ಬಾಗಲಕೋಟೆ: ತೀವ್ರ ಕುತೂಹಲ ಮೂಡಿಸಿದ್ದ ಡಿಸಿಸಿ ಬ್ಯಾಂಕ್ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು, ಅಧ್ಯಕ್ಷರಾಗಿ ಕಾಂಗ್ರೆಸ್ ನ ಮಾಜಿ ಸಚಿವ ಅಜಯಕುಮಾರ ಸರನಾಯಕ, ಉಪಾಧ್ಯಕ್ಷರಾಗಿ ಮುರಗೇಶ ಕಡ್ಲಿಮಟ್ಟಿ ಆಯ್ಕೆಯಾದರು.
ಡಿಸಿಸಿ ಬ್ಯಾಂಕ್ ಮತ್ತೆ ಕಾಂಗ್ರೆಸ್ ಮಡಿಲಿಗೆ ಬಂದಿದ್ದು, ಬಿಜೆಪಿ ಅತೀಹೆಚ್ಚು ನಿರ್ದೇಶಕ ಸ್ಥಾನ ಹೊಂದಿದ್ದರೂ, ಅಡ್ಡ ಮತದಾನದ ಪರಿಣಾಮ ಸೋಲಬೇಕಾಯಿತು. ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದು, ಬಿಜೆಪಿಗೆ ಭಾರಿ ಮುಖಭಂಗವಾಗಿದೆ.
ಕಳೆದ ನ.17ರಂದೇ ಮತದಾನ ನಡೆದಿತ್ತಾದರೂ, ಸರ್ಕಾರದಿಂದ ನಾಮನಿರ್ದೇಶನಗೊಂಡ ಓರ್ವ ನಿರ್ದೇಶಕರ ವಿವಾದ ಕೋರ್ಟ್ ಮೆಟ್ಟಿಲೇರಿದ್ದರಿಂದ ಫಲಿತಾಂಶ ಪ್ರಕಟಿಸಿರಲಿಲ್ಲ. ಹೈಕೋರ್ಟ್ ಆದೇಶದನ್ವಯ ಶುಕ್ರವಾರ ಫಲಿತಾಂಶ ಪ್ರಕಟಿಸಲಾಯಿತು.
ಇದನ್ನೂ ಓದಿ:ವೀರಶೈವ ಮೀಸಲಾತಿ ಶೀಘ್ರ ತೀರ್ಮಾನವಾಗದಿದ್ದರೆ ಹೋರಾಟ: ಪಂಚಮಸಾಲಿ ಪೀಠ ಸ್ವಾಮೀಜಿ ಎಚ್ಚರಿಕೆ
ಅಧ್ಯಕ್ಷ -ಉಪಾಧ್ಯಕ್ಷ ತಲಾ ಎರಡು ಮತಗಳ ಅಂತರದಿಂದ ಕಾಂಗ್ರೆಸ್ ಬೆಂಬಲಿತರು ಗೆಲವು ಸಾಧಿಸಿದರು. ಒಟ್ಟು 14 ಮತಗಳ ಎಣಿಕೆ ನಡೆದಿದ್ದು, ಕಾಂಗ್ರೆಸ್ ಅಭ್ಯರ್ಥಿಗಳಿಗೆ 8 ಮತಗಳು ಬಂದಿವೆ. ಬಿಜೆಪಿ ಅಭ್ಯರ್ಥಿಗಳಿಗೆ 6 ಮತಗಳು ಬಂದಿದ್ದು, ಬಿಜೆಪಿಯಿಂದ ಕುಮಾರ ಜನಾಲಿ ಅಧ್ಯಕ್ಷ ಸ್ಥಾನಕ್ಕೆ, ಪ್ರಕಾಶ ತಪಶೆಟ್ಟಿ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದರು.
ಬಿಜೆಪಿಯಲ್ಲಿ ಅಡ್ಡಮತದಾನ ನಡೆದಿದ್ದು, ಕೇವಲ 6 ನಿರ್ದೇಶಕರ ಬಲ ಹೊಂದಿರುವ ಕಾಂಗ್ರೆಸ್ 8 ಮತ ಪಡೆದು ಅಧಿಕಾರಕ್ಕೇರಿದೆ.
ಬಿಜೆಪಿಯ ಒಬ್ಬರು ನಿರ್ದೇಶಕರು, ಕಾಂಗ್ರೆಸ್ ನ ಅಭ್ಯರ್ಥಿಗಳಿಗೆ ಮತ ಹಾಕಿದ್ದು, ಗುಪ್ತ ಮತದಾನ ಮಾಡಿದ್ದರಿಂದ ಯಾರು ಕಾಂಗ್ರೆಸ್ ಪರವಾಗಿ ಮತ ಹಾಕಿದ್ದಾರೆ ಎಂಬುದು ಬಹಿರಂಗಗೊಂಡಿಲ್ಲ.