ಹೊಸದಿಲ್ಲಿ : ರಫೇಲ್ ಫೈಟರ್ ಜೆಟ್ ಡೀಲ್, ಅಸ್ಸಾಂ ಎನ್‌ಆರ್‌ಸಿ ಮತ್ತು ಪಿಎನ್‌ಬಿ 14,000 ಕೋಟಿ ಹಗರಣವನ್ನು ಬೀದಿಗೆಳೆದು ಹೋರಾಡಲು ಇಂದಿಲ್ಲಿ ಸಭೆ ಸೇರಿದ ಕಾಂಗ್ರೆಸ್ ಪಕ್ಷದ ನೂತನ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ) ನಿರ್ಧರಿಸಿತು.
ಪ್ರಧಾನಿ ನರೇಂದ್ರ ಮೋದಿ ಸರಕಾರದ ವಿರುದ್ಧ ಬೀದಿಗಿಳಿದು ಹೋರಾಡುವುದಕ್ಕಾಗಿ ಈ ಮೂರು ವಿಷಯಗಳನ್ನು ಮಾತ್ರವಲ್ಲದೆ ಇನ್ನೂ ಅನೇಕ ವಿಷಯಗಳನ್ನು ಸಿಡಬ್ಲ್ಯುಸಿ ಚರ್ಚಿಸಿತು. ಈ ಹೋರಾಟಕ್ಕೆ ಪರಿಣಾಮಕಾರಿ ಕಾರ್ಯತಂತ್ರವನ್ನು ರೂಪಿಸಲು ಸಿಡಬ್ಲ್ಯುಸಿ ಸದಸ್ಯರು ಒಪ್ಪಿಕೊಂಡರು.
2019ರ ಲೋಕಸಭಾ ಚುನಾವಣೆಗೆ ಮುನ್ನ ಅಧಿಕಾರರೂಢ ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರದ ವಿರುದ್ಧ ಯಾವ ರೀತಿಯಲ್ಲಿ ದೇಶವ್ಯಾಪಿ ಹೋರಾಟ ನಡೆಸಬೇಕು ಎಂಬುದನ್ನು ಸಭೆ ಚರ್ಚಿಸಿತು.
14,000 ಕೋಟಿ ರೂ. ಪಿಎನ್‌ಬಿ ಹಗರಣದಲ್ಲಿ ಮುಖ್ಯ ಆರೋಪಿಗಳಾಗಿದ್ದುಕೊಂಡು ವಿದೇಶಕ್ಕೆ ಪಲಾಯನ ಮಾಡಿರುವ ಬಿಲಿಯಾಧಿಪತಿ ವಜ್ರಾಭರಣ ಉದ್ಯಮಿ ನೀರವ್ ಮೋದಿ
ಮತ್ತು ಆತನ ಚಿಕ್ಕಪ್ಪ ಮೆಹುಲ್ ಚೋಕ್ಸಿಯನ್ನು ಗಡೀಪಾರು ಮಾಡಿಕೊಳ್ಳುವಲ್ಲಿನ ಕೇಂದ್ರ ಸರಕಾರದ ನಿಷ್ಕ್ರಿಯತೆಯನ್ನು ಸಿಡಬ್ಲ್ಯುಸಿ ಖಂಡಿಸಿತು.
Related Articles
ರಫೇಲ್ ಫೈಟರ್ ಜೆಟ್ ವಿಮಾನಗಳನ್ನು ಹಿಂದಿನ ಯುಪಿಎ ಸರಕಾರ ತೀರ್ಮಾನಿಸಿದ್ದಕ್ಕಿಂತಲೂ ಹಲವು ಪಟ್ಟು ಹೆಚ್ಚು ದರದಲ್ಲಿ ಕೇಂದ್ರ ಸರಕಾರ ಮುಂದಾಗಿದ್ದು ಆ ಬಗ್ಗೆ ಏನನ್ನೂ ಅದು ಬಹಿರಂಗಪಡಿಸಲು ಹಿಂದೇಟು ಹಾಕುತ್ತಿರುವುದನ್ನು ಸಭೆ ಖಂಡಿಸಿತು. ಅಸ್ಸಾಂ ನಲ್ಲಿನ ಎನ್‌ಆರ್‌ಸಿ ಸಮೀಕ್ಷೆಯ ರಾಜಕೀಕರಣವನ್ನೂ ಸಭೆ ಚರ್ಚಿಸಿತು.
ಸಭೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್, ಅಶೋಕ್ ಗೆಹಲೋತ್, ಎಕೆ ಆ್ಯಂಟನಿ, ಗುಲಾಂ ನಬೀ ಆಜಾದ್, ಅಹ್ಮದ್ ಪಟೇಲ್, ಅಂಬಿಕಾ ಸೋನಿ, ಮುಕುಲ್ ವಾಸ್‌ನಿಕ್ ಮೊದಲಾದ ಉನ್ನತ ನಾಯಕರು ಉಪಸ್ಥಿತರಿದ್ದರು. ಮಾಜಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಈ ಸಭೆಯಲ್ಲಿ ಪಾಲ್ಗೊಳಲು ಸಾಧ್ಯವಾಗಲಿಲ್ಲ ಎಂದು ಮೂಲಗಳು ತಿಳಿಸಿವೆ.