Advertisement

BJP ಭದ್ರಕೋಟೆಯಲ್ಲಿ ಲೋಕ ಚುನಾವಣೆ ಪ್ರಚಾರಕ್ಕೆ ಕೈ ಕಹಳೆ

01:03 AM Feb 18, 2024 | Team Udayavani |

ಮಂಗಳೂರು: ಲೋಕಸಭೆ ಚುನಾ ವಣೆಗೆ ದಿನ ಹತ್ತಿರವಾಗುತ್ತಿದ್ದಂತೆಯೇ ಬಿಜೆಪಿಯ ಪಾರಂಪರಿಕ ಭದ್ರಕೋಟೆ ಎನಿಸಿಕೊಂಡಿರುವ ಮಂಗಳೂರಿನಲ್ಲಿ ಕಾಂಗ್ರೆಸ್‌ ತನ್ನ ಲೋಕ ಸಮರದ ಪ್ರಚಾರಕ್ಕೆ ರಣಕಹಳೆ ಮೊಳಗಿಸಿದೆ.

Advertisement

ನಗರ ಹೊರವಲಯದ ಅಡ್ಯಾರ್‌ನಲ್ಲಿ ಶನಿವಾರ ನಡೆದ ರಾಜ್ಯ ಕಾಂಗ್ರೆಸ್‌ ಸಮಾವೇಶ ದಲ್ಲಿ ಗ್ಯಾರಂಟಿ ಮಾರ್ಗದ ಮೂಲಕ ಚುನಾವಣೆ ಗೆಲ್ಲುವ ಸಂಕಲ್ಪವನ್ನು ಕಾಂಗ್ರೆಸ್‌ ಮಾಡಿತು. ಕರಾವಳಿ ಸಹಿತ 20 ಲೋಕಸಭಾ ಕ್ಷೇತ್ರಗಳನ್ನು ಗೆಲ್ಲುವ ಗುರಿಯನ್ನು ಕಾರ್ಯಕರ್ತರಿಗೆ ನೀಡಲಾಯಿತು.ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಶಿವಕುಮಾರ್‌, ಪಕ್ಷದ ಉಸ್ತುವಾರಿ ರಣದೀಪ್‌ ಸುಜೇìವಾಲ ಅವರು ಕೇಂದ್ರ ಹಾಗೂ ಪ್ರಧಾನಿ ಮೋದಿ ವಿರುದ್ಧ ವಾಗ್ಧಾಳಿ ನಡೆಸಿದರು.

ಹಿಂದಿನ ಚುನಾವಣೆಯಲ್ಲಿ ಮೋದಿಯವರ ಜನಪ್ರಿಯತೆಯನ್ನೇ ಕೇಂದ್ರೀಕರಿಸಿ ಚುನಾವಣೆ ಎದುರಿಸಿದ್ದರಿಂದ ಈ ಬಾರಿ ಕಾಂಗ್ರೆಸ್‌ ಆರಂಭದಿಂದಲೇ ಮೋದಿಯವರನ್ನು ಗುರಿಯಾಗಿ ಸಿಕೊಂಡಿದೆ. ಸಾಮಾನ್ಯವಾಗಿ ಬಳ್ಳಾರಿ, ದಾವಣಗೆರೆಯಂಥ ಜಿಲ್ಲೆಗಳನ್ನು ಹಿಂದಿನ ಚುನಾವಣೆಗಳಲ್ಲಿ ಕಾಂಗ್ರೆಸ್‌ ಕೇಂದ್ರೀಕರಿಸಿತ್ತು. ಆದರೆ ಈ ಬಾರಿ ಕರಾವಳಿಯ ಕೇಂದ್ರ ಮಂಗಳೂರನ್ನು ಆಯ್ದುಕೊಂಡಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಜನರಿಗೆ ತಲುಪಿಸಿದ್ದೇವೆ, ಹಾಗಾಗಿ ಅದೇ ಬಲದಲ್ಲಿ ನಾವು ಲೋಕಸಭಾ ಚುನಾವಣೆಯಲ್ಲಿ ಗೆಲ್ಲಲು ಪ್ರಯತ್ನಿಸಬೇಕು ಎನ್ನುವ ಸಂದೇಶವನ್ನು ಕಾರ್ಯಕರ್ತರಿಗೆ ರವಾನಿಸಲು ನಾಯಕರು ಪ್ರಯತ್ನಿಸಿದ್ದು ಕಂಡುಬಂದಿತು. ಲೋಕಸಭಾ ಚುನಾವಣಾ ವರ್ಷದಲ್ಲೇ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನ ಮಾಡಿರುವ ಖುಷಿಯಲ್ಲಿ ಬೀಗುತ್ತಿರುವ ಕಾಂಗ್ರೆಸ್‌ ನಾಯಕರು ಅದೇ ಬಲದಲ್ಲಿ ಮನೆಮನೆಗೆ ಹೋಗುವ ಸಂಕಲ್ಪವನ್ನು ಹಾಕಿಕೊಂಡಿದ್ದಾರೆ.

