Advertisement

ಕರಾವಳಿ ಪಡೆಯಲು ಕೈ ಕಸರತ್ತು; ಹಲವು ಹೊಸಮುಖಗಳಿಗೆ ಮಣೆ ಹಾಕಿದ ಕಾಂಗ್ರೆಸ್

10:02 AM Mar 25, 2023 | Team Udayavani |

ಮಣಿಪಾಲ: ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ನ ಮೊದಲ ಪಟ್ಟಿ ಬಿಡುಗಡೆಯಾಗಿದೆ. 224 ಕ್ಷೇತ್ರಗಳ ಪೈಕಿ 124 ಕ್ಷೇತ್ರಗಳಿಗೆ ಕಾಂಗ್ರೆಸ್ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಿ ಪಟ್ಟಿ ರಿಲೀಸ್ ಮಾಡಿದೆ. ಅವಿಭಜಿತ ದಕ್ಷಿಣ ಕನ್ನಡದ 13 ಕ್ಷೇತ್ರಗಳ ಪೈಕಿ ಎಂಟು ಕ್ಷೇತ್ರಗಳಿಗೆ ಟಿಕೆಟ್ ಘೋಷಣೆ ಮಾಡಲಾಗಿದೆ. ಕಳೆದ ಬಾರಿ ಕೈಬಿಟ್ಟು ಹೋಗಿದ್ದ ಕರಾವಳಿಯನ್ನು ಮತ್ತೆ ಪಡೆಯಲು ಕೆಲವು ಹೊಸ ಮುಖಗಳೊಂದಿಗೆ ಹಲವು ಅನುಭವಿಗಳಿಗೆ ಮಣೆ ಹಾಕಲಾಗಿದೆ.

Advertisement

ದಕ್ಷಿಣ ಕನ್ನಡ ಜಿಲ್ಲೆಯ ಐದು ಕ್ಷೇತ್ರಗಳಿಗೆ ಕೈ ಟಿಕೆಟ್ ಘೋಷಣೆಯಾಗಿದೆ. ಬಂಟ್ವಾಳ ಕ್ಷೇತ್ರದಲ್ಲಿ ಮಾಜಿ ಸಚಿವ ರಮಾನಾಥ ರೈ ಅವರಿಗೆ, ಮಂಗಳೂರು (ಉಳ್ಳಾಲ) ಕ್ಷೇತ್ರದಲ್ಲಿ ಮಾಜಿ ಸಚಿವ, ಹಾಲಿ ಶಾಸಕ ಯು.ಟಿ ಖಾದರ್ ಗೆ ಟಿಕೆಟ್ ನೀಡಲಾಗಿದೆ. ಸುಳ್ಯ ಮೀಸಲು ಕ್ಷೇತ್ರದಲ್ಲಿ ಕೃಷ್ಣಪ್ಪ ಜಿ ಘೋಷಿಸಲಾಗಿದೆ.

