Advertisement

ಜಾತಿವಾರು ಮತ ಬೇಟೆಗೆ ಕಾಂಗ್ರೆಸ್‌ ತಂತ್ರ

02:36 PM Apr 11, 2019 | pallavi |
ಬಾಗಲಕೋಟೆ: ಪ್ರಸ್ತುತ ಲೋಕಸಭೆ ಚುನಾವಣೆಯಲ್ಲಿ ಮೂರು ಬಾರಿ ಸತತ ಸೋಲಿನ ಕಹಿ ಅನುಭವಿಸಿರುವ ಕಾಂಗ್ರೆಸ್‌, ಈ ಬಾರಿ ಕ್ಷೇತ್ರ ಗೆಲ್ಲಲು ಹಲವು ತಂತ್ರಗಾರಿಕೆ ಮೊರೆ ಹೋಗಿದೆ. ಕಳೆದ ವರ್ಷ ನಡೆದ ಜಮಖಂಡಿ ಉಪ ಚುನಾವಣೆಯಲ್ಲಿ ರೂಪಿಸಿದ್ದ ರಣತಂತ್ರವನ್ನೇ ಲೋಕಸಭೆ ಚುನಾವಣೆಗೂ ಕಾಂಗ್ರೆಸ್‌ ರೂಪಿಸುತ್ತಿದೆ. ಅದಕ್ಕಾಗಿ ಇಡೀ ಲೋಕಸಭೆ ಕ್ಷೇತ್ರ ವ್ಯಾಪ್ತಿಯ ನಿರ್ಣಾಯಕ ಮತಗಳಿರುವ ಜಾತಿವಾರು ಸಮಾಜದ ಸಭೆ ನಡೆಸಿ, ಇದೊಂದು ಬಾರಿ ಕಾಂಗ್ರೆಸ್‌ ಗೆಲ್ಲಿಸಿ ಎಂಬ ಮನವಿ ಮಾಡುತ್ತಿದೆ.
ಬಾಗಲಕೋಟೆ ಜಿಲ್ಲೆಯ ಏಳು ಹಾಗೂ ಗದಗ ಜಿಲ್ಲೆಯ ನರಗುಂದ ಕ್ಷೇತ್ರ ಒಳಗೊಂಡು ಒಟ್ಟು 8 ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಲೋಕಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ದಲಿತ, ಮುಸ್ಲಿಂ ಹಾಗೂ ನೇಕಾರರ ಮತಗಳು ಕೆಲವು ಕ್ಷೇತ್ರಗಳಲ್ಲಿ ನಿರ್ಣಾಯಕವಾಗಿವೆ. ದಲಿತ, ಮುಸ್ಲಿಂ ಮತಗಳು ಕಾಂಗ್ರೆಸ್‌ನ ಪಾರಂಪರಿಕ ಮತಗಳೆಂದು ಭಾವಿಸಿದ್ದರೂ, ಈ ಬಾರಿ ವಿಭಜನೆಯಾಗುವ ಸಾಧ್ಯತೆ ಇವೆ ಎನ್ನಲಾಗಿದೆ. ಈ ಮತಗಳು ವಿಭಜನೆಯಾಗಲು ಬಿಜೆಪಿ ಮೇಲಿನ ಪ್ರೀತಿಗಿಂತ, ಕಾಂಗ್ರೆಸ್‌ನ ಮೇಲಿನ ಸಿಟ್ಟು ಹೆಚ್ಚು ಎಂಬ ಮಾತು, ಆಯಾ ಸಮಾಜದ ಕೆಲ ಪ್ರಮುಖರಿಂದ ಕೇಳಿ ಬರುತ್ತಿದೆ. 2.80 ಲಕ್ಷಕ್ಕೂ ಹೆಚ್ಚಿನ ದಲಿತ ಮತಗಳನ್ನು ವಿಭಜನೆ ಮಾಡಲು, ನ್ಯಾ| ಸದಾಶಿವ ಆಯೋಗ ಜಾರಿಗೊಳಿಸದ ಅಸ್ತ್ರ ಹಿಡಿದು, ಕೆಲವು ದಲಿತ ಮುಖಂಡರೇ ಕಾಂಗ್ರೆಸ್‌ ವಿರುದ್ಧ ಕ್ಯಾಂಪೇನ್‌ ಕೂಡ ಮಾಡುತ್ತಿದ್ದಾರೆ. ಇದರಿಂದ ಮತ ವಿಭಜನೆಯಾಗುವ ಆತಂಕ ಕಾಂಗ್ರೆಸ್‌ನಲ್ಲಿದೆ ಎಂದು ತಿಳಿದು ಬಂದಿದೆ.
