ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಾದ ಹಿನ್ನಡೆ, ಅನಂತರ ಡಿಸಿಎಂ ಹುದ್ದೆ ಸೃಷ್ಟಿ ಮತ್ತಿತರ ವಿಷಯಗಳಲ್ಲಿ ವ್ಯಕ್ತವಾದ ಬಣಗಳ ಬಡಿದಾಟದಿಂದ ತೀವ್ರ ಬೇಸರಗೊಂಡಿರುವ ಕಾಂಗ್ರೆಸ್‌ನ ರಾಷ್ಟ್ರೀಯ ನಾಯಕರು ಮುಂದಿನ 2 ತಿಂಗಳಲ್ಲಿ ಸಚಿವರ ಕಾರ್ಯವೈಖರಿ ಬದಲಾಗದಿದ್ದರೆ ಸ್ಥಾನ ತೊರೆಯಲು ಸಜ್ಜಾಗುವಂತೆ ಸೂಚಿಸಿದ್ದಾರೆ. ಈ ಮೂಲಕ ಸಚಿವ ಸಂಪುಟ ಪುನಾರಚನೆಯ ಸ್ಪಷ್ಟ ಸುಳಿವು ನೀಡಿದ್ದಾರೆ.
ಮುಖ್ಯಮಂತ್ರಿಯವರ ಅಧಿಕೃತ ನಿವಾಸ “ಕಾವೇರಿ’ಯಲ್ಲಿ ರವಿವಾರ ನಡೆದ ಸಭೆಯಲ್ಲಿ ರಾಜ್ಯ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೇವಾಲ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಎಲ್ಲ ಸಚಿವರಿಗೆ ಅಕ್ಷರಶಃ ಚಾಟಿ ಬೀಸಿದರು. ಚುನಾವಣೆಗೆ ಮೊದಲೇ ಸಚಿವರ ಜವಾಬ್ದಾರಿ ಯನ್ನು ನೆನಪಿಸಲಾಗಿತ್ತು.
ಮೌಲ್ಯಮಾಪನದ ಎಚ್ಚರಿಕೆಯನ್ನೂ ನೀಡಲಾಗಿತ್ತು. ಸ್ವತಃ ನೀವು ಹೇಳಿದವರಿಗೇ ಟಿಕೆಟ್ ಕೂಡ ನೀಡಲಾಯಿತು. ಆದಾಗ್ಯೂ ನಿರೀಕ್ಷಿತ ಫಲಿತಾಂಶ ಬರಲಿಲ್ಲ. ಮತ್ತೂಂದೆಡೆ ಬಣಗಳ ಬಡಿದಾಟವೂ ನಿಂತಿಲ್ಲ. ಈ ಧೋರಣೆಯನ್ನು ಸಹಿಸಲು ಸಾಧ್ಯವಿಲ್ಲ. 2 ತಿಂಗಳುಗಳಲ್ಲಿ ಕಾರ್ಯವೈಖರಿ ಬದಲಾಗಬೇಕು. ಇಲ್ಲದಿದ್ದರೆ ನಿಮ್ಮ ಬದಲಿಗೆ ಬೇರೆಯವರನ್ನು ತರಲಾಗುವುದು ಎಂದು ಗಡುವು ನೀಡಿದರು.
ಸಚಿವರು ಮತ್ತು ನಿಗಮ-ಮಂಡಳಿಗಳ ಅಧ್ಯಕ್ಷರ ನಡುವೆ ಸಮನ್ವಯ ಇಲ್ಲ. ಶಾಸಕರೊಂದಿಗೂ ತಿಕ್ಕಾಟ ಮುಂದುವರಿದಿದ್ದು, ಈಗಲೂ ದೂರುಗಳು ಬರುತ್ತಿವೆ. ಕಾರ್ಯಕರ್ತರೊಂದಿಗೂ ಮುಖ ಕೊಟ್ಟು ಮಾತನಾಡುವುದಿಲ್ಲ ಎಂಬ ಆರೋಪಗಳಿವೆ. ಇಡೀ ವರ್ಷದ ಇಲಾಖೆಗಳ ಸಾಧನೆಯೂ ಅಷ್ಟಕ್ಕಷ್ಟೇ. ಸತ್ಯಶೋಧನ ಸಮಿತಿ ಭೇಟಿ ವೇಳೆಯೂ ಸಚಿವರ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತವಾಗಿದೆ. ಈ ಎಲ್ಲ ಅಂಶಗಳ ಹಿನ್ನೆಲೆಯಲ್ಲಿ “ಪ್ರಗತಿಪತ್ರ’ ತೃಪ್ತಿಕರವಾಗಿಲ್ಲ. ಸುಧಾರಣೆಗೆ ಇದು ಕೊನೆಯ ಅವಕಾಶ. ಎರಡು ತಿಂಗಳುಗಳ ಅನಂತರ ಮತ್ತೂಮ್ಮೆ ಮೌಲ್ಯಮಾಪನ ಮಾಡಿ ಹೈಕಮಾಂಡ್ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ಎಚ್ಚರಿಸಿರುವುದಾಗಿ ಮೂಲಗಳು ತಿಳಿಸಿವೆ.
