Advertisement

ಹರೇಕಳದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರ ಸಮಾವೇಶ

12:46 PM Nov 27, 2017 | |

ಹರೇಕಳ: ಹರೇಕಳ ಸಹಿತ ಮಂಗಳೂರು ಕ್ಷೇತ್ರದ ಪ್ರತೀ ಮೂಲೆ ಮೂಲೆಗೆ ರಸ್ತೆ ಸಂಪರ್ಕ ಮತ್ತು ಅಭಿವೃದ್ಧಿ ಕಾರ್ಯ ಭರದಿಂದ ಸಾಗುತ್ತಿದ್ದು, ಮುಂದಿನ ದಿನಗಳಲ್ಲಿ ಮುಖ್ಯ ಯೋಜನೆಯಾಗಿ 24 ಗಂಟೆಗಳ ಕಾಲ ನಿರಂತರವಾಗಿ ಕುಡಿಯುವ ನೀರನ್ನು ಪೂರೈಸುವ ನಿಟ್ಟಿನಲ್ಲಿ ನೀಲಿ ನಕ್ಷೆ ರೂಪಿಸಲಾಗಿದೆ ಎಂದು ಆಹಾರ ಸಚಿವ ಯು.ಟಿ. ಖಾದರ್‌ ತಿಳಿಸಿದರು. ಹರೇಕಳ ಗ್ರಾಮ ಸಮಿತಿ ಆಶ್ರಯದಲ್ಲಿ ಕಡವಿನ ಬಳಿ ನಡೆದ ಕಾಂಗ್ರೆಸ್‌ ಕಾರ್ಯಕರ್ತರು ಮತ್ತು ಅಭಿಮಾನಿಗಳ ಸಮಾವೇಶದಲ್ಲಿ ಅವರು ಮಾತನಾಡಿದರು.

Advertisement

ಈ ಹಿಂದೆ ಹರೇಕಳ ಗ್ರಾಮ ಅಭಿವೃದ್ಧಿಯಲ್ಲಿ ಹಿಂದಿತ್ತು. ಆದರೆ ಕಳೆದ ನಾಲ್ಕು ವರ್ಷಗಳಲ್ಲಿ ಗ್ರಾಮದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಸರಕಾರದ ಅನುದಾನದೊಂದಿಗೆ ಸಣ್ಣ ಪುಟ್ಟ ಕೆಲಸಗಳಿಗೂ ತನ್ನನ್ನೇ ಕಾಯಬಾರದು ಎನ್ನುವ ನೆಲೆಯಲ್ಲಿ ಗ್ರಾಮ ವಿಕಾಸ ಯೋಜನೆಯಡಿ ಪಂಚಾಯತ್‌ಗೆ ಅನುದಾನ ನೀಡಲಾಗುತ್ತಿದೆ ಎಂದರು.

ಸೇತುವೆಯೊಂದಿಗೆ ಡ್ಯಾಂ ರಚನೆ
ಹರೇಕಳ ಕಡವಿನ ಬಳಿಯಿಂದ ಅಡ್ಯಾರ್‌ ಸಂಪರ್ಕಿಸುವ ನಿಟ್ಟಿನಲ್ಲಿ, ಯೋಜನೆ ರೂಪಿಸಿ ಸರಕಾರದ ಮಂಜೂರಾತಿ ನೀಡಿದ್ದು, ಈ ಯೋಜನೆಯಲ್ಲಿ ಹರೇಕಳದಿಂದ ಅಡ್ಯಾರ್‌ ಸೇತುವೆಯೊಂದಿಗೆ ಡ್ಯಾಂ ರಚನೆಯ ಉದ್ದೇಶವನ್ನು ಇಟ್ಟುಕೊಂಡಿದ್ದು, ಈ ಯೋಜನೆ ಕಾರ್ಯಗತಗೊಂಡರೆ ಹರೇಕಳದ ಚಿತ್ರಣವೇ ಬದಲಾಗಲಿದೆ ಎಂದು ತಿಳಿಸಿದರು.

ಇದರೊಂದಿಗೆ ಹರೇಕಳ ಪಾವೂರು ಭಂಡಾರಮನೆ ಸಂಪರ್ಕ ರಸ್ತೆಗೆ ಸ್ಥಳೀಯರು ಜಮೀನು ಬಿಟ್ಟುಕೊಡಲು ಒಪ್ಪಿದ್ದು, 60 ಲಕ್ಷ ರೂಪಾಯಿ ಅನುದಾನ ಮೀಸಲಿಡಲಾಗಿದೆ ಎಂದ ಅವರು ಗ್ರಾಮಕ್ಕೆ ವಿವಿಧ ಯೋಜನೆಯಡಿ ಬೋಟು ಜೆಟ್ಟಿ ಸಹಿತ ಅಭಿವೃದ್ಧಿ ಕೆಲಸ ನಡೆಸಲಾಗಿದೆ. ಮುಂದಿನ ದಿನಗಳಲ್ಲಿ ಹಕ್ಕುಪತ್ರ ವಿತರಣೆ ಮಾಡುವ ಮೂಲಕ ಬಡವರು ತಮ್ಮ ಮನೆಯ ಹಕ್ಕನ್ನು ಪಡೆಯಲಿದ್ದಾರೆ ಎಂದರು.

