ಶಿಡ್ಲಘಟ್ಟ: ತೀವ್ರ ಕುತೂಹಲ ಕೆರಳಿಸಿರುವ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಾದ ರಾಜೀವ್‌ಗೌಡ ಮತ್ತು ಆಂಜಿನಪ್ಪ (ಪುಟ್ಟು) ಬೆಂಬಲಿಗರು ತಮ್ಮ ಶಕ್ತಿ ಪ್ರದರ್ಶನ ಮಾಡುವ ಮೂಲಕ ಗಮನಸೆಳೆದರು.
ಕೋಲಾರದಿಂದ ಜಂಗಮಕೋಟೆ ಮಾರ್ಗವಾಗಿ ಆಗಮಿಸಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುಜೇìವಾಲಾ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಮುಂದೆ ಎಬಿಡಿ ಸಂಸ್ಥೆ ಅಧ್ಯಕ್ಷ ರಾಜೀವ್‌ಗೌಡ ಮತ್ತು ಎಸ್.ಎನ್.ಕ್ರಿಯಾ ಟ್ರಸ್ಟ್‌ನ ಅಧ್ಯಕ್ಷ ಆಂಜಿನಪ್ಪ(ಪುಟ್ಟು) ತಮ್ಮ ಬೆಂಬಲಿಗರೊಂದಿಗೆ ಶಕ್ತಿ ಪ್ರದರ್ಶನ ಮಾಡಿದರು.
ಜಾನಪದ ಕಲೆ ಪ್ರದರ್ಶನ: ಎಬಿಡಿ ಸಂಸ್ಥೆ ಅಧ್ಯಕ್ಷ ರಾಜೀವ್‌ಗೌಡ ಅವರು ಜಂಗಮಕೋಟೆ ಕ್ರಾಸ್ ನಿಂದ ಸ್ವಲ್ಪ ದೂರದಲ್ಲಿ ಬೃಹತ್ ಕಾರ್ಯಕ್ರಮ ಆಯೋಜಿಸಿ ಸಹಸ್ರಾರು ಮಹಿಳೆಯರನ್ನು ಓಂ ಶಕ್ತಿ ಪ್ರವಾಸಕ್ಕೆ ಕಳುಹಿಸಿಕೊಟ್ಟರು. ಇದೇ ವೇಳೆ ಪ್ರಖ್ಯಾತ ಗಾಯಕರು, ಕಲಾವಿದರು ತಮ್ಮ ಕಲೆ ಪ್ರದರ್ಶನದ ಮೂಲಕ ನೆರೆದಿದ್ದ ಜನರನ್ನು ರಂಜಿಸಿದರು.
ಬೃಹತ್ ಸೇಬಿನ ಹಾರ: ಕಾಂಗ್ರೆಸ್ ನಾಯಕರಿಗೆ ಸುಮಾರು 300 ಕೆ.ಜಿ. ಸೇಬಿನ ಹಾರ ಹಾಕಿ ಅಭಿನಂದಿಸಿದರು. ಅದಲ್ಲದೆ ಗುಲಾಬಿ ಹಾರ ಹಾಕಿ ರಾಜೀವ್‌ಗೌಡ ಮತ್ತು ಅವರ ಬೆಂಬಲಿಗರು ಪಟಾಕಿ ಸಿಡಿಸಿ ಅದ್ದೂರಿಯಾಗಿ ಸ್ವಾಗತಿಸಿದರು. ಇದೇ ರೀತಿ ಆಂಜಿನಪ್ಪ(ಪುಟ್ಟು) ಅವರೂ ತಮ್ಮ ಬೆಂಬಲಿಗರೊಂದಿಗೆ ಕಾಂಗ್ರೆಸ್ ನಾಯಕರಿಗೆ ಸೇಬಿನ ಹಾರ ಹಾಕಿ ಅಭಿನಂದಿಸಿದರು. ಇನ್ನು ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಶಾಸಕರು, ಮಾಜಿ ಸಚಿವ ವಿ.ಮುನಿಯಪ್ಪ ಅವರ ಬೆಂಬಲಿಗರು ತಾಲೂಕಿನ ಎಚ್.ಕ್ರಾಸ್ ಬಳಿ ಕಾಂಗ್ರೆಸ್ ನಾಯಕರನ್ನು ಅದ್ದೂರಿಯಾಗಿ ಸ್ವಾಗತಿಸಿ ಬೈಕ್ ರ್ಯಾಲಿ ಮೂಲಕ ಸಾಥ್ ನೀಡಿದರು.
ಪೊಲೀಸರ ಹರಸಾಹಸ: ಜಂಗಮಕೋಟೆ ಸರ್ಕಲ್‌ನಲ್ಲಿ ಕಾಂಗ್ರೆಸ್ ನಾಯಕರನ್ನು ಸ್ವಾಗತಿಸಲು ಸಹಸ್ರಾರು ಕಾಂಗ್ರೆಸ್ ಕಾರ್ಯಕರ್ತರು ಜಮಾಯಿಸಿದ್ದರಿಂದ ಕೆಲಕಾಲ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಪೊಲೀಸರು ಅಪಾರ ಸಂಖ್ಯೆಯಲ್ಲಿ ಸೇರಿದ್ದ ಜನರನ್ನು ನಿಯಂತ್ರಿಸಲು ಹರಸಾಹಸಪಟ್ಟರು.
ಪ್ರಜಾಧ್ವನಿ ಯಾತ್ರೆ ಬಸ್‌ಗೆ ಅಡ್ಡಲಾಗಿ ಕಾಂಗ್ರೆಸ್ ಕಾರ್ಯಕರ್ತರು ನಿಂತು ನಾಯಕರಿಗೆ ಸೇಬಿನ ಹಾರ ಹಾಕಲು ಪ್ರಯತ್ನ ಮಾಡಿದರು. ಆದರೆ, ಯಾರೂ ಬಸ್‌ನಿಂದ ಇಳಿಯಲಿಲ್ಲ. ಕೊನೆಗೂ ಸೇಬಿನ ಹಾರವನ್ನು ಪ್ರಜಾಧ್ವನಿ ಬಸ್‌ಗೆ ಹಾಕಿ ಆಕಾಂಕ್ಷಿಗಳು, ಅವರ ಬೆಂಬಲಿಗರು ತೃಪ್ತಿಪಟ್ಟರು.