Advertisement

ಮೈತ್ರಿಯಿಂದಲೇ ಕಾಂಗ್ರೆಸ್‌ಗೆ ಹಿನ್ನಡೆ: ಮೊಯ್ಲಿ

09:22 PM May 30, 2019 | Lakshmi GovindaRaj |

ಚಿಕ್ಕಬಳ್ಳಾಪುರ: ಒಂದೆರೆಡು ಚುನಾವಣೆಗಳಲ್ಲಿ ಸೋತರೆ ಪಕ್ಷಕ್ಕೆ ಹಿನ್ನಡೆಯಾಗುವುದಿಲ್ಲ. 1977 ರಲ್ಲಿ ಇಂದಿರಾಗಾಂಧಿ ನೇತೃತ್ವದಲ್ಲಿ ನಡೆದ ಚುನಾವಣೆಯಲ್ಲಿ ಪಕ್ಷಕ್ಕೆ ತೀವ್ರ ಹಿನ್ನಡೆಯಾಗಿತ್ತು. ಮತ್ತೆ 1980 ರಲ್ಲಿ ಪಕ್ಷ ಪ್ರಚಂಡ ಗೆಲುವು ಸಾಧಿಸಲಿಲ್ಲವೇ ಎಂದು ಪ್ರಶ್ನಿಸಿದರು. ರಾಜ್ಯದಲ್ಲಿ ಕಾಂಗ್ರೆಸ್‌, ಜೆಡಿಎಸ್‌ ಮೈತ್ರಿಯಿಂದಲೇ ಕಾಂಗ್ರೆಸ್‌ ಪಕ್ಷಕ್ಕೆ ತೀವ್ರ ಹಿನ್ನಡೆ ಆಗಿದೆ ಎಂದು ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಹೀನಾಯ ಸೋಲಿನ ಬಗ್ಗೆ ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯ್ಲಿ ಹೇಳಿದರು.

Advertisement

ಚಿಕ್ಕಬಳ್ಳಾಪುರ ನಗರದಲ್ಲಿ ಗುರುವಾರ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿ, ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸೋಲಿನ ಬಗ್ಗೆ ಎಂ.ವೀರಪ್ಪ ಮೊಯ್ಲಿ ಪ್ರತಿಕ್ರಿಯೆ ನೀಡಿದರು.

ರಾಜ್ಯದಲ್ಲಿ ಕಾಂಗ್ರೆಸ್‌, ಜೆಡಿಎಸ್‌ ಮೈತ್ರಿ ಬಗ್ಗೆ ಕೇವಲ ಸಿದ್ದರಾಮಯ್ಯ, ಪರಮೇಶ್ವರ್‌, ಎಚ್‌.ಡಿ.ದೇವೇಗೌಡ ಹಾಗೂ ಕುಮಾರಸ್ವಾಮಿ ನಿರ್ಧಾರ ಮಾಡಿದರೆ ಸಾಲದು, ಎಲ್ಲಾ ನಾಯಕರ ಅಭಿಪ್ರಾಯ ಬಹಳ ಮುಖ್ಯ. ಮೈತ್ರಿ ರಾಜ್ಯ ಸರ್ಕಾರಕ್ಕೆ ಸೀಮಿತವಾಗಿದೆ. ಆದರೆ ಸರ್ಕಾರ ಸುಸೂತ್ರವಾಗಿ ನಡೆಯಬೇಕಾದರೆ ಸರ್ಕಾರದ ಕಾರ್ಯಕ್ರಮಗಳು ಜನ ಸಾಮಾನ್ಯರಿಗೆ ತಲುಪಬೇಕಾದರೆ ಜಿಲ್ಲಾ ಮಟ್ಟದಲ್ಲಿ ಕೂಡ ಸಮನ್ವಯ ಸಮಿತಿ ರಚನೆ ಆಗಬೇಕೆಂದು ಅಭಿಪ್ರಾಯಪಟ್ಟರು.

