Advertisement

ದೇವೇಗೌಡರ ಕೋಟೆಗೆ ಕಾಂಗ್ರೆಸ್‌ ಚೆಕ್‌

05:38 AM Mar 25, 2019 | Vishnu Das |

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್‌-ಜೆಡಿಎಸ್‌ ನಡುವೆ ಸೀಟು ಹಂಚಿಕೆ ಸಂಬಂಧ ಆರಂಭವಾಗಿದ್ದ ಬಿಕ್ಕಟ್ಟು ಸೀಟು ಹಂಚಿಕೆ ಬಳಿಕವೂ ಮುಗಿಯುವ ಲಕ್ಷಣ ಕಾಣದಿರುವುದು ಉಭಯ ಪಕ್ಷಗಳ ನಾಯಕರಲ್ಲಿ ಆತಂಕ ಸೃಷ್ಟಿಸಿದೆ. ಕದನಕಣದಲ್ಲಿ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಕುಟುಂಬದ ಎಲ್ಲ ಸದಸ್ಯರಿಗೂ ಕಾಂಗ್ರೆಸ್‌ “ಚೆಕ್‌’ ಇಟ್ಟಂಥ ವಾತಾವರಣ ಕಾಣಿಸಿಕೊಳ್ಳುತ್ತಿದೆ.

Advertisement

ಉಭಯ ಪಕ್ಷಗಳ ನಾಯಕರು ಪರಸ್ಪರ ಒಪ್ಪಿ ಕೊಂಡು ಹಂಚಿಕೊಂಡ ಕ್ಷೇತ್ರಗಳಲ್ಲಿ ಕಾರ್ಯಕರ್ತರ ನಡುವೆ ಸಮನ್ವಯತೆ ಕಾಣೆಯಾಗಿದೆ. ತುಮಕೂರಿ ನಲ್ಲಿ ದೇವೇಗೌಡ ವಿರುದ್ಧ ಕಾಂಗ್ರೆಸ್‌ನ ಹಾಲಿ ಸಂಸದ ಮುದ್ದಹನುಮೇಗೌಡ ಕಣಕ್ಕಿಳಿಯಲು ನಿರ್ಧರಿಸಿದ್ದಾರೆ. ಹಾಸನದಲ್ಲಿ ಮಾಜಿ ಕಾಂಗ್ರೆಸಿಗ ಎ. ಮಂಜು ಈಗ ಬಿಜೆಪಿ ಮೂಲಕ ಕಣಕ್ಕಿಳಿದು ಪ್ರಜ್ವಲ್‌ ರೇವಣ್ಣಗೆ ಬಿಸಿ ತುಪ್ಪವಾಗಿದ್ದಾರೆ. ಇನ್ನೊಂದೆಡೆ ಮಂಡ್ಯದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರೇ ಸುಮಲತಾ ಪರ ಪ್ರಚಾರಕ್ಕಿಳಿದಿರುವುದು ಗೌಡರ ಕುಟುಂಬವನ್ನು ಹತಾಶೆಗೆ ತಳ್ಳಿದೆ.

ಮಂಡ್ಯದಲ್ಲಿ ಸಮನ್ವಯವೇ ಸವಾಲು!
ಕಾಂಗ್ರೆಸ್‌- ಜೆಡಿಎಸ್‌ನ ನಾಯಕರಷ್ಟೇ ಒಂದಾ ಗಿದ್ದು, ಕೆಳಹಂತದ ಕಾರ್ಯಕರ್ತರು ಒಂದಾಗಿಲ್ಲ ಎಂಬ ಮಾತಿದೆ. ಆದರೆ ಈಗ ನಾಯಕರ ಮಟ್ಟದಲ್ಲೂ ಹೊಂದಾಣಿಕೆಯಿಲ್ಲ ಎಂಬುದನ್ನು ಸಾಬೀತುಪಡಿಸುವಂತಹ ಘಟನೆಗಳಾಗುತ್ತಿವೆ. ಮಾಜಿ ಸಚಿವ ಕಾಂಗ್ರೆಸ್‌ನ ಎನ್‌.ಚೆಲುವರಾಯ ಸ್ವಾಮಿ ಅವರು ಶಿವಪ್ರಕಾಶ್‌ ಬಾಬು ಅವರಿಗೆ ಕರೆ ಮಾಡಿ ಸುಮಲತಾ ಅವರನ್ನು ಬೆಂಬಲಿಸುವಂತೆ ಒತ್ತಡ ಹೇರಿದ್ದಾರೆ ಎನ್ನಲಾದ ಆಡಿಯೋ ಈಗ ರಾಜಕಾರಣದಲ್ಲಿ ತಲ್ಲಣ ಸೃಷ್ಟಿಸಿದೆ.

