ಬೆಂಗಳೂರು: ಕೋವಿಡ್ ಸೋಂಕಿನಲ್ಲಿ ಭ್ರಷ್ಟಾಚಾರ, ಬಿಡಿಗಾಸಿನ ನೆರೆ ಪರಿಹಾರದಲ್ಲೂ ಭ್ರಷ್ಟಾಚಾರ, ವರ್ಗಾವಣೆಯಲ್ಲೂ ಭ್ರಷ್ಟಾಚಾರ, ಅನುದಾನ ಬಿಡುಗಡೆಯಲ್ಲೂ ಭ್ರಷ್ಟಾಚಾರ ಎಂದು ಕಾಂಗ್ರೆಸ್ ಲೇವಡಿ ಮಾಡಿದೆ.
ಈ ಕುರಿತು ಕರ್ನಾಟಕ ಕಾಂಗ್ರೆಸ್ ಟ್ವೀಟ್ ಮಾಡಿದ್ದು, ರಾಜ್ಯ ಬಿಜೆಪಿ ಸರ್ಕಾರದಲ್ಲಿ ಲೂಟಿಯೇ ಯೋಜನೆಯಾಗಿದೆ ಹೊರತು ಜನಹಿತಕ್ಕಾಗಿ ಒಂದೂ ಯೋಜನೆ ಇಲ್ಲ. ಬಿಜೆಪಿ ಕಿತ್ತಾಟದಲ್ಲಿ ರಹಸ್ಯ ಹೊರಬೀಳುತ್ತಿವೆ ಎಂದು ಕುಟುಕಿದೆ.
ಯತ್ನಾಳ್ ಸರ್ಕಾರದಲ್ಲಿನ ಎಲ್ಲ ಅನಾಚಾರ ಜಗತ್ತಿಗೆ ತಿಳಿಸಿದ್ದರು. ಮಾಧುಸ್ವಾಮಿ ಕೇಂದ್ರ ಸರ್ಕಾರದ ಸರ್ವಾಧಿಕಾರಿ ನಡೆಯ ವಿರುದ್ಧ ಹರಿಹಾಯ್ದಿದ್ದರು. ಈಶ್ವರಪ್ಪ ಸರ್ವಾಧಿಕಾರಿ ಧೋರಣೆ, ಭ್ರಷ್ಟಾಚಾರವನ್ನು ಬಯಲಿಗಿಟ್ಟಿದ್ದಾರೆ. ಬಿಜೆಪಿ ಕರ್ನಾಟಕದ ಸ್ಥಿತಿ ಎಷ್ಟೇ ಎಳೆದರೂ ಮೈ ಮುಚ್ಚದ ಹರಿದ ಬನಿಯನ್‌ನಂತಾಗಿದೆ ಎಂದು ಹೇಳಿದೆ.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಪಕ್ಷದ ರಾಜಕೀಯ ವ್ಯಭಿಚಾರಕ್ಕೆ ಹುಟ್ಟಿದ ಅನೈತಿಕ ಕೂಸು. ಆಪರೇಷನ್ ಕಮಲ ಎನ್ನುವ ಅನಿಷ್ಟ ಪದ್ಧತಿಯನ್ನು ಹುಟ್ಟುಹಾಕಿ ಶಾಸಕರನ್ನು ಐಟಿ, ಇಡಿ ಬೆದರಿಕೆ, ಹನಿಟ್ಯಾಪ್ ಬ್ಲಾಕ್‌ವೆುàಲ್, ಹಣದ ಆಮಿಷ ಎಲ್ಲವನ್ನು ಬಳಸಿಕೊಂಡಿದ್ದು ಒಂದೊಂದಾಗಿ ಬಯಲಾಗುತ್ತಿದೆ. ಇದರೊಂದಿಗೆ ಯಡಿಯೂರಪ್ಪ ಮುಕ್ತ ಬಿಜೆಪಿ ಆಗುವ ಕಾಲವೂ ಸನ್ನಿಹಿತವಾಗಿದೆ ಎಂದು ಹೇಳಿದೆ.
ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದ್ದ ಬಗ್ಗೆ ಕಾಂಗ್ರೆಸ್ ಎತ್ತಿ ತೋರಿದಾಗ ಬಿಜೆಪಿ ರಾಜಕೀಯ ದುರುದ್ದೇಶ ಎಂದು ತಿಪ್ಪೆ ಸಾರಿಸುತ್ತಿತ್ತು. ಆದರೆ, ಸ್ವತಃ ಬಿಜೆಪಿ ಶಾಸಕರೇ ತಮಗಾದ ಅನ್ಯಾಯ ಹೇಳುತ್ತಿದ್ದಾರೆ ಎಂದು ತಿಳಿಸಿದರು.