ಮೈತ್ರಿ ಧರ್ಮ ಪಾಲನೆ ಆಗಿಲ್ಲ: ಜಿಲ್ಲಾ ಮಟ್ಟದಲ್ಲಿ ಎರಡು ಪಕ್ಷಗಳಲ್ಲಿ ಸಮನ್ವಯ ಕೊರತೆಯಿಂದಲೇ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಧರ್ಮ ಪಾಲನೆ ಆಗಲಿಲ್ಲ. ಜಿಲ್ಲಾ ಮಟ್ಟದಲ್ಲಿ ಕೂಡ ಸಮನ್ವಯ ಸಮಿತಿ ರಚನೆ ಆಗಬೇಕು. ಇಲ್ಲದಿದ್ದರೆ ನಿರ್ವಹಣೆ ಬಹಳ ಕಷ್ಟವಾಗುತ್ತದೆ ಎಂದ ಅವರು, ಮೈತ್ರಿ ಸರ್ಕಾರದ ವಿರುದ್ಧ ಮೊಯ್ಲಿ ಪರೋಕ್ಷವಾಗಿ ಅಸಮಾಧಾನ ಹೊರ ಹಾಕಿದರು.

ಕಾಂಗ್ರೆಸ್‌, ಜೆಡಿಎಸ್‌ ಮೈತ್ರಿ ಸರ್ಕಾರಗಳ ಸಾಮಾನ್ಯ ಕನಿಷ್ಠ ಕಾರ್ಯಕ್ರಮಗಳ ಸಮಿತಿ ಅಧ್ಯಕ್ಷನಾಗಿ ನಾನು ಕಾರ್ಯನಿರ್ವಹಿಸುತ್ತಿದ್ದೆ. ಆದರೆ ಅವುಗಳ ಬಗ್ಗೆ ಪುಸ್ತಕ ರೂಪದಲ್ಲಿ ತರಲಿಲ್ಲ. ನಮ್ಮ ಕಾರ್ಯಕ್ರಮಗಳ ಬಗ್ಗೆ ಜನರಿಗೆ ತಿಳಿಸಲು ಸಾಧ್ಯವಾಗಲಿಲ್ಲ ಎಂದರು.

Advertisement

ಕೇರಳದಲ್ಲಿ ಮೈತ್ರಿ ಚೆನ್ನಾಗಿ ಲಾಭ ಆಗಿದೆ. ಅಲ್ಲಿ ಪ್ರತಿ ಹಳ್ಳಿಯಲ್ಲೂ ಕೂಡ ಮೈತ್ರಿ ರಚನೆ ಆಗಿದೆ. ಆದರೆ ನಮ್ಮಲ್ಲಿ ರಾಜ್ಯ ಮಟ್ಟದಲ್ಲಿ ಮಾತ್ರ ಮೈತ್ರಿ ಬಲಯುತವಾಗಿದೆ. ಜಿಲ್ಲಾ ಹಾಗೂ ಗ್ರಾಮೀಣ ಮಟ್ಟದಲ್ಲಿ ಮೈತ್ರಿ ಧರ್ಮ ಲೋಕಸಭಾ ಚುನಾವಣೆಯಲ್ಲಿ ಯಶಸ್ವಿಯಾಗಿಲ್ಲ ಎಂದು ಸೋಲಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ಸರ್ವಿಸ್‌ ಸೆಂಟರ್‌ ಉದ್ಘಾಟನೆ: ನಗರದ ವಾಪಸಂದ್ರದಲ್ಲಿ ಕಾಂಗ್ರೆಸ್‌ ಮುಖಂಡ ಮಂಚನಬಲೆ ಶ್ರೀಧರ್‌ ಹೊಸದಾಗಿ ಆರಂಭಿಸಿರುವ ಕಾರ್‌ ಸರ್ವಿಸ್‌ ಸೆಂಟರ್‌ನ್ನು ಉದ್ಘಾಟಿಸಲು ಆಗಮಿಸಿದ್ದ ಮಾಜಿ ಸಿಎಂ ಎಂ.ವೀರಪ್ಪ ಮೊಯ್ಲಿ, ಲೋಕಸಭಾ ಚುನಾವಣೆಯಲ್ಲಿ ಸೋಲಿನ ಬಳಿಕ ಮೊದಲ ಬಾರಿಗೆ ಚಿಕ್ಕಬಳ್ಳಾಪುರಕ್ಕೆ ಆಗಮಿಸಿ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಜಿಪಂ ಮಾಜಿ ಅಧ್ಯಕ್ಷ ಪಿ.ಎನ್‌.ಕೇಶವರೆಡ್ಡಿ, ಮಾಜಿ ಶಾಸಕ ಎಸ್‌.ಎಂ.ಮುನಿಯಪ್ಪ, ಕೋಚಿಮುಲ್‌ ಮಾಜಿ ನಿರ್ದೇಶಕ ಕೆ.ವಿ.ನಾಗರಾಜ್‌, ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಮಾಜಿ ಅಧ್ಯಕ್ಷ ಯಲುವಹಳ್ಳಿ ರಮೇಶ್‌, ಯುವ ಮುಖಂಡ ಮಂಚನಬಲೆ ಶ್ರೀಧರ್‌ ಸೇರಿದಂತೆ ಕಾಂಗ್ರೆಸ್‌ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

