ಅಹಮದಾಬಾದ್: ಲೋಕಸಭೆ ಚುನಾವಣೆಯಲ್ಲಿ ಅಯೋಧ್ಯೆಯಲ್ಲಿ ಬಿಜೆಪಿಯನ್ನು ಸೋಲಿಸಿದಂತೆಯೇ ಮುಂದಿನ ಚುನಾವಣೆಯಲ್ಲಿ ಗುಜರಾತ್‌ನಲ್ಲಿಯೂ ಬಿಜೆಪಿಯನ್ನು ಕಾಂಗ್ರೆಸ್ ಸೋಲಿಸಲಿದೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಶನಿವಾರ ಹೇಳಿದ್ದಾರೆ.
ಅಹಮದಾಬಾದ್‌ನಲ್ಲಿ ಪಕ್ಷದ ಕಾರ್ಯಕರ್ತರ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿ ‘ ಬಿಜೆಪಿಯವರು ನಮಗೆ ಬೆದರಿಕೆ ಹಾಕುವ ಮೂಲಕ ಮತ್ತು ನಮ್ಮ ಕಚೇರಿಗೆ ಹಾನಿ ಮಾಡುವ ಮೂಲಕ ಸವಾಲು ಹಾಕಿದ್ದಾರೆ. ನಮ್ಮ ಕಚೇರಿಗೆ ಹಾನಿ ಮಾಡಿದಂತೆ ನಾವು ಒಟ್ಟಾಗಿ ಅವರ ಸರಕಾರವನ್ನು ಒಡೆಯಲು ಹೊರಟಿದ್ದೇವೆ ಎಂದು ನಾನು ನಿಮಗೆ ಹೇಳುತ್ತೇನೆ. ನಾವು ಅಯೋಧ್ಯೆಯಲ್ಲಿ ಮಾಡಿದಂತೆ ಗುಜರಾತ್‌ನಲ್ಲಿ ಕಾಂಗ್ರೆಸ್ ಸ್ಪರ್ಧಿಸುತ್ತದೆ ಮತ್ತು ಗುಜರಾತ್‌ನಲ್ಲಿ ನರೇಂದ್ರ ಮೋದಿ ಮತ್ತು ಬಿಜೆಪಿಯನ್ನು ಸೋಲಿಸುತ್ತದೆ. ಕಾಂಗ್ರೆಸ್ ಗುಜರಾತ್ ಗೆದ್ದು ಹೊಸ ಅಧ್ಯಾಯ ಆರಂಭವನ್ನು ಮಾಡುತ್ತದೆ ಎಂದು ಬರೆದಿಟ್ಟು ಕೊಳ್ಳಿ ಎಂದು ರಾಹುಲ್ ಹೇಳಿದರು.
ಜುಲೈ 2 ರಂದು ಅಹಮದಾಬಾದ್‌ನ ಪಾಲ್ಡಿ ಪ್ರದೇಶದ ಕಾಂಗ್ರೆಸ್‌ನ ರಾಜ್ಯ ಪ್ರಧಾನ ಕಚೇರಿಯಾದ ರಾಜೀವ್ ಗಾಂಧಿ ಭವನದ ಹೊರಗೆ ಬಿಜೆಪಿಯ ಯುವ ಘಟಕದ ಸದಸ್ಯರು ಹಿಂದೂಗಳ ಬಗ್ಗೆ ಗಾಂಧಿಯವರ ಟೀಕೆಗಳನ್ನು ವಿರೋಧಿಸಲು ಅಲ್ಲಿಗೆ ಬಂದ ನಂತರ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ನಡೆದ ಘರ್ಷಣೆಯನ್ನು ಅವರು ಉಲ್ಲೇಖಿಸಿದರು. ಪೊಲೀಸರ ಪ್ರಕಾರ, ಎರಡೂ ಕಡೆಯವರು ಕಲ್ಲು ತೂರಾಟದಲ್ಲಿ ತೊಡಗಿದ್ದರು, ಇದರಲ್ಲಿ ಸಹಾಯಕ ಪೊಲೀಸ್ ಕಮಿಷನರ್ ಸೇರಿದಂತೆ ಐವರು ಪೊಲೀಸರು ಗಾಯಗೊಂಡಿದ್ದರು.
ರಾಮಮಂದಿರ ಉದ್ಘಾಟನೆಗೆ ಒಬ್ಬನೇ ಒಬ್ಬ ಸ್ಥಳೀಯ ವ್ಯಕ್ತಿಯನ್ನೂ ಆಹ್ವಾನಿಸದಿರುವುದನ್ನು ಕಂಡು ಅಯೋಧ್ಯೆಯ ಜನರು ತೀವ್ರವಾಗಿ ಆಕ್ರೋಶ ಹೊರ ಹಾಕಿದ್ದಾರೆ ಎಂದರು.
ಪ್ರಧಾನಿ ಮೋದಿ ಅವರು ಅಯೋಧ್ಯೆಯಿಂದ ಸ್ಪರ್ಧಿಸಲು ಬಯಸಿದ್ದರು, ಆದರೆ ಅವರ ಸರ್ವೇಗಳು ಸ್ಪರ್ಧೆ ಮಾಡದಂತೆ ಸಲಹೆ ನೀಡಿ, ಸೋಲು ಮತ್ತು ರಾಜಕೀಯ ಜೀವನ ಕೊನೆಗೊಳ್ಳುತ್ತದೆ ಎಂದು ಹೇಳಿದ ಬಳಿಕ ಹಿಂದೆ ಸರಿದರು ಎಂದು ಹೇಳಿದರು.