Advertisement

ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಧೂಳಿಪಟ, ಬಹುಮತದೊಂದಿಗೆ ಕೈ ಅಧಿಕಾರಕ್ಕೆ: ಎಸ್.ಆರ್. ಪಾಟೀಲ

04:52 PM Aug 12, 2021 | Team Udayavani |

ಬೀದರ್: ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ ಜನಾದೇಶದಿಂದ ಬಂದ ಸರ್ಕಾರ ಇಲ್ಲ. ಹಣದ ಹೊಳೆ ಹರಿಸಿ ಅಧಿಕಾರಕ್ಕೆ ಬಂದಿದೆ. ಹೀಗಾಗಿ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಧೂಳಿಪಟವಾಗಲಿದ್ದು, ಕಾಂಗ್ರೆಸ್ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಎಸ್.ಆರ್. ಪಾಟೀಲ ಭವಿಷ್ಯ ನುಡಿದರು.

Advertisement

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಸವರಾಜ ಬೊಮ್ಮಾಯಿ ಉತ್ತರ ಕರ್ನಾಟಕ ಭಾಗದವರು. ಅಭಿವೃದ್ಧಿ ಕೆಲಸಗಳು ನಡೆಯಬೇಕಾದರೆ ಸ್ಥಿರ ಸರ್ಕಾರ ಇರಬೇಕು ಎನ್ನುವದು ನಮ್ಮ ಇಚ್ಛೆ. ಆದರೆ ಸಂಪುಟದಲ್ಲಿ ಸಾಕಷ್ಟು ಜನರಿಗೆ ಸಚಿವ ಸ್ಥಾನ ಸಿಗದಿರುವುದಕ್ಕೆ ಅಸಮಾಧಾನ ಇದೆ. ಅಷ್ಟೇ ಅಲ್ಲ ಮಂತ್ರಿಯಾದವರು ಖುಷಿಯಲ್ಲಿಲ್ಲ. ಅತೃಪ್ತಿ ಸಚಿವ ಆಕಾಂಕ್ಷಿಗಳ ಪಟ್ಟಿ ದೊಡ್ಡದಿದೆ. ಸದ್ಯ ಬಿಜೆಪಿ ಒಡೆದ ಮನೆಯಾಗಿದೆ ಎಂದು ಟೀಕಿಸಿದರು.

ಕೇಂದ್ರ, ರಾಜ್ಯದಲ್ಲಿ ಡಬಲ್ ಇಂಜಿನ್ ಸರ್ಕಾರ ಇದ್ದು, ಸ್ವರ್ಗವನ್ನು ಧರೆಗಿಳಿಸುತ್ತೇವೆ ಎಂದ ಬಿಜೆಪಿಯವರು ಇದೀಗ ನರಕ ಸೃಷ್ಟಿಸಿದ್ದಾರೆ. ತೈಲ, ಅಡುಗೆ ಅನಿಲ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ರೈತ ವಿರೋಧಿ ಕಾಯ್ದೆಗಳನ್ನು ಜಾರಿಗೆ ತಂದು ಅನ್ನದಾತರನ್ನು ಸಂಕಷ್ಟಕ್ಕೆ ದೂಡಿದೆ. ರೈತರ ಆದಾಯ ದ್ವಿಗುಣ ಮಾಡುತ್ತಿವೆ ಎಂದು ಪ್ರಧಾನಿ ಮೋದಿ ಅವರು ರಸಗೊಬ್ಬರ, ಬಿತ್ತನೆ ಬೀಜ ದರ ಹೆಚ್ಚಿಸಿ ಸಾಗುವಳಿ ದುಪ್ಪಟ್ಟು ಮಾಡಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ:ಕಾರ್ಯಕರ್ತರ ಜನ ಸೇವೆಯೇ ಬಿಜೆಪಿ ಮೇಲೆ ಜನತೆಯ ವಿಶ‍್ವಾಸ ಬಲಗೊಳ್ಳಲು ಕಾರಣ :ಈಶ್ವರಪ್ಪ

ಮುಂದಿನ ವಿಧಾನಸಭೆ ಚುನಾವಣೆಯನ್ನು ಕಾಂಗ್ರೆಸ್ ಸಾಮೂಹಿಕ ನಾಯಕತ್ವದಲ್ಲಿ ಎದುರಿಸಲಿದೆ. 2023ರ ಅಥವಾ ಅದಕ್ಕೂ ಮೊದಲು ಬರುವ ವಿಧಾನಸಭೆ ಚುನಾವಣೆಯನ್ನು ಒಬ್ಬರ ಮುಂದಾಳತ್ವದಲ್ಲಿ ಚುನಾವಣೆ ಎದುರಿಸಲ್ಲ. ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ನಡೆಸಿ ಅಧಿಕಾರಕ್ಕೆ ತರಲಾಗುವುದು. ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬಂದರೆ ಶಾಸಕಾಂಗ ಪಕ್ಷದ ನಾಯಕನನ್ನು ಆಯ್ಕೆ ಮಾಡಿ ಮುಖ್ಯಮಂತ್ರಿ ಮಾಡಲಾಗುವುದು. ಹೀಗಾಗಿ ಯಾರನ್ನೂ ಸಿಎಂ ಅಭ್ಯರ್ಥಿ ಎಂದು ಬಿಂಬಿಸಬಾರದು. ಎಲ್ಲರೂ ಸೇರಿ ರಾಜ್ಯಾದ್ಯಂತ ಪಕ್ಷವನ್ನು ಬಲಪಡಿಸಿ ಮತ್ತೆ ಅಧಿಕಾರಕ್ಕೆ ಬರುವ ನಿಟ್ಟಿನಲ್ಲಿ ಕೆಲಸ ನಡೆಯುತ್ತಿದೆ ಎಂದು ಅವರು ಹೇಳಿದರು.