ನಾವು ನುಡಿದಂತೆ ನಡೆದಿದ್ದೇವೆ, ನಮ್ಮ ಗ್ಯಾರಂಟಿಗಳಿಂದ ಜನರಿಗೆ ಒಳಿತಾಗಿದೆ, ಗ್ಯಾರಂಟಿಯಿಂದ ರಾಜ್ಯ ದಿವಾಳಿಯಾಗಿಲ್ಲ, ಬದಲಿಗೆ ನಾವು 3.71 ಲಕ್ಷ ಕೋಟಿ ಮೊತ್ತದ ಬಜೆಟ್‌ ಮಂಡಿಸಿದ್ದೇವೆ ಎನ್ನುವ ವಿಶ್ವಾಸವನ್ನು ಸಿಎಂ ಆದಿಯಾಗಿ ಮುಖಂಡರು ವ್ಯಕ್ತಪಡಿಸಿದ್ದಾರೆ. ಗ್ಯಾರಂಟಿಗಳನ್ನು ವಿರೋಧಿಸಿದ್ದ ಮೋದಿಯವರೇ ನಮ್ಮ ಗ್ಯಾರಂಟಿ ಪರಿಕಲ್ಪನೆಯನ್ನು ಕದ್ದಿದ್ದಾರೆ ಎನ್ನುವ ಲೇವಡಿಯೂ ಸಮಾವೇಶದಲ್ಲಿ ಕೇಳಿಬಂತು.
ಕೇಂದ್ರ ಈವರೆಗೆ ನೀಡಿದ ಯಾವ ಭರವಸೆಗಳನ್ನೂ ನೀಡಿಲ್ಲ, ಅವರನ್ನೇಕೆ ನಂಬುತ್ತೀರಿ ಎಂದು ಕರಾವಳಿ ಮತ
ದಾರರನ್ನು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದರು. ರಾಜ್ಯ ದಿವಾಳಿಯಾಗಿದೆ ಎಂದು ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ. ನಾವು ನೀಡಿದ ಗ್ಯಾರಂಟಿಗಳನ್ನೇ ಕದ್ದು ಪ್ರಧಾನಿ ಮೋದಿ ಅವರು ತಮ್ಮದೇ ಗ್ಯಾರಂಟಿ ಎಂದು ಹೇಳಿಕೊಳ್ಳುತ್ತಿರುವುದು ದುರಂತ ಎಂದು ಸಿದ್ದರಾಮಯ್ಯ ಹೇಳಿದರು. ಸುಜೇìವಾಲ ಮಾತನಾಡಿ, ರಾಜ್ಯದ ಮುಂದೆ ಈಗ ಕಾಂಗ್ರೆಸ್‌ನ ನೈಜ ಮಾದರಿ ಹಾಗೂ ಮೋದಿ ಅವರ ನಕಲಿ ಮಾದರಿ ಇದೆ. ಯಾವುದನ್ನು ಆಯ್ಕೆ ಮಾಡಬೇಕು ಎಂಬುದನ್ನು ಜನ ನಿರ್ಧರಿಸಬೇಕು ಎಂದು ಹೇಳಿದರು.

Advertisement

ಮೋದಿ ಏನು ಮಾಡಿದ್ದಾರೆ?
ಹತ್ತು ವರ್ಷಗಳ ಹಿಂದೆ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಮೋದಿ ಏನು ಮಾಡಿ ದ್ದಾರೆ? ಕೇವಲ ಕೋಮುವಾದ ಮಾಡುವುದು, ಧರ್ಮಗಳ ಮಧ್ಯೆ ಬೆಂಕಿಹಚ್ಚುವುದು, ಭಾವನಾತ್ಮಕ, ಧಾರ್ಮಿಕ ವಿಷಯಗಳ ಆಧಾರದಲ್ಲಿ ಬಿಜೆಪಿ ಕೆಲಸ ಮಾಡುತ್ತಿದೆ. ಬೆಲೆ ಇಳಿಸಿದ್ದಾರಾ? ಅಚ್ಛೇದಿನ್‌ ತಂದರಾ?
ಸಿದ್ದರಾಮಯ್ಯ,
ಮುಖ್ಯಮಂತ್ರಿ

