ಔಸಾ, ಮಹಾರಾಷ್ಟ್ರ : ಎರಡು ದಶಕಗಳಿಗೂ ಹಿಂದೆ ಶಿವಸೇನೆಯ ಸ್ಥಾಪಕ ಬಾಳಾ ಠಾಕರೆ ಅವರ ಮತದಾನದ ಹಕ್ಕನ್ನು ಕಸಿದು ಕೊಂಡಿದ್ದ ಕಾಂಗ್ರೆಸ್ ಪಕ್ಷವನ್ನು ಪ್ರಧಾನಿ ನರೇಂದ್ರ ಮೋದಿ ಅವರಿಂದು ಇಲ್ಲಿ ಮಾಡಿದ ಚುನಾವಣಾ ಭಾಷಣದಲ್ಲಿ ಕಟುವಾಗಿ ಟೀಕಿಸಿದರು.
ಬಾಳಾ ಠಾಕರೆ ಅವರು ಸಾರ್ವಜನಿಕ ರಾಲಿಯೊಂದರಲ್ಲಿ ಧರ್ಮದ ಹೆಸರಲ್ಲಿ ಮತ ಕೇಳಿದ ಕಾರಣಕ್ಕೆ ತೊಂಬತ್ತರ ದಶಕದ ಕೊನೆಯಲ್ಲಿ ಅವರ ಮತದಾನದ ಹಕ್ಕನ್ನು ಆರು ವರ್ಷಗಳ ಅವಧಿಗೆ ಕಿತ್ತು ಹಾಕಲಾಗಿತ್ತು. 2001ರಲ್ಲಿ ಈ ನಿಷೇಧಾವಧಿ ಮುಗಿದ ಬಳಿಕ, ಎಂಟು ವರ್ಷಗಳ ಅಂತರದಲ್ಲಿ, 2004ರಲ್ಲಿ ಬಾಳಾ ಠಾಕರೆ ಮತ ಚಲಾಯಿಸಿದರು ಎಂಬುದನ್ನು ನೆರೆದ ಜನಸ್ತೋಮಕ್ಕೆ ಮೋದಿ ನೆನಪಿಸಿಕೊಟ್ಟರು.
ಬಾಳಾ ಠಾಕರೆ ಅವರ ಪುತ್ರ ಉದ್ಧವ ಠಾಕರೆ ಅವರನ್ನು ತನ್ನ ಕಿರಿಯ ಸಹೋದರ ಎಂದು ಕರೆದ ಪ್ರಧಾನಿ ಮೋದಿ, ಬಾಳಾ ಠಾಕರೆ ಅವರು ತನಗಾಗಲೀ ತನ್ನ ಪುತ್ರನಿಗಾಗಲೀ ಮುಖ್ಯಮಂತ್ರಿ ಹುದ್ದೆ ಸಿಗಬೇಕೆಂದು ಬಯಸಲಿಲ್ಲ ಎಂದು ಹೇಳಿದರು.
ವಂಶಾಡಳಿತೆಯ ಹರಿಕಾರನಾಗಿರುವ ಕಾಂಗ್ರೆಸ್ ಪಕ್ಷ ನಿಜಕ್ಕಾದರೆ ಬಾಳಾ ಠಾಕರೆ ಅವರ ಈ ಉನ್ನತ ಧ್ಯೇಯವನ್ನು ಅನುಸರಿಸಬೇಕು ಎಂದು ಮೋದಿ ಕರೆ ನೀಡಿದರು.
ಪ್ರಧಾನಿ ಮೋದಿ ಅವರು ಶಿವಸೇನೆಯ ಅಭ್ಯರ್ಥಿ ರಮೇಶ್ ಪ್ರಭು ಅವರ ಪ್ರಚಾರಾಭಿಯಾನದ ಅಂಗವಾಗಿ ಸಾರ್ವಜನಿಕ ಭಾಷಣ ಮಾಡಿದರು.