೊಡುಗೆ ನೀಡಿದೆ. ಸ್ವಾತಂತ್ರ್ಯ ಪೂರ್ವ ಎರಡು ಅಧಿವೇಶನಗಳನ್ನು ನಡೆಸಿ, ಜನರನ್ನು ಸಂಘಟಿಸಿದೆ. ದೇಶದ ಅಭಿವೃದ್ಧಿಯಲ್ಲಿ ಕಾಂಗ್ರೆಸ್‌ವಹಿಸಿರುವ ಪಾತ್ರವನ್ನು ಪ್ರತಿಯೊಬ್ಬರೂ ಗಮನಿಸಬೇಕು. ಜಲಾಶಯಗಳ ನಿರ್ಮಾಣ, ವಿಶ್ವವಿದ್ಯಾಲಯ, ಆಸ್ಪತ್ರೆಗಳು, ರಸ್ತೆ, ರೈಲು, ತಂತ್ರಜ್ಞಾನ, ಬ್ಯಾಂಕ್‌ಗಳ ಸೇವೆ ಸೇರಿದಂತೆ ಅನೇಕ ಸುಧಾರಣಾತ್ಮಕ ಕ್ರಮಗಳನ್ನು ಕೈಗೊಂಡಿರಿಂದಲೇ ಇಂದು ಪ್ರಗತಿಪರ ರಾಷ್ಟ್ರವಾಗಿದೆ ಎಂದರು.
ಶಾಸಕ ಆರ್.ಬಸನಗೌಡ ತುರುವಿಹಾಳ ಮಾತನಾಡಿ, ಈ ನಾಡಿಗೆ ಕಾಂಗ್ರೆಸ್ ನೀಡಿದಷ್ಟು ಕೊಡುಗೆಯನ್ನು ಬೇರೆ ಯಾವ ಪಕ್ಷವೂ ಕೊಡಲು ಸಾಧ್ಯವಿಲ್ಲ. ಅದನ್ನು ಜನರಿಗೆ ತಿಳಿಸುವ ಕೆಲಸ ಕಾರ್ಯಕರ್ತರಿಂದ ಆಗಬೇಕು ಎಂದರು.
ವಿಧಾನ ಪರಿಷತ್ ಮಾಜಿ ಸದಸ್ಯ ಶರಣಪ್ಪ ಮಟ್ಟೂರು, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಿ.ವಿ. ನಾಯಕ, ಮಾಜಿ ಅಧ್ಯಕ್ಷ ಎ.ವಸಂತಕುಮಾರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಂಪನಗೌಡ ಬಾದರ್ಲಿ, ನಗರಸಭೆ ಮಾಜಿ ಅಧ್ಯಕ್ಷ ಜಾಫರ್ ಜಾಹಗೀರದಾರ್, ಆರ್.ತಿಮ್ಮಯ್ಯ ನಾಯಕ್, ಲಿಂಗರಾಜ್ ಪಾಟೀಲ್ ರಾಗಲಪರ್ವಿ, ಬಾಬುಗೌಡ ಬಾದರ್ಲಿ, ಖಾಜಿ ಮಲಿಕ್, ಮಹಿಳಾ ಘಟಕದ ಜಿಲ್ಲಾ ಉಪಾಧ್ಯಕ್ಷೆ ಡಾ|ನಾಗವೇಣಿ ಪಾಟೀಲ್, ತಾಲೂಕು ಅಧ್ಯಕ್ಷೆ ದಾಕ್ಷಾಯಣಿ ಮಾಲಿ ಪಾಟೀಲ್, ಶರಣಗೌಡ ಗದ್ರಟಗಿ ಇದ್ದರು.
ಆರತಿ ಎತ್ತಿ ಸ್ವಾಗತ: ದಿದ್ದಗಿಯಿಂದ ರಾಗಲಪರ್ವಿಯವರೆಗೆ 12 ಕಿ.ಮೀ. ಉದ್ದಕ್ಕೂ ಪಾದಯಾತ್ರೆ ನಡೆಯಿತು. ಸ್ವಾತಂತ್ರ್ಯ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ 75 ಮಹಿಳೆಯರು ಆರತಿ ಬೆಳಗಿ ಕಾರ್ಯಕ್ರಮಕ್ಕೆ ಮೆರುಗು ತಂದರು. 75 ಮಹಿಳೆಯರು ಕುಂಭ ಹೊತ್ತು ಪಾಲ್ಗೊಂಡಿದ್ದರು. ಇದೇ ವೇಳೆ 75 ಜನ ಮಹಿಳೆಯರು 75 ಸಹೋದರರಿಗೆ ಏಕಕಾಲದಲ್ಲಿ ರಾಖೀ ಕಟ್ಟುವ ಮೂಲಕ ವಿನೂತನವಾಗಿ ರಕ್ಷಾ ಬಂಧನ ಹಬ್ಬ ಆಚರಿಸಿದರು.