ಕೊರಟಗೆರೆ: ಇಲ್ಲಿ ಬುಧವಾರ ನಡೆದ ಜನಸಂಕಲ್ಪ ಯಾತ್ರೆಯಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ಅವರು ಮಾಡಿದ ಭಾಷಣವನ್ನು ತಿರುಚಿ ಪರಮೇಶ್ವರರನ್ನು ಮತ್ತೆ ಗೆಲ್ಲಿಸಿ ಎಂಬ 28 ಸೆಕೆಂಡಿನ ವಿಡಿಯೋ ಫೇಸ್ಬುಕ್ ಮತ್ತು ವಾಟ್ಸಪ್ ಗ್ರೂಪಿನಲ್ಲಿ ಹರಿದಾಡಿದ್ದು, ಈ ಕುರಿತು ಕೊರಟಗೆರೆ ಬಿಜೆಪಿ ಮಂಡಲದಿಂದ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ಸಿಎಂ ಮತ್ತು ಬಿಜೆಪಿ ಪಕ್ಷವನ್ನು ಕಾಂಗ್ರೆಸ್ ಪಕ್ಷದವರು ವಿನಾಕಾರಣ ಸಾಮಾಜಿಕ ಜಾಲತಾಣದಲ್ಲಿ ತೇಜೊವಧೆ ಮಾಡಿದ್ದಾರೆ ಎಂದು ಆರೋಪಿಸಿ ಕಾನೂನು ಕ್ರಮಕ್ಕಾಗಿ ಬಿಜೆಪಿ ಕಾರ್ಯಕರ್ತರು ಆಗ್ರಹಿಸಿದ್ದಾರೆ.
ಜನಸಂಕಲ್ಪ ಯಾತ್ರೆಯಲ್ಲಿ ಸಿಎಂ ಮಾಡಿದ ಭಾಷಣವನ್ನು ಉದ್ದೇಶ ಪೂರ್ವಕವಾಗಿ ಕಾಂಗ್ರೇಸ್ ಪಕ್ಷದ ಕಾರ್ಯಕರ್ತರು ತಿರುಚಿದ್ದಾರೆ. ಶಾಂತಿಯುತ ಸಮಾಜದಲ್ಲಿ ವಿನಾಕಾರಣ ಗೊಂದಲ ಸೃಷ್ಟಿಸುವ ಕೆಲಸ ಮಾಡಿದ್ದಾರೆ. ಬಿಜೆಪಿ ಪಕ್ಷದ ವಿರೋಧ ಆಗಿರುವ ವಿಡಿಯೋ ವಿಚಾರವನ್ನು ಗೃಹ ಸಚಿವರು ಮತ್ತು ಸಿಎಂ ಗಮನಕ್ಕೆ ತರಲಾಗಿದೆ. 48 ಗಂಟೆಯೊಳಗೆ ಆರೋಪಿಯನ್ನು ಪತ್ತೆಹಚ್ಚಿ ಕಾನೂನು ಕ್ರಮಕ್ಕೆ ಆಗ್ರಹ ಮಾಡಿದ್ದೇವೆ ಎಂದು ಬಿಜೆಪಿ ಮುಖಂಡ ಅನಿಲ್‌ಕುಮಾರ್ ಹೇಳಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಗೌರವಾನ್ವಿತ ಮುಖ್ಯಮಂತ್ರಿಗೆ ಕಿಡಿಗೇಡಿಗಳು ವಿನಾಕಾರಣ ತೇಜೋವಧೆ ಮಾಡಿದ್ದಾರೆ. ಕಾಂಗ್ರೆಸ್ ಶಾಸಕ ಡಾ.ಜಿ.ಪರಮೇಶ್ವರ ಬೆಂಬಲಿಸಿ ಎಂಬ ವಿಡಿಯೋ ತುಣುಕು ವಾಟ್ಸಪ್ ಮತ್ತು ಫೇಸ್ ಬುಕ್‌ನಲ್ಲಿ ಹರಿದಾಡಿದೆ. ಕಿಡಿಗೇಡಿಗಳ ಕೃತ್ಯವನ್ನು ಬಿಜೆಪಿ ಪಕ್ಷವು ಸಹಿಸುವ ಮಾತೇ ಇಲ್ಲ. ಕಾನೂನು ರೀತಿಯ ಕ್ರಮಕ್ಕಾಗಿ ಈಗಾಗಲೇ ಪೊಲೀಸ್ ಠಾಣೆಗೆ ದೂರು ನೀಡಿದ್ದೇವೆ ಎಂದು ಕೊರಟಗೆರೆ ಬಿಜೆಪಿ ಮಂಡಲ ಅಧ್ಯಕ್ಷ ಎಸ್.ಪವನಕುಮಾರ್ ಹೇಳಿದ್ದಾರೆ.