ಎಲ್ಲ ಸಚಿವರು ಶಾಸಕರು, ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸರಿಯಾಗಿ ಕಾರ್ಯನಿರ್ವಹಿಸಿದ್ದರೆ ಲೋಕಸಭಾ ಚುನಾವಣೆಯಲ್ಲಿ 15 ಸ್ಥಾನಗಳನ್ನು ಗೆಲ್ಲುವ ಎಲ್ಲ ಅವಕಾಶಗಳಿದ್ದವು. ಆದರೆ ಅಂತಿಮವಾಗಿ ಕೈಚೆಲ್ಲಿದೆವು. ಮುಂದೆ ಸ್ಥಳೀಯ ಸಂಸ್ಥೆಗಳ ಚುನಾವಣೆ ಇದೆ. ಹಾಗಾಗಿ ಪುನರಾವರ್ತನೆ ಆಗದಂತೆ ಎಚ್ಚರ ವಹಿಸಬೇಕು ಎಂದು ತಿಳಿಸಿದ್ದಾರೆ.
ಸಚಿವರ ಕಾರ್ಯವ್ಯಾಪ್ತಿ ತವರು ಜಿಲ್ಲೆಗಳಿಗೆ ಸೀಮಿತವಾಗುತ್ತಿದೆ. ರಾಜ್ಯ ಪ್ರವಾಸ ಮಾಡಿ ಇಲಾಖೆಯಲ್ಲಿ ಸುಧಾರಣೆ ತರಬೇಕು. ಶಾಸಕರು, ಕಾರ್ಯಕರ್ತರ ಅಹವಾಲುಗಳಿಗೆ ಆದ್ಯತೆ ನೀಡಬೇಕು. ದಸರಾ ವೇಳೆಗೆ ಮತ್ತೊಂದು ಮೌಲ್ಯಮಾಪನ ನಡೆಸಲಾಗುವುದು. ಇದೇ ಅವಧಿಯಲ್ಲಿ ಸಚಿವರುಗಳ ಬದಲಾದ ಕಾರ್ಯವೈಖರಿ ಬಗ್ಗೆ ಅಭಿಪ್ರಾಯಗಳನ್ನೂ ಸಂಗ್ರಹಿಸಲಾಗುವುದು ಎಂದು ಸೂಚಿಸಿರುವುದಾಗಿ ಪಕ್ಷದ ಮೂಲಗಳು ತಿಳಿಸಿವೆ.
10-12 ಸಚಿವರೊಂದಿಗೆ ಪ್ರತ್ಯೇಕ ಸಭೆ?
ಈ ಮಧ್ಯೆ 10-12 ಸಚಿವರನ್ನು ಪ್ರತ್ಯೇಕವಾಗಿ ಕರೆಸಿಕೊಂಡು ಪಕ್ಷದ ರಾಷ್ಟ್ರೀಯ ನಾಯಕರು ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ತುಂಬಾ ಅಸಮಾಧಾನಗಳು ಅಥವಾ ಸಮನ್ವಯ ಕೊರತೆ ಕಂಡುಬಂದ ಸಚಿವರನ್ನು ಪ್ರತ್ಯೇಕವಾಗಿ ಕರೆಸಿ ತಮ್ಮ ಕಾರ್ಯವೈಖರಿ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಲ್ಲದೆ, ಸುಧಾರಣೆಗೆ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.
ಸಚಿವರ ಕಾರ್ಯವೈಖರಿಯ ಮೌಲ್ಯಮಾಪನ ನಮ್ಮ ಇಂದಿನ ಕಾರ್ಯಸೂಚಿ ಯಲ್ಲಿ ಇರಲೇ ಇಲ್ಲ. ಅದರ ಬಗ್ಗೆ ನಾವ್ಯಾರೂ ಚರ್ಚಿ ಸಿಯೇ ಇಲ್ಲ. ಇಂದಿನ ಸಭೆಯ ವಿಷಯ ಅದಾಗಿರಲಿಲ್ಲ.
– ಕೆ.ಸಿ. ವೇಣುಗೋಪಾಲ್,
ಎಐಸಿಸಿ ಪ್ರಧಾನ ಕಾರ್ಯದರ್ಶಿ