ನವದೆಹಲಿ: ಪಿತ್ರಾರ್ಜಿತ ತೆರಿಗೆ ಮತ್ತು ಭಾರತೀಯರ ಬಗ್ಗೆ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದ ಕಾಂಗ್ರೆಸ್ ಮಾಜಿ ಅಧ್ಯಕ್ಷ ಸ್ಯಾಮ್ ಪಿತ್ರೋಡಾ ನಂತರ ಇದೀಗ ಮತ್ತೊಬ್ಬ ಕಾಂಗ್ರೆಸ್ ಹಿರಿಯ ನಾಯಕರೊಬ್ಬರ ವಿವಾದಾತ್ಮಕ ಹೇಳಿಕೆ ಬೆಳಕಿಗೆ ಬಂದಿದೆ.
ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಮಣಿಶಂಕರ್ ಅಯ್ಯರ್ ಪಾಕಿಸ್ತಾನಕ್ಕೆ ಸಂಬಂಧಿಸಿದಂತೆ ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದಾರೆ. ನೆರೆಯ ರಾಷ್ಟ್ರವದ ಪಾಕಿಸ್ತಾನ ಪರಮಾಣು ಬಾಂಬ್‌ಗಳನ್ನು ಹೊಂದಿರುವುದರಿಂದ ನಾವು (ಭಾರತೀಯರು) ಪಾಕಿಸ್ತಾನವನ್ನು ಗೌರವಿಸಬೇಕು ಎಂದು ಮಣಿಶಂಕರ್ ಅಯ್ಯರ್ ಸಂದರ್ಶನವೊಂದರಲ್ಲಿ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ. ನಾವು ಅವರನ್ನು ಗೌರವಿಸದಿದ್ದರೆ ಅವರು ಭಾರತದ ಮೇಲೆ ಪರಮಾಣು ದಾಳಿಯ ಬಗ್ಗೆ ಯೋಚಿಸಬಹುದು ಎಂದು ಹೇಳಿದ್ದಾರೆ.
ಪಾಕಿಸ್ತಾನದ ಬಳಿಯೂ ಅಣ್ವಸ್ತ್ರಗಳಿವೆ ಎಂಬುದನ್ನು ಭಾರತ ಮರೆಯಬಾರದು ಎಂದು ಅಯ್ಯರ್ ಹೇಳಿದ್ದಾರೆ. ಪಾಕಿಸ್ತಾನದಲ್ಲಿ ಭಯೋತ್ಪಾದನೆ ಇರುವುದರಿಂದ ನಾವು ಅವರನ್ನು ಕಡೆಗಣಿಸುವುದು ಸರಿಯಲ್ಲ, ಅಲ್ಲದೆ ಈಗಿನ ಸರಕಾರ ಪಾಕಿಸ್ತಾನವನ್ನು ಯಾಕೆ ಕಡೆಗಣಿಸುತ್ತಿದೆ ಎಂಬುದು ನನಗೆ ಅರ್ಥವಾಗುತ್ತಿಲ್ಲ. ಭಯೋತ್ಪಾದನೆಯನ್ನು ಕೊನೆಗೊಳಿಸಲು ಚರ್ಚೆ ಬಹಳ ಮುಖ್ಯ ಎಂಬುದನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ಇಲ್ಲದಿದ್ದರೆ, ಭಾರತವು ದುರಹಂಕಾರದಿಂದ ನಮ್ಮನ್ನು ಜಗತ್ತಿನಲ್ಲಿ ಚಿಕ್ಕವರಂತೆ ಕಾಣುತ್ತಿದೆ ಎಂದು ಪಾಕಿಸ್ತಾನ ಭಾವಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಪಾಕಿಸ್ತಾನ ತಮ್ಮ ಮೇಲೆ ದಾಳಿಗೂ ಮುಂದಾಗಬಹುದು ಇದರ ಕುರಿತು ನಾವು ಎಚ್ಚರದಿಂದಿರಬೇಕು ಎಂದು ಹೇಳಿದ್ದಾರೆ.
ಸದ್ಯ ಕಾಂಗ್ರೆಸ್ ಹಿರಿಯ ನಾಯಕರ ಹೇಳಿಕೆ ಭಾರಿ ಚರ್ಚೆಗೆ ಎಡೆ ಮಾಡಿಕೊಟ್ಟಿದ್ದು ನಾಯಕರ ಹೇಳಿಕೆ ಕುರಿತು ಬಿಜೆಪಿ ಕಿಡಿ ಕಾರಿದೆ.