ಹೊಸದಿಲ್ಲಿ: ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ನಾವು 150 ಸ್ಥಾನಗಳನ್ನು ಗೆಲ್ಲಬೇಕು ಎಂದು ಗುರಿ ಇಟ್ಟುಕೊಂಡಿದ್ದೇವೆ, ನಾವು 130ಕ್ಕೂ ಅಧಿಕ ಸ್ಥಾನ ಗೆಲ್ಲುವ ನಿರೀಕ್ಷೆಯಿದೆ ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸಮೀಕ್ಷೆ ಬಗ್ಗೆ ಮುಖ್ಯಮಂತ್ರಿಗಳು ತಮ್ಮ ಅಭಿಪ್ರಾಯ ಹೇಳಿದ್ದಾರೆ. ಅವರ ಅಭಿಪ್ರಾಯ ಬೇರೆ, ಜನರ ಅಭಿಪ್ರಾಯ ಬೇರೆ. ಮಾದರಿ ಸಮೀಕ್ಷೆ ಎಂದರೆ ಜನರ ಅಭಿಪ್ರಾಯ ಸಂಗ್ರಹಿಸಲಾಗಿರುತ್ತದೆ. ಅಂದರೆ ಮುಖ್ಯಮಂತ್ರಿಗಳು ಜನರ ಅಭಿಪ್ರಾಯ ಒಪ್ಪಿಕೊಳ್ಳಲ್ಲ ಎಂದಾಯಿತು. ಅದೇನೇ ಇದ್ದರೂ ನಾವು ಸ್ಪಷ್ಟಬಹುಮತದ ಮೂಲಕ ಗೆಲ್ಲುವುದನ್ನು ಯಾರಿಂದಲೂ ಅಲ್ಲಗೆಳೆಯಲು ಆಗುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿಯ ಆರೋಪಕ್ಕೆ ಉತ್ತರಿಸಿದ ಸಿದ್ದರಾಮಯ್ಯ, ನಾನು 75 ವರ್ಷ ಪೂರೈಸಿರುವುದು ಸತ್ಯವಲ್ಲವೆ? ಈ ಹುಟ್ಟು ಹಬ್ಬದ ಆಚರಣೆಯನ್ನು ನಾನು ಮಾಡುತ್ತಿಲ್ಲ, ನನ್ನ ಸ್ನೇಹಿತರು ಮತ್ತು ಅಭಿಮಾನಿಗಳು ಮಾಡುತ್ತಿದ್ದಾರೆ. ನಾನು ಯಾವಾಗಲೂ ಸಾಮಾಜಿಕ ನ್ಯಾಯ, ಅಹಿಂದ ಮತ್ತು ಬಡವರ ಪರವಾಗಿ ಇರುವವನು. ಎಲ್ಲರಿಗೂ ನ್ಯಾಯ ಸಿಗಬೇಕು, ಅವಕಾಶ ವಂಚಿತ ಜನರಿಗೆ ನ್ಯಾಯ ಸಿಗಬೇಕು, ಅವರು ಕೂಡ ಮುಖ್ಯ ವಾಹಿನಿಗೆ ಬರಬೇಕು ಎಂಬ ನಂಬಿಕೆ ಇಟ್ಟುಕೊಂಡು ಹಿಂದಿನಿಂದಲೂ ಅದಕ್ಕೆ ಸರಿಯಾಗಿ ನಡೆದುಕೊಂಡು ಬಂದಿದ್ದೇನೆ. ಈ ವಿಚಾರದಲ್ಲಿ ರಾಜಿಯಾಗದೆ ಹೀಗೆಯೇ ಮುಂದುವರೆಸಿಕೊಂಡು ಹೋಗುತ್ತೇನೆ ಎಂದರು.
ಕಾಂಗ್ರೆಸ್ ಪಕ್ಷಕ್ಕೆ ಇರುವಷ್ಟು ಅಭ್ಯರ್ಥಿಗಳು ಬೇರೆ ಯಾವ ಪಕ್ಷಗಳಿಗೂ ಇಲ್ಲ, ನಮಗೆ ಒಂದೊಂದು ಕ್ಷೇತ್ರದಲ್ಲಿ 10-12 ಜನ ಗೆಲ್ಲುವ ಅಭ್ಯರ್ಥಿಗಳು ಇದ್ದಾರೆ. ಕೆಲವೊಮ್ಮೆ ಇದು ಸಮಸ್ಯೆ ಆಗುತ್ತದೆ. ಎಲ್ಲರಿಗೂ ಟಿಕೆಟ್ ಕೊಡಲು ಸಾಧ್ಯವಾಗಲ್ಲ. ಹಾಗೆ ನೋಡಿದರೆ ಬಿಜೆಪಿಗೆ ಅಭ್ಯರ್ಥಿಗಳ ಕೊರತೆಯಿದೆ. ಉದಾಹರಣೆಗೆ ಮೈಸೂರು ಭಾಗದಲ್ಲಿ ಹುಣಸೂರಿನಲ್ಲಿ ಬಿಜೆಪಿ ಅಭ್ಯರ್ಥಿ ಯಾರು? ವಿಶ್ವನಾಥ್ ಈಗ ಪರಿಷತ್ ಸದಸ್ಯರಾಗಿದ್ದಾರೆ. ಕೆ.ಆರ್ ನಗರದಲ್ಲಿ, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಬಿಜೆಪಿಗೆ ಅಭ್ಯರ್ಥಿ ಯಾರಿದ್ದಾರೆ? ಇಡೀ ಮಂಡ್ಯ ಜಿಲ್ಲೆಯಲ್ಲಿ ಅವರಿಗೆ ಅಭ್ಯರ್ಥಿಗಳೇ ಇಲ್ಲ ಎಂದು ವ್ಯಂಗ್ಯವಾಡಿದರು.