ಕಾಂಗ್ರೆಸ್‌ ನಿರ್ನಾಮಕ್ಕೆ ಯತ್ನ
ಒಂದೆಡೆ ಕಾಂಗ್ರೆಸ್‌ನ ಖಾತೆಗಳನ್ನೇ ಕೇಂದ್ರ ಜಪ್ತಿ ಮಾಡುತ್ತಿದೆ. ಇನ್ನೊಂದೆಡೆ ಚುನಾವಣ ಬಾಂಡ್‌ಗಳ ಮೂಲಕ ಬಿಜೆಪಿ 6 ಸಾವಿರ ಕೋಟಿ ರೂ. ಮೊತ್ತವನ್ನು ಕಾಳಧನಿಕರಿಂದ ಪಡೆದಿದೆ. ಜಾತ್ಯತೀತ ಎನ್ನುವ ದೇವೇಗೌಡರು ಮೋದಿ ತೊಡೆ ಮೇಲೆ ಕೂತಿದ್ದಾರೆ. ಕಾಂಗ್ರೆಸ್‌ 20 ಲೋಕ ಸ್ಥಾನ ಗೆಲ್ಲಲಿದೆ.
-ಮಲ್ಲಿಕಾರ್ಜುನ ಖರ್ಗೆ,
ಎಐಸಿಸಿ ಅಧ್ಯಕ್ಷ

ಯಾರದು ಅಸಲಿ: ನೀವೇ ನಿರ್ಧರಿಸಿ
ರಾಜ್ಯದ ಮುಂದೆ ಈಗ ಕಾಂಗ್ರೆಸ್‌ನ ನೈಜ ಮಾದರಿ ಹಾಗೂ ಪ್ರಧಾನಿ ನರೇಂದ್ರ ಮೋದಿಯವರ ನಕಲಿ ಮಾದರಿ ಇದೆ. ಯಾವುದನ್ನು ಆಯ್ಕೆ ಮಾಡಬೇಕು ಎಂಬುದನ್ನು ಜನರು ನಿರ್ಧರಿಸಬೇಕು. ಬಿಜೆಪಿಯ 2 ಕೋಟಿ ಉದ್ಯೋಗ ನೀಡುವ ಭರವಸೆ, ಸ್ಮಾರ್ಟ್‌ ಸಿಟಿ ಯೋಜನೆಗಳೆಲ್ಲ ಎಲ್ಲಿ ಹೋಗಿವೆ?
-ರಣದೀಪ್‌ ಸುರ್ಜೇವಾಲಾ,
ರಾಜ್ಯ ಕಾಂಗ್ರೆಸ್‌ ಉಸ್ತುವಾರಿ

ಶಾಂತಿ ಕದಡಲಾಗುತ್ತಿದೆ
ಕರಾವಳಿ ಭಾಗದಲ್ಲಿ ಅಭಿವೃದ್ಧಿ ಕುಂಠಿತವಾಗಿದೆ. ಲೋಕಸಭೆ ಚುನಾವಣೆಯಲ್ಲಿ ಇಲ್ಲಿಯ ಮತದಾರರು ಬದಲಾವಣೆ ಮಾಡುವ ವಿಶ್ವಾಸವಿದೆ. ಈ ಭಾಗದಲ್ಲಿ ಶಾಂತಿ ಕದಡಲಾಗುತ್ತಿದೆ. ಅನೇಕ ಕಾಲೇಜುಗಳಿವೆ. ಆದರೂ ಅನೇಕ ಮಕ್ಕಳು ಬಿಜೆಪಿಯ ಧರ್ಮದ ಬಲೆಗೆ ಬಿದ್ದು ಶಿಕ್ಷಣದಿಂದ ದೂರ ಉಳಿದಿದ್ದಾರೆ.
-ಡಿ.ಕೆ. ಶಿವಕುಮಾರ್‌, ಉಪಮುಖ್ಯಮಂತ್ರಿ

 

 

Advertisement

Udayavani is now on Telegram. Click here to join our channel and stay updated with the latest news.

Next