ಅಧ್ಯಕ್ಷರಾಗಿ ರಾಹುಲ್‌ಗಾಂಧಿ ಮುಂದುವರಿಯಲಿ: ಲೋಕಸಭಾ ಚುನಾವಣೆಯಲ್ಲಿ ಬಹುಮತ ಪಡೆದು ಎರಡನೇ ಬಾರಿಗೆ ದೇಶದ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ನರೇಂದ್ರ ಮೋದಿ ಅವರಿಗೆ ಒಳ್ಳೆಯದಾಗಲಿ ಎಂದು ಶುಭ ಹಾರೈಕೆ ಮಾಡಿದ ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯ್ಲಿ, ಕಾಂಗ್ರೆಸ್‌ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ರಾಹುಲ್‌ ಗಾಂಧಿ ಅವರೇ ಅಧ್ಯಕ್ಷರಾಗಿ ಮುಂದುವರಿಯಲಿ ಎಂದರು.

ಚುನಾವಣೆಯಲ್ಲಿ ಸೋಲು, ಗೆಲುವು ಸಾಮಾನ್ಯ. ಕಳೆದ ಲೋಕಸಭಾ ಚುನಾವಣೆಯಲ್ಲಿ 44 ಸ್ಥಾನ ಬಂದಿದ್ದವು. ಕಾಂಗ್ರೆಸ್‌ ದೇಶದಲ್ಲಿ ನೆಲಕಚ್ಚಿದೆ ಎಂದಿದ್ದರು. ಆದರೆ ಈ ಚುನಾವಣೆಯಲ್ಲಿ ಕಳೆದ ಬಾರಿಗಿಂತ ನಮಗೆ ಹೆಚ್ಚು ಸೀಟುಗಳು ಬರಲಿಲ್ಲವೇ ಎಂದು ಪ್ರಶ್ನಿಸಿದರು.

ದೇಶದಲ್ಲಿ ಬಿಜೆಪಿ ಪಕ್ಷಕ್ಕೆ ಮತದಾರರು ಬಹುಮತ ನೀಡಿದ್ದಾರೆ. ಆದರೆ ಒಂದೆರೆಡು ಚುನಾವಣೆಗಳಲ್ಲಿ ಸೋತ ಮಾತ್ರಕ್ಕೆ ಕಾಂಗ್ರೆಸ್‌ಗೆ ಹಿನ್ನಡೆ ಆಗಿದೆ ಎಂದು ಅರ್ಥವಲ್ಲ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಎದುರಿಸುವ ಶಕ್ತಿ ದೇಶದಲ್ಲಿ ರಾಹುಲ್‌ಗಾಂಧಿಗೆ ಬಿಟ್ಟರೆ ಬೇರೆ ಯಾರಿಗೂ ಇಲ್ಲ. 1980 ರಲ್ಲಿ ದೇಶದಲ್ಲಿ ಬಿಜೆಪಿಗೆ ನೆಲೆ ಇರಲಿಲ್ಲ. ಈಗ ಬಿಜೆಪಿ ಬಲವಾಗಿದೆ.
-ಎಂ.ವೀರಪ್ಪ ಮೊಯ್ಲಿ, ಮಾಜಿ ಸಂಸದ

Advertisement

Udayavani is now on Telegram. Click here to join our channel and stay updated with the latest news.

Next