ಜಾತಿವಾರು ಪ್ರಮುಖರ ಸಭೆ: ಮಾಜಿ ಸಿಎಂ ಸಿದ್ದರಾಮಯ್ಯ ನಿರ್ದೇಶನದಂತೆ ಜಿಲ್ಲೆಯ ಪ್ರಮುಖ ಜಾತಿವಾರು ಸ್ಥಳೀಯ ನಾಯಕರನ್ನು ಒಂದೆಡೆ ಸೇರಿಸಿ, ಚುನಾವಣೆ ರಣತಂತ್ರ ರೂಪಿಸಲು ಸ್ವತಃ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಕಾಂಗ್ರೆಸ್‌ನ ಚುನಾವಣೆ ಉಸ್ತುವಾರಿ ಶಿವಾನಂದ ಪಾಟೀಲ ಅವರೇ ತಯಾರಿ ನಡೆಸಿದ್ದಾರೆ. ಈ ನಿಟ್ಟಿನಲ್ಲಿ ನೇಕಾರ, ಮುಸ್ಲಿಂ ಸಮುದಾಯದ ಪ್ರಮುಖರ ಸಭೆಯನ್ನೂ ನಡೆಸಿದ್ದಾರೆ. ಜತೆಗೆ ಬಹುತೇಕ ಬಿಜೆಪಿ ಪರವಾಗಿರುವ ಪಂಚಮಸಾಲಿ ಸಮಾಜದ ಮತಗಳನ್ನು ಗಟ್ಟಿಗೊಳಿಸಲು, ಆ ಸಮಾಜದ ಸಭೆಯನ್ನೂ ನಡೆಸಿ, ನಮ್ಮದೇ ಸಮಾಜದ ಅಭ್ಯರ್ಥಿ ಕಣದಲ್ಲಿದ್ದಾರೆ. ಅವರನ್ನು ಗೆಲ್ಲಿಸಿ ಎಂಬ ಮನವಿ ಮಾಡಲಾಗಿದೆ.
ಕೊಟ್ಟು ಪಡೆಯುವ ಒಪ್ಪಂದ: ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಬಣಜಿಗ, ರಡ್ಡಿ ಹಾಗೂ ಕುರುಬ ಸಮಾಜದ ಮತಗಳೂ ಕಾಂಗ್ರೆಸ್‌ಗೆ ಪ್ರತಿಷ್ಠೆಯಾಗಿವೆ. ಸಿದ್ದರಾಮಯ್ಯ ಅವರು ಬಾದಾಮಿ ಶಾಸಕರಾಗಿರುವ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿ 3 ಲಕ್ಷ ಆಸುಪಾಸು ಇರುವ ಕುರುಬ ಸಮಾಜದ ಮತಗಳು, ಕಾಂಗ್ರೆಸ್ಸಿಗೇ ಬರಲಿವೆ ಎಂಬ ಪೂರ್ಣ ವಿಶ್ವಾಸ, ಪಕ್ಷದ ನಾಯಕರಲ್ಲಿಲ್ಲ. ಕಾರಣ, ಬಿಜೆಪಿಯ ಚುನಾವಣೆ ಉಸ್ತುವಾರಿ ಕೂಡ ಇದೇ ಸಮಾಜದ ಹಿರಿಯ ನಾಯಕ ಕೆ.ಎಸ್‌. ಈಶ್ವರಪ್ಪ ವಹಿಸಿದ್ದಾರೆ. ಹೀಗಾಗಿ ಒಂದಷ್ಟು ಕುರುಬ ಸಮಾಜದ ಮತಗಳು ವಿಭಜನೆಯಾದರೆ, ಅದಕ್ಕೆ ಸಿದ್ದರಾಮಯ್ಯ ಅಥವಾ ಈಶ್ವರಪ್ಪ ಅವರು ಕಾರಣರಾಗುವುದಕ್ಕಿಂತ, ಮೈತ್ರಿ ಪಕ್ಷದ ಅಭ್ಯರ್ಥಿಯ ಪತಿ ಹಾಗೂ ಕಾಂಗ್ರೆಸ್‌ನ ಸ್ಥಳೀಯ ನಾಯಕರೊಂದಿಗೆ ಇಲ್ಲದ ಹೊಂದಾಣಿಕೆ ಕಾರಣವಾಗಲಿದೆ ಎಂಬ ಮಾತು ಕೇಳಿ ಬಂದಿದೆ.
