ಬೆಂಗಳೂರು: ಕಳೆದ ವರ್ಷದ ಸಪ್ಟೆಂಬರ್- ಅಕ್ಟೋಬರ್ ತಿಂಗಳಲ್ಲಿ ಕರ್ನಾಟಕದಲ್ಲಿ ಸಾಗಿದ್ದ ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆಯು ಇದೀಗ ಫಲ ನೀಡಿದೆ. ಯಾತ್ರೆ ಸಾಗಿದ್ದ 20 ವಿಧಾನಸಭೆ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷವು ಜಯಭೇರಿ ಸಾಧಿಸಿದೆ. ಇದು ಲೋಕಸಭಾ ಚುನಾವಣೆಗೆ ಮುನ್ನಾ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಗೆ ದೊಡ್ಡ ಬೂಸ್ಟರ್ ನೀಡಿದೆ.
ಕಳೆದ ವರ್ಷ ಸೆ.30ರಂದು ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯಲ್ಲಿ ಕರ್ನಾಟಕ ಪ್ರವೇಶಿಸಿದ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಚಾಮರಾಜನಗರ, ಮೈಸೂರು, ಮಂಡ್ಯ, ತುಮಕೂರು, ಚಿತ್ರದುರ್ಗ, ಬಳ್ಳಾರಿ ಮತ್ತು ರಾಯಚೂರು ಮೂಲಕ ಹಾದು ರಾಜ್ಯದಲ್ಲಿ ಸುಮಾರು 22 ದಿನಗಳಲ್ಲಿ 500 ಕಿಲೋಮೀಟರ್‌ಗಳಷ್ಟು ದೂರವನ್ನು ಕ್ರಮಿಸಿತ್ತು.
ಶನಿವಾರದ ಫಲಿತಾಂಶದ ಬಳಿಕ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಇದರ ಬಗ್ಗೆ ಬೆಳಕು ಚೆಲ್ಲಿದ್ದಾರೆ. ಪಾದಯಾತ್ರೆಯು 20 ವಿಧಾನಸಭಾ ಕ್ಷೇತ್ರಗಳಲ್ಲಿ ಹಾದುಹೋಯಿತು ಮತ್ತು ಅವುಗಳಲ್ಲಿ 15 ರಲ್ಲಿ ಪಕ್ಷವು ಗೆದ್ದಿದೆ ಎಂದಿದ್ದಾರೆ.
ಇದನ್ನೂ ಓದಿ:ಯಾರಾಗುತ್ತಾರೆ ವಿಪಕ್ಷ ನಾಯಕ..: ರೇಸ್ ನಲ್ಲಿ ಬೊಮ್ಮಾಯಿ, ಸುನಿಲ್, ಯತ್ನಾಳ್
ಯಾತ್ರೆ ಸಾಗಿದ ಬಳ್ಳಾರಿ (ಎಸ್‌ಟಿ), ಬಳ್ಳಾರಿ ನಗರ, ಗುಂಡ್ಲುಪೇಟೆ, ಚಳ್ಳಕೆರೆ (ಎಸ್‌ಟಿ), ಹಿರಿಯೂರು, ಮೊಳಕಾಲ್ಮೂರು (ಎಸ್‌ಟಿ), ನಾಗಮಂಗಲ, ಶ್ರೀರಂಗಪಟ್ಟಣ, ನಂಜನಗೂಡು (ಎಸ್‌ಸಿ), ನರಸಿಂಹರಾಜ, ವರುಣ, ರಾಯಪುರ ಗ್ರಾಮಾಂತರ, ಗುಬ್ಬಿ ಮತ್ತು ಮತ್ತು ಸಿರಾದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ. ಅಲ್ಲದೆ ಕಾಂಗ್ರೆಸ್ ಬೆಂಬಲಿತ ಸರ್ವೋದಯ ಕರ್ನಾಟಕ ಪಕ್ಷದ ಅಭ್ಯರ್ಥಿ ಮೇಲುಕೋಟೆಯಲ್ಲಿ ಗೆದ್ದಿದ್ದಾರೆ.
ಉಳಿದ ಐದು ಸ್ಥಾನಗಳಲ್ಲಿ ಜೆಡಿಎಸ್ ಪಕ್ಷವು ಚಾಮುಂಡೇಶ್ವರಿ, ಚಿಕ್ಕನಾಯಕನಹಳ್ಳಿ ಮತ್ತು ತುರುವೇಕೂರು ಹಾಗೂ ಭಾರತೀಯ ಜನತಾ ಪಕ್ಷ (ಬಿಜೆಪಿ) ಕೃಷ್ಣರಾಜ ಮತ್ತು ರಾಯಚೂರುಗಳನ್ನು ಗೆದ್ದಿದೆ. 2018 ರಲ್ಲಿ ಈ 20 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಕೇವಲ ಐದರಲ್ಲಿ ಗೆದ್ದಿದ್ದರೆ, ಬಿಜೆಪಿ ಒಂಬತ್ತು ಮತ್ತು ಜೆಡಿಎಸ್ 6 ಕ್ಷೇತ್ರಗಳನ್ನು ಗೆದ್ದಿತ್ತು ಎಂದು ಜೈರಾಮ್ ರಮೇಶ್ ಹೇಳಿದ್ದಾರೆ.