ಇನ್ನು ಮೈತ್ರಿ ಪಕ್ಷಗಳ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರು ಸೋಮವಾರ ನಿಖೀಲ್‌ ಕುಮಾರಸ್ವಾಮಿ ಮಂಡ್ಯ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವ ವೇಳೆ ಗೈರಾಗ ಲಿದ್ದಾರೆ ಎಂಬುದು ಇಂಥ ಆರೋಪ  ಗಳಿಗೆ ಮತ್ತಷ್ಟು ಪುಷ್ಟಿ ನೀಡುವಂತಿದೆ.

ಹಾಸನದಲ್ಲೂ ಅಪಸ್ವರ

Advertisement

ದೇವೇಗೌಡ ಹಾಸನದಿಂದ ಈ ಬಾರಿ ಸ್ಪರ್ಧಿಸುವುದಿಲ್ಲ ಹಾಗೂ ಅವರ ಮೊಮ್ಮಗ ಪ್ರಜ್ವಲ್‌ ರೇವಣ್ಣ ಸ್ಪರ್ಧಿಸುತ್ತಿದ್ದಾರೆ ಎಂದು ಖಾತರಿಯಾಗುತ್ತಿದ್ದಂತೆ ಮಾಜಿ ಸಚಿವ ಕಾಂಗ್ರೆಸ್‌ನ ಎ.ಮಂಜು ಬಿಜೆಪಿ ಸೇರ್ಪಡೆಯಾಗಿ ಅಭ್ಯರ್ಥಿಯಾಗಿ ಪ್ರಚಾರ ಆರಂಭಿಸಿದ್ದಾರೆ. ಅಲ್ಲದೇ ಕ್ಷೇತ್ರದಲ್ಲಿ ಜೆಡಿಎಸ್‌ ವಿರೋಧಿಗಳು, ಮೈತ್ರಿ ಸರಕಾರದ ವಿರೋಧಿ ಕಾಂಗ್ರೆಸಿಗರನ್ನು ಸೆಳೆಯುವ ಕಾರ್ಯದಲ್ಲಿ ನಿರತರಾಗಿದ್ದಾರೆ.

ಮಂಜು ಅವರಿಗೆ ಮೂಲ ಕಾಂಗ್ರೆಸ್‌ನ ಹಲವರು ಪರೋಕ್ಷ ಬೆಂಬಲ ನೀಡಲಿದ್ದಾರೆ ಎಂಬ ಮಾತುಗಳು ಜೆಡಿಎಸ್‌ನಲ್ಲಿ ತಳಮಳ ಉಂಟು ಮಾಡಿದೆ. ಈ ಸೂಕ್ಷ್ಮ ಅರಿತ ಸಚಿವ ಎಚ್‌.ಡಿ.ರೇವಣ್ಣ ಅವರು ಕಾಂಗ್ರೆಸ್‌ ನಾಯಕರ ಮನೆಗಳಿಗೆ ಎಡತಾಕಿ ಬೆಂಬಲ ಕೋರುತ್ತಿದ್ದಾರೆ. ಚನ್ನರಾಯಪಟ್ಟಣದ ಪುಟ್ಟೇಗೌಡ, ಗಂಡಸಿ ಶಿವರಾಂ ಅವರ ಮನೆಗೆ ತೆರಳಿ ಪುತ್ರನನ್ನು ಬೆಂಬಲಿಸುವಂತೆ ಮನವಿ ಮಾಡಿದ್ದಾರೆ. ಹಳೆಯ ವೈರತ್ವ ಮರೆತು ಕಾಂಗ್ರೆಸ್‌ ಮುಖಂಡರ ಮನೆಗಳಿಗೆ ದಾಂಗುಡಿ ಇಡುತ್ತಿದ್ದಾರೆ. ಈ ಹಿಂದೆ ಜೆಡಿಎಸ್‌ ಆಡಳಿತದಲ್ಲೇ ನಾನಾ ಪೊಲೀಸ್‌ ಪ್ರಕರಣ ದಾಖಲಾಗಿ ಸಂಕಷ್ಟಕ್ಕೆ ಸಿಲುಕಿದ್ದ ಕಾಂಗ್ರೆಸ್‌ ಮುಖಂಡರು, ಕಾರ್ಯಕರ್ತರನ್ನು ಸೆಳೆಯಲು ಬಿಜೆಪಿ ಕಸರತ್ತು ನಡೆಸಿದೆ.

Advertisement

Udayavani is now on Telegram. Click here to join our channel and stay updated with the latest news.

Next