Advertisement

ಸಮುದಾಯ ಮತಬ್ಯಾಂಕ್‌ನತ್ತ ಕಾಂಗ್ರೆಸ್‌ ದೃಷ್ಟಿ

01:20 AM May 22, 2022 | Team Udayavani |

ಬೆಂಗಳೂರು: ಮುಂದಿನ ವಿಧಾನ ಸಭೆ ಚುನಾವಣೆಯನ್ನು ಗಮನದಲ್ಲಿ ಇರಿಸಿಕೊಂಡು ಸಮುದಾಯಗಳ ಮತಬ್ಯಾಂಕ್‌ಗೆ ಲಗ್ಗೆ ಹಾಕಲು ಕಾಂಗ್ರೆಸ್‌ ಮುಂದಾಗಿದೆ. ಹಿಂದೆ ಕಾಂಗ್ರೆಸ್‌ನ ಖಚಿತ ಮತ ಬ್ಯಾಂಕ್‌ ಆಗಿದ್ದ ದಲಿತ, ಹಿಂದುಳಿದ ಸಮುದಾಯ ಬಿಜೆಪಿ ಕಡೆ ವಾಲಿದ್ದರಿಂದ ಕಳೆದ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳಲ್ಲಿ ಕಾಂಗ್ರೆಸ್‌ಗೆ ಹಿನ್ನಡೆ ಯಾಗಿತ್ತು. ಹೀಗಾಗಿ ಆ ಸಮುದಾಯವನ್ನು ತನ್ನತ್ತ ಸೆಳೆಯಲು ಈಗಿನಿಂದಲೇ ಕಾರ್ಯತಂತ್ರ ರೂಪಿಸಿದೆ.

Advertisement

ದಲಿತ, ಹಿಂದುಳಿದ, ಅಲ್ಪಸಂಖ್ಯಾಕರ ಜತೆಗೆ ಒಕ್ಕಲಿಗ ಮತ್ತು ಲಿಂಗಾಯತ ಮತಗಳನ್ನೂ ಕ್ರೋಡೀ ಕರಿಸಿದರೆ ಮಾತ್ರ ರಾಹುಲ್‌ ಗಾಂಧಿ ನೀಡಿರುವ 150 ಸ್ಥಾನಗಳ ಗುರಿ ತಲುಪಲು ಸಾಧ್ಯ ಎಂಬುದು ಇತ್ತೀಚೆಗೆ ನಡೆಸಿದ ಆಂತರಿಕ ಸಮೀಕ್ಷೆಯಲ್ಲಿ ವ್ಯಕ್ತವಾಗಿದೆ. ಹೀಗಾಗಿ ಆ ನಿಟ್ಟಿನಲ್ಲಿ ಎಐಸಿಸಿ ಕೆಲವು ಸೂಚನೆ ನೀಡಿದೆ ಎಂದು ಮೂಲಗಳು ತಿಳಿಸಿವೆ.

ಮೊದಲಿಗೆ ಜಾಗೃತಿ ಸಮಾವೇಶ
ಮೊದಲ ಹಂತದಲ್ಲಿ ಡಾ| ಅಂಬೇಡ್ಕರ್‌ ಮತ್ತು ಜಗಜೀವನ್‌ರಾಮ್‌ ಸ್ಮರಣೆ ಹಾಗೂ ಜಾಗೃತಿ ಸಮಾವೇಶ ನಡೆಸಲು ಸಿದ್ಧತೆ ನಡೆದಿದೆ. ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಸರಣಿ ಸಮಾವೇಶಕ್ಕೆ ರೂಪುರೇಷೆ ನಿಗದಿ ಮಾಡಿದ್ದು, ದಲಿತ ಸಮುದಾಯದ ಮತ ಬ್ಯಾಂಕ್‌ ಮೇಲೆ ಕಣ್ಣಿಟ್ಟು ಕಾರ್ಯಕ್ರಮ ರೂಪಿಸ ಲಾಗಿದೆ. ಈ ನಿಟ್ಟಿನಲ್ಲಿ ಮಲ್ಲಿಕಾರ್ಜುನ ಖರ್ಗೆ, ಮುನಿಯಪ್ಪ, ಡಾ| ಪರಮೇಶ್ವರ್‌, ಸತೀಶ್‌ ಜಾರಕಿ ಹೊಳಿ, ಪ್ರಿಯಾಂಕ್‌ ಖರ್ಗೆ, ಧ್ರುವನಾರಾಯಣ, ಧರ್ಮಸೇನಾ ಕೆಲಸ ಮಾಡಲಿದ್ದಾರೆ.

ಜುಲೈಯಲ್ಲಿ ಹಿಂದುಳಿದ ವರ್ಗಗಳ ಜಾಗೃತಿ ಸಮಾವೇಶ, ಆಗಸ್ಟ್‌ ಅಥವಾ ಸೆಪ್ಟಂಬರ್‌ನಲ್ಲಿ ಅಲ್ಪಸಂಖ್ಯಾಕರ ಜಾಗೃತಿ ಸಮಾವೇಶ ನಡೆಸಲು ನಿರ್ಧರಿಸಲಾಗಿದೆ. ಇದರ ನಡುವೆ ಒಕ್ಕಲಿಗ ಮತ್ತು ಲಿಂಗಾಯತ ಕೇಂದ್ರಿತ ಕಾರ್ಯಕ್ರಮ ರೂಪಿಸಲು ತೀರ್ಮಾನಿಸಲಾಗಿದೆ. ಮುಖ್ಯವಾಗಿ ಜೆಡಿಎಸ್‌ ರಾಜ್ಯಾಧ್ಯಕ್ಷರಾಗಿ ಸಿ.ಎಂ. ಇಬ್ರಾಹಿಂ ನೇಮಕಗೊಂಡ ಬಳಿಕ ಅಲ್ಪಸಂಖ್ಯಾಕ ಸಮುದಾಯದ ಮತ ವಿಭಜನೆ ಆತಂಕವೂ ಇರುವುದ ರಿಂದ ಆ ಮತಬ್ಯಾಂಕ್‌ ಕೈ ತಪ್ಪದಂತೆ ನೋಡಿಕೊಳ್ಳಲು ನಿರ್ದೇಶಿಸಲಾಗಿದೆ.

