ಅಜೆಕಾರು: ರಾಜ್ಯದಲ್ಲಿ ನಡೆದ ಉಪ ಚುನಾವಣೆ ಬಳಿಕ ರಾಜ್ಯದಲ್ಲಿ ಕಾಂಗ್ರೆಸ್ ನಡಿಗೆ ಶೂನ್ಯದ ಕಡೆಗೆ ಎಂಬತಹ ಸ್ಥಿತಿಗೆ ತಲುಪಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದರು.
ಅವರು ಮುನಿಯಾಲಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ ರಾಜ್ಯದಲ್ಲಿ ಸ್ಥಿರ ಹಾಗೂ ಸುಭದ್ರ ಸರಕಾರಕ್ಕಾಗಿ ಜನತೆ ಬಿಜೆಪಿಗೆ ಮತನೀಡಿದ್ದು 14 ರಿಂದ 15 ಕ್ಷೇತ್ರಗಳಲ್ಲಿ ಬಿಜೆಪಿ ಜಯ ಸಾಧಿಸಲಿದ್ದಾರೆ ಎಂದರು.
ಹಿಂದಿನ ಸಮ್ಮಿಶ್ರ ಸರಕಾರ ಹಾಗೂ ಸಿದ್ದರಾಮಯ್ಯ ಸರಕಾರ ಸ್ವಜನ ಪಕ್ಷಪಾತ, ಭ್ರಷ್ಟಾಚಾರ ದಿಂದ ಕೂಡಿದ್ದರೆ ಬಿಜೆಪಿ ಸರಕಾರ ಜನಪರ ಆಡಳಿತ ನಡೆಸುತ್ತಿದೆ ಎಂದರು.
ಜೆಡಿಎಸ್ ಹಾಗೂ ಕಾಂಗ್ರೆಸ್ ಮತ್ತೆ ಸರಕಾರ ರಚಿಸುವ ಭ್ರಮೆಯಲ್ಲಿದು ಇದು ಅಸಾಧ್ಯ, ಸಿದ್ದರಾಮಯ್ಯ ಚುನಾವಣೆ ಫಲಿತಾಂಶದ ಬಳಿಕ ವಿರೋಧ ಪಕ್ಷದ ನಾಯಕನ ಸ್ಥಾನವನ್ನು ಕಳೆದುಕೊಳ್ಳಲಿದ್ದಾರೆ ಎಂದರು. ಮುಂದಿನ ದಿನಗಳಲ್ಲಿ ಜೆಡಿಎಸ್ ಪಕ್ಷವೇ ರಾಜ್ಯದಲ್ಲಿ ಇಲ್ಲಾದಂತಾಗಲಿದೆ. ಜೆಡಿಎಸ್ ಹಾಗೂ ಕಾಂಗ್ರೆಸ್‌ನಲ್ಲಿ ತಲಾ ಎರಡೇರಡು ಗುಂಪುಗಳಿದ್ದು 4 ಪಕ್ಷದಂತಿವೆ ಯಾವುದೇ ಕಾರಣಕ್ಕೂ ಸಮ್ಮಿಶ್ರ ಸರಕಾರ ಬರಲು ಸಾಧ್ಯವಿಲ್ಲ ಎಂದರು.
ನೆಲ-ಜಲ ವಿಷಯದಲ್ಲಿ ರಾಜಿ ಇಲ್ಲ: ಬೆಳಗಾವಿ ಸೇರಿದಂತೆ ರಾಜ್ಯದ ಯಾವುದೇ ಭಾಗದ ನೆಲ ಜಲದ ವಿಷಯಕ್ಕೆ ಧಕ್ಕೆ ಬಂದರೆ ಸರಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ ಈ ವಿಷಯದಲ್ಲಿ ಯಾವುದೇ ರೀತಿಯ ರಾಜಿ ಇಲ್ಲ ಎಂದು ಸಚಿವರು ಹೇಳಿದರು. ಸರಕಾರ ಕನ್ನಡದ ಪರವಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.
ಈ ಸಂದರ್ಭ ಶಾಸಕ ಸುನಿಲ್ ಕುಮಾರ್ ಉಪಸ್ಥಿತರಿದ್ದರು.