Advertisement

ಜಿಲ್ಲೆಯಲ್ಲಿ ಕೋವಿಡ್ ಮೊದಲ, ಎರಡನೇ ಅಲೆಯಲ್ಲಿ 407 ಜನ ಮೃತಪಟ್ಟಿದ್ದಾರೆ ಎಂದು ಜಿಲ್ಲಾಡಳಿತ ಹೇಳುತ್ತಿದೆ. ಆದರೆ ಈ ಲೆಕ್ಕ ತಪ್ಪಿದ್ದು, ದೊಡ್ಡ ಪ್ರಮಾಣದಲ್ಲಿ ಸಾವಿಗೀಡಾಗಿದ್ದಾರೆ. ಖಾಸಗಿ ಆಸ್ಪತ್ರೆ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಸೋಂಕಿನಿಂದ ಮೃತಪಟ್ಟವರ ಬಗ್ಗೆ ಮಾಹಿತಿ ಇಲ್ಲ. ಹೀಗಾಗಿ ಕೋವಿಡ್ ಸಾವು ಬಗ್ಗೆ ಸರಿಯಾದ ಲೆಕ್ಕ ನೀಡುವಂತೆ ಜಿಲ್ಲಾಡಳಿತಕ್ಕೆ ಸಲಹೆ ನೀಡಿದ್ದೇನೆ ಎಂದು ಹೇಳಿದ ಅವರು, ಬೇಡ್, ಆಕ್ಸಿಜನ್ ಕೊರತೆಯಿಂದ ವಿವಿಧ ಜಿಲ್ಲೆಗಳಲ್ಲಿ ಸೋಂಕಿತರು ಮೃತಪಟ್ಟಿದ್ದು, ಇದಕ್ಕೆ ಸರ್ಕಾರವೇ ನೇರ ಹೊಣೆ ದೂರು ಕಿಡಿಕಾರಿದರು.

3ನೇ ಅಲೆ ಯಶಸ್ವಿಯಾಗಿ ಎದುರಿಸಬೇಕಾದರೆ ಅರ್ಹರೆಲ್ಲರಿಗೆ ಲಸಿಕೆ ನೀಡಬೇಕು. ಆದರೆ ಈ ಕೆಲಸ ಸಮರ್ಪಕವಾಗಿ ನಡೆಯುತ್ತಿಲ್ಲ. ಬೀದರ ಜಿಲ್ಲೆಯಲ್ಲಿ ಲಸಿಕೆ ಪಡೆಯಲು 12.27 ಲಕ್ಷ ಅರ್ಹರು. ಆದರೆ, ಈವರೆಗೆ 1.70 ಲಕ್ಷ ಜನ ಮಾತ್ರ ಎರಡು ಡೋಸ್ ಪಡೆದಿದ್ದಾರೆ. ಅಂದರೆ ಶೇ. 14ರಷ್ಟು ಮಾತ್ರ ಪ್ರಗತಿ ಹೊಂದಿದೆ. ಇನ್ನೂ ಶೇ.86ರಷ್ಟು ಜನರಿಗೆ ಲಸಿಕೆ ನೀಡುವದು ಯಾವಾಗ ಎಂದು ಪ್ರಶ್ನಿಸಿದರು.

ದೇಶದಲ್ಲಿ 140 ಕೋಟಿ ಜನಸಂಖ್ಯೆ ಇದ್ದು, 100 ಕೋಟಿ ಜನ ಲಸಿಕೆಗೆ ಅರ್ಹರು. ಆದರೆ ಪ್ರಸ್ತತ ದೇಶಾದ್ಯಂತ ಕೇವಲ ಶೇ.7ರಷ್ಟು ಲಸಿಕೆ ನೀಡಲಾಗಿದೆ. ದೇಶವಾಸಿಗಳಿಗೆ ಸಲಿಕೆ ನೀಡುವದನ್ನು ಬಿಟ್ಟು ಪ್ರಧಾನಿ ನರೇಂದ್ರ ಮೋದಿ ಅವರು ವಿದೇಶದಲ್ಲಿ ಹೆಸರು ಪಡೆಯಲು, ವಿಶ್ವಗುರು ಆಗಲು 195 ರಾಷ್ಟ್ರಗಳಿಗೆ ಲಸಿಕೆ ನೀಡಿದ್ದಾರೆ. ಮೋದಿ ಅವರಿಗೆ ದೇಶದ ಬಗ್ಗೆ ಕಾಳಜಿ ಇಲ್ಲ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಸವರಾಜ ಜಾಬಶೆಟ್ಟಿ, ಮಾಜಿ ಸಂಸದ ನರಸಿಂಗರಾವ್ ಸೂರ್ಯವಂಶಿ, ಮೀನಾಕ್ಷಿ ಸಂಗ್ರಾಮ್, ಬಸವರಾಜ ಬುಳ್ಳಾ, ದತ್ತು ಮೂಲಗೆ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next