ತಂಡ ರಚನೆ
ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್‌, ವಿಧಾನಸಭೆ ವಿಪಕ್ಷ ಉಪ ನಾಯಕ ಯು.ಟಿ. ಖಾದರ್‌, ಮಾಜಿ ಸಚಿವರಾದ ನಸೀರ್‌ ಅಹಮದ್‌, ಜಮೀರ್‌ ಅಹಮದ್‌, ಎನ್‌.ಎ. ಹ್ಯಾರಿಸ್‌,ರಿಜ್ವಾನ್‌ ಅರ್ಷದ್‌ ಅವರ ತಂಡ ರಚಿಸಿ ಸಮುದಾಯದಲ್ಲಿ ಜಾಗೃತಿ ಮೂಡಿಸಲು ಚಿಂತನೆ ನಡೆಸಲಾಗಿದೆ.

Advertisement

ಜತೆಗೆ ಪ್ರಚಾರ ಸಮಿತಿ ಅಧ್ಯಕ್ಷ ರಾಗಿರುವ ಎಂ.ಬಿ. ಪಾಟೀಲ್‌ ಮತ್ತು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್‌ ಖಂಡ್ರೆ ನೇತೃತ್ವದಲ್ಲಿ ಒಂದು ತಂಡ ರಚಿಸಿ ಲಿಂಗಾಯತ ಸಮುದಾಯದ ಮತ ಸೆಳೆಯುವ ನಿಟ್ಟಿನಲ್ಲಿ ರಾಜ್ಯ ಪ್ರವಾಸ ಕೈಗೊಳ್ಳಲು ಚಿಂತನೆ ನಡೆದಿದೆ.

ಹಳೆ ಮೈಸೂರು ಭಾಗದಲ್ಲಿ ಇತ್ತೀ ಚೆಗೆ ಬಿಜೆಪಿ ಒಕ್ಕಲಿಗ ಮತಬ್ಯಾಂಕ್‌ ಮೇಲೆ ಕಣ್ಣಿಟ್ಟಿದ್ದು, ಜೆಡಿಎಸ್‌ ಮತ್ತು ಕಾಂಗ್ರೆಸ್‌ ಎರಡಕ್ಕೂ ಆತಂಕ ಉಂಟಾಗಿದೆ. ಹೀಗಾಗಿ ಕಾಂಗ್ರೆಸ್‌ ಬೆಂಬಲಿಸುವ ಒಕ್ಕಲಿಗ ಮತಗಳು ಬೇರೆಡೆ ಹೋಗದಂತೆ ನೋಡಿಕೊಳ್ಳಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಸ್ವತಃ ಕಾರ್ಯತಂತ್ರ ರೂಪಿಸಿದ್ದಾರೆ. ವಿಧಾನ ಪರಿಷತ್‌ ಮತ್ತು ರಾಜ್ಯಸಭೆ ಚುನಾವಣೆ ಮುಗಿದ ಬಳಿಕ ಒಂದಷ್ಟು ಮಹತ್ವದ ಬೆಳವಣಿಗೆಗಳು ನಡೆಯಲಿದೆ ಎಂದು ಹೇಳಲಾಗಿದೆ.

ಕೆಪಿಸಿಸಿ ವತಿಯಿಂದಲೇ ಸಮಾವೇಶ
ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಪ್ರತ್ಯೇಕವಾಗಿ ಸಮುದಾಯವಾರು ಸಮಾವೇಶ ನಡೆಸಲು ಹೈಕಮಾಂಡ್‌ ಅನುಮತಿ ಕೇಳಿದ್ದರಾದರೂ ಹಿರಿಯ ನಾಯಕರ ಆಕ್ಷೇಪ ವ್ಯಕ್ತವಾಗಿದೆ. ಹೀಗಾಗಿ ಪಕ್ಷದ ಬ್ಯಾನರ್‌ನಲ್ಲೇ ನಡೆಸಬೇಕು, ಎಲ್ಲ ನಾಯಕರೂ ಪಾಲ್ಗೊಂಡು ಒಗ್ಗಟ್ಟು ಪ್ರದರ್ಶಿಸಬೇಕು ಎಂದು ಸೂಚನೆ ನೀಡಲಾಗಿದೆ. ಅದರಂತೆ ಈಗ ಕೆಪಿಸಿಸಿ ವತಿ ಯಿಂದಲೇ ಸಮುದಾಯವಾರು ಜಾಗೃತಿ ಸಮಾವೇಶ ನಡೆಸಲಾಗುತ್ತಿದೆ. ಮುಂದಿನ ಫೆಬ್ರ ವರಿಯ ವರೆಗೆ ಇದು ಮುಂದುವರಿಯಲಿದೆ ಎಂದು ತಿಳಿದು ಬಂದಿದೆ.

-ಎಸ್‌. ಲಕ್ಷ್ಮೀನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next