ನವದೆಹಲಿ: ಗಾಂಧಿ ಕುಟುಂಬಕ್ಕೆ ಎಸ್ ಪಿಜಿ(ಸ್ಪೆಷಲ್ ಪ್ರೊಟೆಕ್ಷನ್ ಗ್ರೂಪ್) ಭದ್ರತೆಯನ್ನು ವಾಪಸ್ ಪಡೆದಿರುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ವಿವರಣೆ ನೀಡಬೇಕೆಂದು ಆಗ್ರಹಿಸಿ ಕಾಂಗ್ರೆಸ್ ಸಂಸದರು ಮಂಗಳವಾರ ಲೋಕಸಭೆಯಲ್ಲಿ ಆಗ್ರಹಿಸಿ ಸಭಾತ್ಯಾಗ ಮಾಡಿರುವ ಘಟನೆ ನಡೆದಿದೆ.
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಮಕ್ಕಳಾದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿಗೆ ನೀಡಿದ್ದ ಎಸ್ ಪಿಜಿ ಭದ್ರತೆಯನ್ನು ಯಾಕೆ ವಾಪಸ್ ತೆಗೆದುಕೊಂಡಿದ್ದು ಎಂದು ಪ್ರಶ್ನಿಸಿ ಕಾಂಗ್ರೆಸ್ ಸಂಸದರು ಘೋಷಣೆ ಕೂಗುತ್ತಿದ್ದಂತೆಯೇ ಲೋಕಸಭೆ ಕಲಾಪದಿಂದ ಅಮಿತ್ ಶಾ ನಿರ್ಗಮಿಸಿದ್ದರು.
ಗಾಂಧಿ ಕುಟುಂಬದ ಎಸ್ ಪಿಜಿ ಭದ್ರತೆ ವಾಪಸ್ ಪಡೆದಿದ್ದು, ಈಗ ಮೂವರಿಗೂ ಸಿಆರ್ ಪಿಎಫ್ ನ ಝಡ್ ಪ್ಲಸ್ ಭದ್ರತೆಯನ್ನು ನೀಡಲಾಗಿದೆ.
ಲೋಕಸಭೆಯ ಪ್ರಶ್ನೋತ್ತರ ಅವಧಿ ವೇಳೆ ಕಾಂಗ್ರೆಸ್ ಹಾಗೂ ನ್ಯಾಷನಲ್ ಕಾನ್ಫರೆನ್ಸ್ ನ 20 ಮಂದಿ ಸಂಸದರು ಬಾವಿ ಬಳಿ ತೆರಳಿ ಘೋಷಣೆ ಕೂಗಿದ್ದರು. ಈ ಸಂದರ್ಭದಲ್ಲಿ ಸ್ಪೀಕರ್ ಓಂ ಬಿರ್ಲಾ ಅವರು ಸಂಸದರು ತಮ್ಮ ಸ್ಥಾನಕ್ಕೆ ಮರಳಿ ಸುಗಮ ಕಲಾಪ ನಡೆಸಲು ಅವಕಾಶ ಮಾಡಿಕೊಡಬೇಕೆಂದು ವಿನಂತಿಸಿಕೊಂಡಿದ್ದರು.
ಇಂದು ಕಲಾಪದಲ್ಲಿ ರೈತರ ಸಮಸ್ಯೆ ಬಗ್ಗೆ ಚರ್ಚೆ ನಡೆಯಲಿದೆ. ನಿಮಗೆ ಇಂತಹ ಮುಖ್ಯವಾದ ಚರ್ಚೆಯಲ್ಲಿ ಆಸಕ್ತಿ ಇಲ್ಲದಿದ್ದರೆ, ಈ ರೀತಿ ಕಲಾಪದಲ್ಲಿ ವರ್ತಿಸುವುದು ಒಳ್ಳೆಯ ಲಕ್ಷಣವಲ್ಲ ಎಂದು ಸ್ಪೀಕರ್ ಕಾಂಗ್ರೆಸ್ ಪಕ್ಷವನ್ನು ತರಾಟೆಗೆ ತೆಗೆದುಕೊಂಡಿರುವುದಾಗಿ ವರದಿ ತಿಳಿಸಿದೆ.
ದ್ವೇಷ ರಾಜಕಾರಣ ನಿಲ್ಲಿಸಿ. ಸರ್ವಾಧಿಕಾರ ಕೊನೆಗೊಳ್ಳಲಿ ಮತ್ತು ನಮಗೆ ನ್ಯಾಯ ಬೇಕಾಗಿದೆ ಎಂದು ಕಾಂಗ್ರೆಸ್ ಮುಖಂಡರು ಘೋಷಣೆ ಕೂಗಿ, ಲೋಕಸಭೆ ಕಲಾಪದಿಂದ ಹೊರನಡೆದಿರುವುದಾಗಿ ವರದಿ ವಿವರಿಸಿದೆ.