ಮುಖ್ಯವಾಗಿ ರಡ್ಡಿ ಸಮುದಾಯ, ಬೀಳಗಿ, ಮುಧೋಳ, ನರಗುಂದ ಕ್ಷೇತ್ರದಲ್ಲಿ ಸಾಕಷ್ಟು ಹಿಡಿತ ಹೊಂದಿದೆ. ಕಳೆದ ಮೂರು ಬಾರಿ ಇದೇ ಸಮುದಾಯಕ್ಕೆ ಸೇರಿದ ವ್ಯಕ್ತಿಗಳಿಗೆ ಕಾಂಗ್ರೆಸ್‌ ಟಿಕೆಟ್‌ ಕೊಟ್ಟಿತ್ತು. ಆದರೆ, ಈ ಬಾರಿ ಲಿಂಗಾಯತ ಹಾಗೂ ಏಕೈಕ ಮಹಿಳಾ ಅಭ್ಯರ್ಥಿ ಎಂಬ ಅಸ್ತ್ರವನ್ನು ಕಾಂಗ್ರೆಸ್‌ ಪ್ರಯೋಗಿಸಿದೆ. ಇದಕ್ಕೆ ರಡ್ಡಿ ಸಮುದಾಯದ ನಾಯಕರಲ್ಲಿ ಅಸಮಾಧಾನ ಇಲ್ಲದಿದ್ದರೂ, 2ನೇ ಮತ್ತು ಸಮುದಾಯದ ಬಹುತೇಕ ಜನರಲ್ಲಿ ಟಿಕೆಟ್‌ ತಪ್ಪಿಸಿದ ನೋವು ಇದೆ ಎನ್ನಲಾಗಿದೆ. ಇದು ಕಾಂಗ್ರೆಸ್‌ನ ಮತ ಗಳಿಕೆಯಲ್ಲಿ ಹಿನ್ನಡೆಯಾಗುವ ಸಾಧ್ಯತೆ ಇದ್ದು, ಅದಕ್ಕಾಗಿಯೂ ಕಾಂಗ್ರೆಸ್‌, ಗದಗ-ಹಾವೇರಿ (ರಡ್ಡಿ ಸಮಾಜದ ಅಭ್ಯರ್ಥಿ) ಕ್ಷೇತ್ರದಲ್ಲಿ ನೀವು ಮಾಡಿ, ಬಾಗಲಕೋಟೆ ಕ್ಷೇತ್ರದಲ್ಲಿ (ಪಂಚಮಸಾಲಿ ಅಭ್ಯರ್ಥಿ) ನಾವು ಮಾಡುತ್ತೇವೆ ಎಂಬ ಜಾತಿ ಹೊಂದಾಣಿಕೆ ತಂತ್ರ ಮಾಡಿದೆ ಎಂದು ತಿಳಿದು ಬಂದಿದೆ.
ಜಾತಿವಾರು ಮತ ಬೇಟೆಯ ಜತೆಗೆ 15 ವರ್ಷಗಳ ಕಾಲ ಸಂಸದರಾಗಿರುವ ಗದ್ದಿಗೌಡರು ಏನೂ ಅಭಿವೃದ್ಧಿ ಮಾಡಿಲ್ಲ
ಎಂಬ ಸಾಮಾನ್ಯ ಪ್ರಚಾರವೂ ಕಾಂಗ್ರೆಸ್‌ ನಡೆಸಿದೆ. ಆದರೆ, ಏ. 18ರಂದು ಮೋದಿ ಬಂದು ಹೋದ ಮೇಲೆ ಕ್ಷೇತ್ರದಲ್ಲಿ ಮತ
ಬೇಟೆ ತಂತ್ರ-ರಣತಂತ್ರಗಳ ಲೆಕ್ಕಾಚಾರ ಬುಡಮೇಲಾಗಲಿದೆ ಎಂಬ ವಿಶ್ವಾಸ ಬಿಜೆಪಿ ವಲಯದಲ್ಲಿದೆ. ಇದಕ್ಕಾಗಿ
ಕಾಂಗ್ರೆಸ್‌ ಕೂಡ, ಮೋದಿ ಬಂದು ಹೋದ ಮೇಲೆ, ಪ್ರಿಯಾಂಕಾ ಗಾಂಧಿ ಕರೆಸುವ ಶತ ಪ್ರಯತ್ನ ಮಾಡುತ್ತಿದೆ ಎನ್ನಲಾಗಿದೆ.
ಮೂರು ಬಾರಿ ಗೆದ್ದಿರುವ ಬಿಜೆಪಿಯ ಪಿ.ಸಿ. ಗದ್ದಿಗೌಡರು ವ್ಯಕ್ತಿಗತವಾಗಿ ಒಳ್ಳೆಯವರಿರ ಬಹುದು. ಆದರೆ, ಅವರು ನಾಯಿಯ ಮೊಲೆಯ ಹಾಲು ಇದ್ದಂತಿದ್ದಾರೆ. ಅವರಿಂದ ಕ್ಷೇತ್ರದ ಜನರಿಗೆ, ಕ್ಷೇತ್ರಕ್ಕೆ ಯಾವ ಲಾಭ-ಅಭಿವೃದ್ಧಿಯೂ ಆಗಿಲ್ಲ. ಅಲ್ಲದೇ ಕಾಂಗ್ರೆಸ್‌ ಸಮಾಜಗಳನ್ನೂ ಒಟ್ಟಿಗೆ ಕರೆದುಕೊಂಡು ಹೋಗುವ ಪಕ್ಷ. ಹೀಗಾಗಿ ಇಡೀ ಕ್ಷೇತ್ರದಲ್ಲಿ ಎಲ್ಲ ಜಾತಿ, ಧರ್ಮದವರು ನಮ್ಮ ಪರವಾಗಿ ವಿಶ್ವಾಸ ತೋರುತ್ತಿದ್ದಾರೆ.
 ಶಿವಾನಂದ ಪಾಟೀಲ, ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಮೈತ್ರಿ ಪಕ್ಷದ ಚುನಾವಣೆ ಉಸ್ತುವಾರಿ 
„ಶ್ರೀಶೈಲ ಕೆ. ಬಿರಾದಾರ
Advertisement

Udayavani is now on Telegram. Click here to join our channel and stay updated with the latest news.

Next