ಬೆಂಗಳೂರು: ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನ ಹಾಲಿ ಶಾಸಕರ ಪೈಕಿ 66 ಮಂದಿಗೆ ಟಿಕೆಟ್ ಸಿಗುವುದು ಬಹುತೇಕ ಖಚಿತವಾಗಿದೆ. ಗುರುವಾರ ನಡೆದ ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆ ಸಮಿತಿ ಸಭೆಯಲ್ಲಿ ಹಾಲಿ ಶಾಸಕರು ಪ್ರತಿನಿಧಿಸುವ ಕ್ಷೇತ್ರಗಳು ಸೇರಿದಂತೆ 130 ಕ್ಷೇತ್ರಗಳಲ್ಲಿ ಒಂದೊಂದೇ ಹೆಸರು ಅಂತಿಮಗೊಳಿಸಲಾಗಿದೆ.
ಮೊದಲಿಗೆ 58 ಸದಸ್ಯರ ಚುನಾವಣೆ ಸಮಿತಿ ಸಭೆ ನಡೆದು ನಂತರ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುಜೇìವಾಲಾ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರತ್ಯೇಕವಾಗಿ ತಡರಾತ್ರಿವರೆಗೂ ಸಭೆ ನಡೆಸಿ ಪಟ್ಟಿ ಅಂತಿಮಗೊಳಿಸಿದರು.
ಸುಜೇìವಾಲಾ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಸಭೆಯಲ್ಲಿ 50 ಕ್ಷೇತ್ರಗಳಿಗೆ ಒಂದೊಂದೇ ಹೆಸರು ಅಖೈರುಗೊಳಿಸಲಾಗಿದೆ. ಒಟ್ಟು 130 ಕ್ಷೇತ್ರಗಳ ಶಿಫಾರಸು ಕೇಂದ್ರ ಚುನಾವಣಾ ಸಮಿತಿಗೆ ರವಾನೆ ಮಾಡಲಾಗುವುದು ಎಂದು ಮೂಲಗಳು ತಿಳಿಸಿವೆ.
ಅಭಿಪ್ರಾಯ ಸಂಗ್ರಹ: ಚುನಾವಣಾ ಸಮಿತಿಯ ಸಭೆಯಲ್ಲಿ ಟಿಕೆಟ್ ಸಂಬಂಧ ತಮ್ಮ ಅಭಿಪ್ರಾಯವನ್ನು ಬರಹದ ರೂಪದಲ್ಲಿ ನೀಡುವಂತೆ ಸೂಚಿಸಲಾಯಿತು. ಇದಾದ ನಂತರ ಮೂವರು ಪ್ರತ್ಯೇಕವಾಗಿ ಸಭೆ ನಡೆಸಿ ಪಕ್ಷದ ಕಾರ್ಯದರ್ಶಿಗಳು ಪ್ರತಿ ಜಿಲ್ಲೆಯ ಆಕಾಂಕ್ಷಿಗಳ ಜತೆ ಚರ್ಚೆ ಮಾಡಿ ನೀಡಿರುವ ಹೆಸರು, ಕಾರ್ಯಾಧ್ಯಕ್ಷರು, ಚುನಾವಣಾ ಸಮಿತಿ ಸದಸ್ಯರು ನೀಡಿದ್ದ ಶಿಫಾರಸು, ಹೈಕಮಾಂಡ್ ಹಾಗೂ ರಾಜ್ಯ ಮಟ್ಟದಲ್ಲಿ ಮಾಡಿರುವ ಸಮೀಕ್ಷೆ ಆಧರಿಸಿ ಕೆಲವು ಕ್ಷೇತ್ರಗಳ ಹೆಸರು ಅಂತಿಮಗೊಳಿಸಿದರು ಎಂದು ತಿಳಿದು ಬಂದಿದೆ.
ಈ ಮಧ್ಯೆ, ಪಾವಗಡ ಶಾಸಕ ವೆಂಕಟರಮಣಪ್ಪ, ಅಫjಲ್‌ಪುರದ ಎಂ.ವೈ.ಪಾಟೀಲ್ ಅವರು ವಯಸ್ಸಿನ ಕಾರಣಕ್ಕೆ ತಮ್ಮ ಪುತ್ರರಿಗೆ ಟಿಕೆಟ್ ನೀಡಲು ಮನವಿ ಸಲ್ಲಿಸಿದ್ದಾರೆ ಎಂದು ಹೇಳಲಾಗಿದೆ.
ಕಾಂಗ್ರೆಸ್‌ಗೆ ಯಾವುದೇ ಕ್ಷೇತ್ರಗಳಲ್ಲಿ ಅಭ್ಯರ್ಥಿ ಆಯ್ಕೆ ಸವಾಲಾಗಿಲ್ಲ. ನಮಗೆ ಗೆಲುವಿನ ಗುರಿ ಇದೆ. ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ಮತದಾರರು ವಿಶ್ವಾಸ ನೀಡಿರುವುದರಿಂದ ಆಕಾಂಕ್ಷಿಗಳು ಹೆಚ್ಚಾಗಿದ್ದಾರೆ. ಕೆಲವು ಕ್ಷೇತ್ರಗಳಲ್ಲಿ 10, 12, 20 ಅರ್ಜಿಗಳು ಬಂದಿವೆ. ಇಂತಹ ಕಡೆಗಳಲ್ಲಿ ಪಕ್ಷ ಅಧಿಕಾರಕ್ಕೆ ಬರಬೇಕಾದರೆ ತ್ಯಾಗ ಮಾಡಲೇಬೇಕು.
–ಡಿ.ಕೆ.ಶಿವಕುಮಾರ್