ಬಿಜೆಪಿಯಲ್ಲಿ ಟಿಕೆಟ್ ಸಿಗದವರು ನಮ್ಮಲ್ಲಿಗೆ ಬರುತ್ತಾರೆ, ನಮ್ಮಲ್ಲಿ ಟಿಕೆಟ್ ಸಿಗದವರು ಬಿಜೆಪಿಗೆ ಹೋಗುತ್ತಾರೆ, ಇದೆಲ್ಲ ಚುನಾವಣಾ ಸಮಯದಲ್ಲಿ ಸಾಮಾನ್ಯ ವಿಷಯ. ಸೈದ್ಧಾಂತಿಕ ಬದ್ಧತೆ ಇರುವವರು ಪಕ್ಷ ಬಿಟ್ಟು ಹೋಗುವುದಿಲ್ಲ. ಬಿಜೆಪಿ ಮತ್ತು ಜೆಡಿಎಸ್ ನ ಹಲವರು ನನ್ನ ಸಂಪರ್ಕದಲ್ಲಿದ್ದಾರೆ. ಇನ್ನೂ ಚುನಾವಣೆಗೆ ಒಂಬತ್ತು ತಿಂಗಳಿದೆ, ಈಗಲೇ ಯಾರು ಎಂದು ಹೇಳಲಾಗುವುದಿಲ್ಲ. ಯಾರೆಲ್ಲಾ ಕಾಂಗ್ರೆಸ್ ಪಕ್ಷದ ಸಿದ್ಧಾಂತ ಒಪ್ಪಿಕೊಂಡು, ಪಕ್ಷದ ನಾಯಕತ್ವ ಒಪ್ಪಿಕೊಂಡು ಬರ್ತಾರೆ, ಪಕ್ಷಕ್ಕೆ ನಿಷ್ಠಾವಂತರಾಗಿ ಇರುವವರಿಗೆ ಟಿಕೆಟ್ ನೀಡುತ್ತೇವೆ ಎಂದರು.
ಬಿಜೆಪಿಯಲ್ಲಿ ಬಹಳಷ್ಟು ಮಂದಿ ಆರ್ ಎಸ್ಎಸ್ ನವರಿಲ್ಲ. ಎಸ್.ಟಿ ಸೋಮಶೇಖರ್ ಕಾಂಗ್ರೆಸ್ ನಲ್ಲಿದ್ದು ಬಿಜೆಪಿ ಸೇರಿದ್ದು, ಅವರನ್ನು ಆರ್.ಎಸ್.ಎಸ್ ಅನ್ನೋಕಾಗುತ್ತಾ? ಇಂಥವರು ಬಹಳಷ್ಟು ಜನ ಇದ್ದಾರೆ. ಸೋಮಶೇಖರ್ ಕಾಂಗ್ರೆಸ್ ಗೆ ಮರಳಿ ಬರುತ್ತಾರೆ ಎಂಬುದು ನನ್ನ ಮಾತಿನ ಅರ್ಥ ಅಲ್ಲ. ಜೆಡಿಎಸ್ ನಿಂದ ಬಿಜೆಪಿಗೆ ಹೋದವರೋ, ಕಾಂಗ್ರೆಸ್ ನಿಂದ ಹೋದವರೋ, ಆರ್ ಎಸ್ಎಸ್ ಮೂಲದವರೋ, ಹೀಗೆ ಯಾರೆಲ್ಲ ಪಕ್ಷಕ್ಕೆ ಬರುತ್ತಾರೆ, ನನ್ನ ಸಂಪರ್ಕದಲ್ಲಿ ಇದ್ದಾರೆ ಎಂದು ನಾನು ಈಗ ಹೇಳಲ್ಲ, ಕಾಂಗ್ರೆಸ್ ಪಕ್ಷಕ್ಕೆ ನಿಷ್ಠೆಯಿಂದ ಇರುತ್ತೇನೆ ಎಂಬ ಭರವಸೆ ನೀಡಿ ಬಂದರೆ ಖಂಡಿತಾ ಅಂಥವರಿಗೆ ಪಕ್ಷದಲ್ಲಿ ಅವಕಾಶ ಇದೆ ಎಂದು ಸಿದ್ದರಾಮಯ್ಯ ಹೇಳಿದರು.