Advertisement

ಜೆಡಿಎಸ್‌ ಕಡೆಗಣಿಸಿದ್ದ ಕಾಂಗ್ರೆಸ್ಸಿಗರು: ಶಾಸಕರ ಆರೋಪ

09:38 PM Aug 04, 2019 | Team Udayavani |

ನೆಲಮಂಗಲ: ಮೈತ್ರಿ ಸರ್ಕಾರದಲ್ಲಿ ಕಾಂಗ್ರೆಸ್‌ ನಾಯಕರು ಜೆಡಿಎಸ್‌ ಪಕ್ಷವನ್ನು ಕಡೆಗಣಿಸಿದರು. ಈ ಕಾರಣದಿಂದಲೇ ಸರ್ಕಾರ ಪತನವಾಗಿದ್ದು ಹಾಗೂ ಕಾಂಗ್ರೆಸ್‌ ಅಧಿಕಾರದಲ್ಲಿದ್ದಾಗ ನಮ್ಮ ಕ್ಷೇತ್ರದ ಅಭಿವೃದ್ಧಿ ಕಾಮಗಾರಿ ಪತ್ರಗಳನ್ನು ಕಡೆಗಣಿಸುತ್ತಿದ್ದರು ಎಂದು ಪರೋಕ್ಷವಾಗಿ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಜೆಡಿಎಸ್‌ ಶಾಸಕ ಡಾ.ಶ್ರೀನಿವಾಸ ಅಸಮಾಧಾನ ವ್ಯಕ್ತಪಡಿಸಿದರು.

Advertisement

ತಾಲೂಕಿನ ತ್ಯಾಮಗೊಂಡ್ಲು ಹೋಬಳಿಯ ಕುಲುವನಹಳ್ಳಿ ಗ್ರಾಮದಲ್ಲಿ ಅರೆಬೊಮ್ಮನಹಳ್ಳಿಯಿಂದ ತ್ಯಾಮಗೊಂಡ್ಲುವಿನವರೆಗೂ 4 ಕೋಟಿ ವೆಚ್ಚದ ಡಾಂಬರ್‌ ರಸ್ತೆ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.

ಸರ್ಕಾರದ ಪತನಕ್ಕೆ ಬಹಳ ದಿನ ಇಲ್ಲ: ಕಳೆದ 14 ತಿಂಗಳು ರಾಜ್ಯದಲ್ಲಿ ಮೈತ್ರಿ ಸರ್ಕಾರ ಅಧಿಕಾರ ನಡೆಸಿದರು. ಪಕ್ಷದ ನಾಯಕರುಗಳಲ್ಲಿ ಹೊಂದಾಣಿಕೆ ಕಂಡು ಬರಲಿಲ್ಲ. ಜೆಡಿಎಸ್‌ ಶಾಸಕರು ಹಾಗೂ ನಾಯಕರನ್ನು ಮೊದಲಿಂದಲೂ ಕಾಂಗ್ರೆಸ್‌ ನಾಯಕರು ಕಡೆಗಣಿಸಿದರು. ಸಿದ್ದರಾಮಯ್ಯನವರು ಮುಖ್ಯಮಂತ್ರಿಗಳಾಗಿದ್ದಾಗ ನಮ್ಮ ಪಕ್ಷದ ಶಾಸಕರ ಪತ್ರಗಳನ್ನು ಗಾಳಿಗೆ ತೂರುತ್ತಿದ್ದರು ಎಂದು ಆರೋಪಿಸಿದರು.

ರಾಜ್ಯ ರಾಜಕಾರಣದಲ್ಲಿ ಪಕ್ಷದಿಂದ ಪಕ್ಷಕ್ಕೆ ಹಾರುವುದನ್ನು ಪರಿಚಯಿಸಿ, ಪೋಷಿಸುತ್ತಿರುವುದು ಬಿಜೆಪಿ ನಾಯಕರು ಹಾಗೂ ಆಡಳಿತವನ್ನು ರಾಜ್ಯದ ಜನ ನೋಡುತ್ತಿದ್ದಾರೆ. ಆತೃಪ್ತರನ್ನು ತೃಪ್ತರನ್ನಾಗಿಸುವುದು ಬಿಜೆಪಿಯವರಿಂದ ಸಾಧ್ಯವಿಲ್ಲ. ಆಟ ಬಹಳ ದಿನದವರೆಗೂ ಇರುವುದಿಲ್ಲ. ಸರ್ಕಾರ ಪತನದ ದಿನಗಳು ಹತ್ತಿರದಲ್ಲಿವೆ. ಸಂಪುಟ ವಿಸ್ತರಣೆಯಲ್ಲಿರುವ ಗೊಂದಲಗಳೇ ಇದಕ್ಕೆ ಸಾಕ್ಷಿ ಎಂದರು.

ಗುಣಮಟ್ಟದ ರಸ್ತೆ ನಿರ್ಮಾಣವಾಗಲಿ: ಅರೆಬೊಮ್ಮನಹಳ್ಳಿ ಗ್ರಾಪಂ ಅಧ್ಯಕ್ಷ ಶೈಲೇಂದ್ರ ಮಾತನಾಡಿ, ಸುಮಾರು ವರ್ಷಗಳಿಂದ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರುವ ಹಳ್ಳಿಗಳಿಂದ ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಗುಂಡಿಗಳಿಂದ ಹಾಳಗಿದ್ದವು. ವಿದ್ಯಾರ್ಥಿಗಳು ಶಾಲೆಗಳಿಗೆ ಹೋಗಲು ತೊಂದರೆಯಾಗುತ್ತಿತ್ತು. ಅದರೆ ಶಾಸಕರ ಸಹಕಾರದಿಂದ ಇಂದು ರಸ್ತೆಗೆ 4 ಕೋಟಿ ಹಣ ಬಿಡುಗಡೆ ಮಾಡಿಸಿ, ಸಾರ್ವಜನಿಕರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಜನರು ರಸ್ತೆ ಕಾಮಗಾರಿ ಬಗ್ಗೆ ಗಮನಹರಿಸಿ ಗುಣಮಟ್ಟದ ರಸ್ತೆ ನಿರ್ಮಿಸಿಕೊಳ್ಳಿ ಎಂದರು.

Advertisement

ಕುಲುವನಹಳ್ಳಿ ಗ್ರಾಪಂ ಅಧ್ಯಕ್ಷ ಕೈಲಾಶ್‌, ಆಂಜನಮೂರ್ತಿ, ಲೊಕೋಪಯೋಗಿ ಇಲಾಖೆ ಇಂಜಿನಿಯರ್‌ ದತ್ತಾತ್ರೇಯ, ರತನ್‌, ಅರಸು, ಸ್ಥಳೀಯ ಮುಖಂಡರಾದ ಸುರೇಶ್‌, ನಾಗರತ್ನ, ಗಂಗರಾಜು, ಗಂಗಯ್ಯ, ಕೆಂಪಣ್ಣ, ತಿಮ್ಮೆಗೌಡ, ಬಾಲಕೃಷ್ಣ ಸೇರಿದಂತೆ ಗ್ರಾಮಸ್ಥರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next