ಬೆಂಗಳೂರು: ಕಾಂಗ್ರೆಸ್ ವಿರುದ್ಧ ಇತ್ತೀಚೆಗೆ ಆರೋಪಗಳ ಬಾಂಬ್ ಎಸೆಯುತ್ತಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪಗೆ ಕಾಂಗ್ರೆಸ್ ಮುಖಂಡರು ಸೀಡಿ ಬಿಡುಗಡೆ ಮಾಡುವ ಮೂಲಕ ತಿರುಗೇಟು ನೀಡಿರುವುದು ಜಗಜ್ಜಾಹೀರಾಗಿದೆ. ಆದರೆ ಅವೆಲ್ಲಕ್ಕಿಂತ ಹೆಚ್ಚು ಕುತೂಹಲ ಮೂಡಿಸಿರುವುದು ಕೈ ಮುಖಂಡರಿಗೆ ಸೀಡಿ ಸಿಕ್ಕಿತ್ತು ಹೇಗೆ ಎಂಬುದು!
ಹೌದು ಕಾಂಗ್ರೆಸ್ ಮುಖಂಡ ವಿಎಸ್ ಉಗ್ರಪ್ಪ ಸೀಡಿ ರಹಸ್ಯ ಬಯಲುಗೊಳಿಸಿದ್ದಾರೆ. ಬಿಎಸ್ ಯಡಿಯೂರಪ್ಪ ಹಾಗೂ ಅನಂತಕುಮಾರ್ ಸಂಭಾಷಣೆಯ ಸೀಡಿಯನ್ನು ಕಾಂಗ್ರೆಸ್ ಮುಖಂಡರಿಗೆ ಕೊಡಿಸಿದ್ದು ಸ್ವತಃ ಬಿಜೆಪಿ ಮುಖಂಡರು!
ಬಿಎಸ್ ಯಡಿಯೂರಪ್ಪ ಅವರನ್ನು ಹತ್ತಿಕ್ಕುವ ನಿಟ್ಟಿನಲ್ಲಿ ಬಿಜೆಪಿಯೊಳಗೆ ತಂತ್ರ ಹೂಡಿರುವ ವಿರೋಧಿಗಳು, ಸಂಭಾಷಣೆ ಸೀಡಿಯನ್ನು ಕಾಂಗ್ರೆಸ್ ಮುಖಂಡರಿಗೆ ನೀಡಿದ್ದಾರೆಂದು ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ.
ಸೀಡಿ ಬಯಲು, ಪ್ರತಿಕ್ರಿಯೆಗೆ ಬಿಎಸ್ ವೈ, ಅನಂತಕುಮಾರ್ ನಕಾರ:
ಹೈಕಮಾಂಡ್ ಗೆ ಕಪ್ಪ ಕಾಣಿಕೆ ಕೊಡುವ ತಂತ್ರ ಹೆಣೆದು ನಡೆಸಿರುವ ಸಂಭಾಷಣೆಯ ಸೀಡಿ ಬಯಲಾಗಿರುವ ಬಗ್ಗೆ ಬಜೆಟ್ ವಿಶ್ಲೇಷಣೆ ಕಾರ್ಯಕ್ರಮ ಬಳಿಕ ಸುದ್ದಿಗಾರರು ಕೇಳಿದ ಪ್ರಶ್ನೆಗೆ, ಬಿಎಸ್ ಯಡಿಯೂರಪ್ಪ ಹಾಗೂ ಅನಂತಕುಮಾರ್ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.