ಮೂಡುಬಿದಿರೆ- ಮೂಲ್ಕಿ ಕ್ಷೇತ್ರದಲ್ಲಿ ಯುವ ನಾಯಕ ಮಿಥುನ್ ರೈ ಅವರಿಗೆ ಟಿಕೆಟ್ ನೀಡಲಾಗಿದೆ. ಮಾಜಿ ಸಚಿವ ಅಭಯಚಂದ್ರ ಜೈನ್ ಅವರು ತೆರವು ಮಾಡಿ ಮಿಥುನ್ ರೈ ಅವರಿಗೆ ಬೆಂಬಲ ನೀಡಿದ್ದಾರೆ. ಕಳೆದ ಚುನಾವಣೆಯಲ್ಲೇ ರೈ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಕೊನೆಯ ಕ್ಷಣದ ಜಿದ್ದಾಜಿದ್ದಿನ ಕಾರಣದಿಂದ ಅಭಯಚಂದ್ರ ಜೈನ್ ಅವರೇ ಸ್ಪರ್ಧೆ ಮಾಡಬೇಕಾಗಿತ್ತು. ಆದರೆ ಚುನಾಚಣೆಯಲ್ಲಿ ಬಿಜೆಪಿಯ ಉಮಾನಾಥ ಕೋಟ್ಯಾನ್ ಅವರು ಮೊದಲ ಗೆಲುವು ಪಡೆದಿದ್ದರು. ಈ ಬಾರಿಯೂ ರೈ ಜೊತೆಗೆ ಒಂದೆರಡು ಇತರ ಹೆಸರು ಕೇಳಿ ಬಂದಿತ್ತಾದರೂ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಧರ್ಮಸ್ಥಳದಂತಹ ಪುಣ್ಯ ಕ್ಷೇತ್ರವನ್ನು ಒಳಗೊಂಡಿರುವ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಕೈ ಅಭ್ಯರ್ಥಿ ಬದಲಾವಣೆ ಮಾಡಲಾಗಿದೆ. ಐದು ಬಾರಿಯ ಶಾಸಕ ಕೆ. ವಸಂಂತ ಬಂಗೇರ ಅವರ ಬದಲಿಗೆ ಹೊಸ ಮುಖ ರಕ್ಷಿತ್ ಶಿವರಾಂ ಅವರಿಗೆ ಮಣೆ ಹಾಕಲಾಗಿದೆ. ಹಿರಿಯ ನಾಯಕ ಬಿ.ಕೆ ಹರಿಪ್ರಸಾದ್ ಅವರ ಸಂಬಂಧಿ ರಕ್ಷಿತ್ ಶಿವರಾಂ ಅವರಿಗೆ ಟಿಕೆಟ್ ನೀಡಲಾಗಿದೆ.

ಇದನ್ನೂ ಓದಿ:ವಿಧಾನಸಭೆ ಚುನಾವಣೆ: ಕಾಂಗ್ರೆಸ್‌ ನ ಮೊದಲ ಪಟ್ಟಿ ರಿಲೀಸ್

Advertisement

ಕಾಪು ಕ್ಷೇತ್ರ ಮತ್ತು ಬೈಂದೂರು ಕ್ಷೇತ್ರಕ್ಕೆ ನಿರೀಕ್ಷೆಯಂತೆ ಕ್ರಮವಾಗಿ ವಿನಯ್‌ ಕುಮಾರ್‌ ಸೊರಕೆ ಮತ್ತು ಗೋಪಾಲ್‌ ಪೂಜಾರಿ ಅವರಿಗೆ ಟಿಕೆಟ್‌ ನೀಡಲಾಗಿದೆ. ಕುಂದಾಪುರ ಕ್ಷೇತ್ರದಲ್ಲಿ ಉದ್ಯಮಿ ಎಂ.ದಿನೇಶ್‌ ಹೆಗ್ಡೆ ಅವರಿಗೆ ಟಿಕೆಟ್ ಘೋಷಿಸಲಾಗಿದೆ. ಕಳೆದ ಬಾರಿ ಕುಂದಾಪುರದಲ್ಲಿ ರಾಕೇಶ್ ಮಲ್ಲಿ ಸ್ಪರ್ಧೆ ಮಾಡಿದ್ದರು.

ಒಂದಕ್ಕಿಂತ ಹೆಚ್ಚು ಪ್ರಬಲ ಅಭ್ಯರ್ಥಿಗಳಿರುವ ಕ್ಷೇತ್ರಗಳಿಗೆ ಟಿಕೆಟ್ ಘೋಷಣೆಯಾಗಿಲ್ಲ. ಉಡುಪಿ, ಕಾರ್ಕಳ, ಮಂಗಳೂರು ದಕ್ಷಿಣ, ಮಂಗಳೂರು ಉತ್ತರ, ಪುತ್ತೂರು ಕ್ಷೇತ್ರಕ್ಕೆ ಇನ್ನೂ ಹರಿಯಾಳುಗಳನ್ನು ಅಂತಿಮ ಮಾಡಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next