Advertisement
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಯುಬಿ ಸಿಟಿ ಗಲಾಟೆಯಲ್ಲಿ ಕಾಂಗ್ರೆಸ್ ಶಾಸಕ ಹ್ಯಾರಿಸ್‍ರ ವರ ಮಗ ಮಹಮ್ಮದ್ ನಲಪಾಡ್ ಹೆಸರಿತ್ತು. ಇವರ ಜೊತೆ ಬಿಟ್ ಕಾಯಿನ್ ಆರೋಪಿ ಶ್ರೀಕೃಷ್ಣ ಹೆಸರೂ ಇತ್ತು. ಆಗಲೇ ಬಿಟ್ ಕಾಯಿನ್ ವಿಚಾರ ಚರ್ಚೆಗೆ ಬಂದಿತ್ತು. ಈಗ ಶ್ರೀಕೃಷ್ಣನು ಕಾಂಗ್ರೆಸ್ ಶಾಸಕರು, ಶಾಸಕರ ಮಕ್ಕಳ ಹೆಸರು ಹೇಳಿದ್ದಾನೆ. ಮಾಜಿ ಸಚಿವರ ಮಗ ರುದ್ರಪ್ಪ ಲಮಾಣಿ ಹೆಸರು ಹೇಳಿದ್ದಾನೆ. ಇದಕ್ಕೆ ಸಿದ್ದರಾಮಯ್ಯ ಏನು ಹೇಳುತ್ತಾರೆ ಎಂದು ಪ್ರಶ್ನಿಸಿದರು.
Related Articles
Advertisement
ಸಿದ್ದರಾಮಯ್ಯರವರು ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿಗಳ ವಿರುದ್ಧ ಸ್ಟೈಲ್ ಆಗಿ ಸುಳ್ಳು ಅಪಪ್ರಚಾರ ಮಾಡುತ್ತಿದ್ದಾರೆ. ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ 100 ದಿನಗಳಾದ ಸಂದರ್ಭದಲ್ಲಿ ಏಕವಚನದಲ್ಲಿ ಟೀಕೆ ಮಾಡಿದ್ದರು ಎಂದು ಆಕ್ಷೇಪಿಸಿದರು. ಬಿಟ್ ಕಾಯಿನ್ ಅಂದರೆ ಮೊಬೈಲ್, ಲ್ಯಾಪ್‍ಟಾಪ್‍ಗಳಲ್ಲಿ ನಡೆಯುವವ ಡಿಜಿಟಲ್ ಫೇಕ್ ಟರ್ನ್ ಓವರ್; ಇದರ ಸಂಪೂರ್ಣ ಮಾಹಿತಿ ನಮಗಾಗಲೀ ಸರ್ಕಾರಕ್ಕಾಗಲೀ ಇಲ್ಲ ಎಂದು ತಿಳಿಸಿದರು.
ಬಿಜೆಪಿ ಎಸ್.ಸಿ. ಮೋರ್ಚಾ ರಾಜ್ಯ ಅಧ್ಯಕ್ಷರು ಹಾಗೂ ಪಕ್ಷದ ರಾಜ್ಯ ವಕ್ತಾರ ಛಲವಾದಿ ನಾರಾಯಣಸ್ವಾಮಿ ಅವರು ಮಾತನಾಡಿ, ಸಿದ್ದರಾಮಯ್ಯ ಸುಳ್ಳುಗಳ ಸರದಾರ. ಬರಿ ಗಾಳಿಯಲ್ಲಿ ಗುಂಡು ಹೊಡೆಯುವ ವ್ಯಕ್ತಿ ಎಂದರು. ದಲಿತರ ಹೊಟ್ಟೆಪಾಡಿಗಾಗಿ ಬಿಜೆಪಿಗೆ ಹೋಗುತ್ತಾರೆ ಎಂಬ ಹೇಳಿಕೆಯ ವಿಡಿಯೋವನ್ನು ತಿರುಚಿಲ್ಲ; ಈ ವಿಚಾರದಲ್ಲಿ ಸಿದ್ದರಾಮಯ್ಯರ ನಾಲಿಗೆ ತಿರುಚಿದೆ ಎಂದು ತಿಳಿಸಿದರು. ಸಿದ್ದರಾಮಯ್ಯರು ನಿಜವಾದ ವಿಡಿಯೋ ಇದ್ದರೆ ಬಿಡುಗಡೆ ಮಾಡಲಿ ಎಂದು ಸವಾಲು ಹಾಕಿದರು.
