Advertisement
ಆದರೆ, ಈ ಕುರಿತು ಚರ್ಚಿಸಲು ಗುರುವಾರ ಬೆಳಗ್ಗೆ ಮತ್ತೂಮ್ಮೆ ಶಾಸಕಾಂಗ ಪಕ್ಷದ ಸಭೆ ಕರೆಯಲಾಗಿದ್ದು, ಅಲ್ಲಿ ಅಧಿಕೃತ ತೀರ್ಮಾನ ಕೈಗೊಳ್ಳಲು ನಿರ್ಧರಿಸಲಾಗಿದೆ ಎಂದು ತಿಳಿದು ಬಂದಿದೆ. ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ನಗರದ ಖಾಸಗಿ ಹೋಟೆಲ್‌ನಲ್ಲಿ ಬುಧವಾರ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ರಾಜ್ಯ ಸರ್ಕಾರದ ವೈಫಲ್ಯಗಳ ವಿರುದ್ಧ ಒಗ್ಗಟ್ಟು ಪ್ರದರ್ಶಿಸಲು ಕಾಂಗ್ರೆಸ್ ನಾಯಕರು ತೀರ್ಮಾನಿಸಿದರು.
Related Articles
Advertisement
ಇದೇ ವೇಳೆ, ದೃಶ್ಯ ಮಾಧ್ಯಮಗಳಿಗೆ ಕಲಾಪದ ಚಿತ್ರೀಕರಣಕ್ಕೆ ನಿರ್ಬಂಧ ಹೇರಿ, ಮಾಧ್ಯಮಗಳನ್ನು ದೂರ ಇಡುವ ಪ್ರಯತ್ನ ಮಾಡಲಾಗಿದೆ. ಸರ್ಕಾರ ತನ್ನ ತಪ್ಪುಗಳನ್ನು ಮುಚ್ಚಿಕೊಳ್ಳಲು ಮಾಧ್ಯಮಗಳ ಮೇಲೆ ನಿರ್ಬಂಧ ಹೇರುವ ಯತ್ನ ಮಾಡುತ್ತಿದೆ. ಇದು ಪ್ರಜಾಪ್ರಭುತ್ವ ವಿರೋಧಿ ಧೋರಣೆಯಾಗಿದ್ದು, ಈ ಬಗ್ಗೆಯೂ ಸರ್ಕಾರದ ವಿರುದ್ಧ ವಾಗ್ಧಾಳಿ ನಡೆಸಲು ಕಾಂಗ್ರೆಸ್ ನಾಯಕರು ತೀರ್ಮಾನಿಸಿದ್ದಾರೆ ಎನ್ನಲಾಗಿದೆ.
ಜೆಡಿಎಸ್ ಬೆಂಬಲದ ನಿರೀಕ್ಷೆ: ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿ ಸರ್ಕಾರ ಪತನಗೊಂಡ ನಂತರ ಎರಡೂ ಪಕ್ಷಗಳ ನಾಯಕರು ಬಹಿರಂಗವಾಗಿಯೇ ಆರೋಪ- ಪ್ರತ್ಯಾರೋಪ ಮಾಡಿಕೊಂಡು ತಿರುಗಾಡುತ್ತಿದ್ದಾರೆ. ಆದರೆ, ಈಗ ವಿಧಾನ ಮಂಡಲದ ಅಧಿವೇಶನದಲ್ಲಿ ಕಾಂಗ್ರೆಸ್, ಜೆಡಿಎಸ್ ಬೆಂಬಲದ ನಿರೀಕ್ಷೆಯಲ್ಲಿದೆ. ಪ್ರಮುಖವಾಗಿ ಪ್ರವಾಹ, ಬರ, ಶಾಸಕರ ಅನುದಾನ ಕಡಿತದಂತಹ ವಿಷಯಗಳು ಎರಡೂ ಪ್ರತಿಪಕ್ಷಗಳಿಗೂ ಅನ್ವಯ ಆಗುವುದರಿಂದ ಜೆಡಿಎಸ್ ಬೆಂಬಲ ದೊರೆತರೆ ಬಿಜೆಪಿಯನ್ನು ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿಸಲು ಅನುಕೂಲವಾಗುತ್ತದೆ ಎಂಬ ನಿರೀಕ್ಷೆಯನ್ನು ಕಾಂಗ್ರೆಸ್ ನಾಯಕರು ಇಟ್ಟುಕೊಂಡಿದ್ದಾರೆ.
ಉಪ ಸಭಾಪತಿ ಬದಲಾವಣೆಗೆ ಆಗ್ರಹ: ವಿಧಾನ ಪರಿಷತ್‌ನಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿದ್ದರಿಂದ ಸಭಾಪತಿ ಸ್ಥಾನ ಕಾಂಗ್ರೆಸ್‌ಗೆ ದೊರೆತಿದ್ದು, ಜೆಡಿಎಸ್ ಉಪ ಸಭಾಪತಿ ಸ್ಥಾನ ಪಡೆದುಕೊಂಡಿದೆ. ಈಗ, ಜೆಡಿಎಸ್‌ನೊಂದಿಗಿನ ಮೈತ್ರಿ ಮುರಿದು ಬಿದ್ದಿರುವುದರಿಂದ ಉಪ ಸಭಾಪತಿ ಸ್ಥಾನವನ್ನೂ ಕಾಂಗ್ರೆಸ್ ಪಡೆದುಕೊಳ್ಳಲು ಅವಕಾಶ ಇರುವುದರಿಂದ ಜೆಡಿಎಸ್‌ನ ಉಪ ಸಭಾಪತಿಯಾಗಿರುವ ಧರ್ಮೇಗೌಡ ಅವರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಮಾಡಬೇಕು ಎಂದು ವಿಧಾನ ಪರಿಷತ್ ಸದಸ್ಯರು ನಾಯಕರ ಮೇಲೆ ಒತ್ತಡ ತಂದಿದ್ದಾರೆ ಎಂದು ತಿಳಿದು ಬಂದಿದೆ.
ಆದರೆ, ಉಪ ಸಭಾಪತಿಯನ್ನು ಪದಚ್ಯುತಿಗೊಳಿಸಲು ಕನಿಷ್ಠ 14 ದಿನ ಮುಂಚೆಯೇ ನೋಟಿಸ್ ನೀಡಬೇಕೆಂಬ ನಿಯಮ ಇರುವುದರಿಂದ ಮುಂದಿನ ಅಧಿವೇಶನಕ್ಕೂ ಮುಂಚೆಯೇ ನೋಟಿಸ್ ನೀಡಿ, ಉಪ ಸಭಾಪತಿಯನ್ನು ಬದಲಾಯಿಸಲು ನಿರ್ಧರಿಸಲಾಗಿದೆ ಎಂದು ತಿಳಿದು ಬಂದಿದೆ.
ದಿನೇಶ್ ಗೈರು: ವಿದೇಶ ಪ್ರವಾಸದಲ್ಲಿರುವ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಶಾಸಕಾಂಗ ಪಕ್ಷದ ಸಭೆಗೆ ಗೈರು ಹಾಜರಾಗಿದ್ದರು. ಗುರುವಾರ ತಡ ರಾತ್ರಿ ಬೆಂಗಳೂರಿಗೆ ಆಗಮಿಸುತ್ತಿರುವುದರಿಂದ ಗುರುವಾರ ಬೆಳಿಗ್ಗೆ ನಡೆಯುವ ಪಕ್ಷದ ಶಾಸಕಾಂಗ ಸಭೆ ಹಾಗೂ ವಿಧಾನಸಭೆ ಕಲಾಪದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.