ಬ್ಲಾಕ್‌ ಕಾಂಗ್ರೆಸ್‌ ಉಪಾಧ್ಯಕ್ಷ ಮಹಮ್ಮದ್‌ ಮುಸ್ತಫಾ ಮಾತನಾಡಿ, 15 ವರ್ಷಗಳಿಂದ ಕಾಂಗ್ರೆಸ್‌ ಶಾಸಕರು ಹರೇಕಳಕ್ಕೆ ಸಾಕಷ್ಟು ಅನುದಾನದ ಮೂಲಕ ಗ್ರಾಮದ ಚಿತ್ರಣವನ್ನೇ ಬದಲಿಸಿದ್ದಾರೆ. ಆದರೆ 25 ವರ್ಷಗಳಿಂದ ಬಿಜೆಪಿ ಸಂಸದರಿದ್ದು ಗ್ರಾಮಕ್ಕೆ ನೀಡಿದ ಕೊಡುಗೆ ಬಗ್ಗೆ ಮತದಾರರು ಪ್ರಶ್ನಿಸಬೇಕಿದೆ. ಹಿಂದುತ್ವ ಹೆಸರಲ್ಲಿ ಮತ ಪಡೆದು ಹಿಂದುಗಳ ಧಾರ್ಮಿಕ ಕ್ಷೇತ್ರಕ್ಕೂ ಯಾವುದೇ ಕೊಡುಗೆ ನೀಡಿಲ್ಲ ಎಂದು ಆರೋಪಿಸಿದರು.

Advertisement

ಉಳ್ಳಾಲ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸಂತೋಷ್‌ ಶೆಟ್ಟಿ ಅಸೈಗೋಳಿ ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಪಂಚಾಯತ್‌ ಅಧ್ಯಕ್ಷೆ ಅನಿತಾ ಡಿ’ಸೋಜಾ, ಉಪಾಧ್ಯಕ್ಷ ಮಹಾಬಲ ಹೆಗ್ಡೆ, ಸದಸ್ಯರಾದ ಎಂ.ಪಿ. ಮಜೀದ್‌, ಅಬ್ದುಲ್‌ ಸತ್ತಾರ್‌, ಬಶೀರ್‌ ಉಂಬುದ, ಸಿಂಥಿಯಾ ಮೆನೇಜಸ್‌, ತಾಲೂಕು ಪಂಚಾಯತ್‌ ಸದಸ್ಯ ಅಬ್ದುಲ್‌ ಜಬ್ಟಾರ್‌ ಬೋಳಿಯಾರ್‌, ಸಿದ್ಧಿಕ್‌ ಕೊಳಂಗರೆ, ಬ್ಲಾಕ್‌ ಕಾಂಗ್ರೆಸ್‌ ಸಂಘಟನಾ ಕಾರ್ಯದರ್ಶಿಗಳಾದ ಇಕ್ಬಾಲ್‌ ಸಾಮಾಣಿಗೆ, ಸಲೀಂ ಮೇಘಾ ಅಸೈಗೋಳಿ, ಅಲ್ಪಸಂಖ್ಯಾಕ ಘಟಕದ ಜಿಲ್ಲಾಧ್ಯಕ್ಷ ಎನ್‌.ಎಸ್‌. ಕರೀಂ, ಕ್ಷೇತ್ರ ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷ ಆಲ್ವಿನ್‌ ಡಿ’ಸೋಜಾ, ಅಬ್ದುಲ್‌ ಮಜೀದ್‌ ರಾಜ್‌ ಕಮಲ್‌, ದಾಮೋದರ ಕೋಟ್ಯಾನ್‌, ಝಕರಿಯಾ ಮಲಾರ್‌, ಕೊಣಾಜೆ ಗ್ರಾ.ಪಂ. ಸದಸ್ಯ ಅಬ್ದುಲ್‌ ಖಾದರ್‌, ಕಿನ್ಯ ಗ್ರಾಮ ಪಂಚಾಯತ್‌ ಉಪಾಧ್ಯಕ್ಷ ಸಿರಾಜ್‌ ಕಿನ್ಯ, ಕೊಣಾಜೆ ಗ್ರಾಮ ಪಂಚಾಯತ್‌ ಅಧ್ಯಕ್ಷ ಶೌಕತ್‌ ಆಲಿ, ಮಂಜನಾಡಿ ಗ್ರಾಮ ಪಂಚಾಯತ್‌ ಅಧ್ಯಕ್ಷ ಮಹಮ್ಮದ್‌ ಅಸೈಗೋಳಿ ಮತ್ತಿತರರು ಉಪಸ್ಥಿತರಿದ್ದರು. ಹರೇಕಳ ಗ್ರಾಮ ಕಾಂಗ್ರೆಸ್‌ ಅಧ್ಯಕ್ಷ ಬದ್ರುದ್ದೀನ್‌ ಸ್ವಾಗತಿಸಿದರು. ಕೊಣಾಜೆ ಗ್ರಾ.ಪಂ. ಸದಸ್ಯ ನಝರ್‌ ಷಾ ಪಟ್ಟೋರಿ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next