2016-18ರವರೆಗೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗಲೇ ಬಿಟ್ ಕಾಯಿನ್ ವಿಚಾರದ ಚರ್ಚೆ ನಡೆಯುತ್ತಿತ್ತು. ಆದರೆ, ನಗದು ಎಲ್ಲಿದೆ, ಖಾತೆ ಎಲ್ಲಿದೆ ಎಂದು ಯಾರಿಗೂ ಗೊತ್ತಿಲ್ಲ. ಸಿದ್ದರಾಮಯ್ಯರ ಕಾಲದಲ್ಲೇ ಈ ದಂಧೆ ನಡೆಯುತ್ತಿತ್ತು. ಆಗ ಐಟಿ, ಬಿಟಿ ಸಚಿವರಾಗಿದ್ದವರನ್ನು ಈಗ ವಿಚಾರಣೆಗೆ ಒಳಪಡಿಸಿದರೆ ನಿಮ್ಮ ಗುಟ್ಟೂ ಹೊರಬರುತ್ತದೆ ಎಂದು ತಿಳಿಸಿದರು.
ಸಿಎಂ ಬದಲಾಗುತ್ತಾರೆ; ಮೂರನೇ ಸಿಎಂ ಬರುತ್ತಾರೆ ಎಂಬುದು ಕೇವಲ ಗುಲ್ಲು. ಇವೆಲ್ಲವೂ ಆಧಾರರಹಿತ ಮಾತುಗಳು ಎಂದ ಅವರು, ದಲಿತ ಸಿಎಂ ವಿಚಾರದಲ್ಲಿ ಸಿದ್ದರಾಮಯ್ಯರ ನಿಜ ಮುಖ ಬಯಲಾಗಿದೆ. ನಾನೂ ದಲಿತನೇ, ನಾನೂ ಮುಸ್ಲಿಮನೇ ಎನ್ನುವ ಮೂಲಕ ನಿಮ್ಮ ನಿಜಬಣ್ಣ ಹೊರಬಿದ್ದಿದೆ ಎಂದು ತಿಳಿಸಿದರು.
ಸಿದ್ದರಾಮಯ್ಯರು ತಮ್ಮ ಗೋಮುಖ ವ್ಯಾಘ್ರನ ಕೆಲಸ ನಿಲ್ಲಿಸಲಿ ಎಂದು ಒತ್ತಾಯಿಸಿದರು. ಪ್ರಿಯಾಂಕ ಖರ್ಗೆ ಚೇಂಬರ್ ನಲ್ಲೇ ಬಿಟ್ ಕಾಯಿನ್ ಕುರಿತು 2016-17ರಲ್ಲಿ ಚರ್ಚೆ ನಡೆದಿತ್ತು ಎಂದು ಆರೋಪಿಸಿದರು.
ಸಮರ್ಪಕ ತನಿಖೆ ಮಾಡದೆ ಬಂಧಿಸಿದರೆ ಈ ಪ್ರಕರಣದ ಹಿಂದಿರುವ ಕಾಣದ ಕೈಗಳು ಸಿಗಲಾರವು. ಈ ವಿಚಾರದಲ್ಲಿ ತಾಳ್ಮೆ ಇರಬೇಕು. ಮುಖ್ಯಮಂತ್ರಿಗಳು, ಗೃಹ ಸಚಿವರು ತನಿಖೆ ಬಗ್ಗೆ ಸ್ಪಷ್ಟಪಡಿಸಿದ್ದಾರೆ ಎಂದು ಈ ಕುರಿತ ಪ್ರಶ್ನೆಗೆ ಉತ್ತರ ನೀಡಿದರು