Advertisement

ದೇವರಾಣೆ ಪಕ್ಷಾಂತರ ಮಾಡಲ್ಲ; ಗೋವಾದಲ್ಲಿ ಅಭ್ಯರ್ಥಿಗಳಿಂದ ಪ್ರಮಾಣ ಮಾಡಿಸಿಕೊಂಡ ಕಾಂಗ್ರೆಸ್‌

01:53 AM Jan 24, 2022 | Team Udayavani |

ಹೊಸದಿಲ್ಲಿ: “ಶ್ರೀ… ಎಂಬ ಹೆಸರಿನವನಾದ ನಾನು ಚುನಾವಣೆಯಲ್ಲಿ ಗೆದ್ದ ಬಳಿಕ ಯಾವುದೇ ಕಾರಣಕ್ಕೂ ಪಕ್ಷಾಂತರ ಮಾಡುವುದಿಲ್ಲ ಎಂದು ದೇವರ ಮೇಲೆ ಪ್ರಮಾಣ ಮಾಡುತ್ತೇನೆ.’

Advertisement

ಚುನಾವಣೆ ಫ‌ಲಿತಾಂಶ ಪ್ರಕಟಗೊಂಡು ಸಂಪುಟ ರಚನೆಯಾದಾಗ ಸಿಎಂ, ಸಚಿವರು ದೇವರ ಹೆಸರಿನಲ್ಲಿ ಪ್ರಮಾಣ ಸ್ವೀಕರಿಸಿರುವುದನ್ನು ನೋಡಿರುತ್ತೀರಿ. ಆದರೆ ಗೋವಾದಲ್ಲಿ ಚುನಾವಣೆ ನಡೆಯುವ ಮುನ್ನವೇ ಈ ರೀತಿ “ಪ್ರಮಾಣ’ ಮಾಡಿರುವ ವಿಚಿತ್ರ ಘಟನೆ ನಡೆದಿದೆ.

ಅಂದ ಹಾಗೆ, ಹೀಗೆ ಪ್ರಮಾಣ ಮಾಡಿದ್ದು ಬೇರಾರೂ ಅಲ್ಲ, ಕಾಂಗ್ರೆಸ್‌ನ ನಾಯಕರು! ಗೋವಾದಲ್ಲಿ ಕಳೆದ 5 ವರ್ಷಗಳಿಂದಲೂ “ಪಕ್ಷಾಂತರ’ದ ಅತೀ ದೊಡ್ಡ ಬಲಿಪಶುವಾಗಿದ್ದು ಕಾಂಗ್ರೆಸ್‌. 2017ರ ವಿಧಾನಸಭೆ ಚುನಾವಣೆಯಲ್ಲಿ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ ಸರಕಾರ ರಚನೆ ಮಾಡಲು ಕಾಂಗ್ರೆಸ್‌ಗೆ ಸಾಧ್ಯವಾಗಿರಲಿಲ್ಲ. ಅನಂತರದಲ್ಲಿ 17 ಶಾಸಕರ ಪೈಕಿ 15 ಮಂದಿ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ ಬಿಜೆಪಿಗೆ ಸೇರಿದ್ದಾರೆ. ಮತ್ತೂಮ್ಮೆ ಈ ರೀತಿ ಆಗದಿರಲಿ ಎಂಬ ಕಾರಣಕ್ಕೆ ಈಗ ಕಾಂಗ್ರೆಸ್‌ “ಪ್ರಮಾಣ’ದ ಮೊರೆ ಹೋಗಿದೆ.

ಪಕ್ಷದ ಟಿಕೆಟ್‌ ಪಡೆದಿರುವ ಪ್ರತಿಯೊಬ್ಬರಿಂದಲೂ, “ಗೆದ್ದ ಮೇಲೆ ಪಕ್ಷಾಂತರವಾಗುವುದಿಲ್ಲ’ ಎಂದು ದೇವರ ಮೇಲೆ ಪ್ರಮಾಣ ಮಾಡಿಸಿಕೊಳ್ಳಲಾಗಿದೆ. ಜನರ ಮನಸ್ಸಿನಲ್ಲಿ ವಿಶ್ವಾಸ ಹುಟ್ಟಿಸಲು ಈ ರೀತಿ ಮಾಡಿದ್ದೇವೆ ಎಂದು ಗೋವಾ ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಗಿರೀಶ್‌ ಚೋಡಂಕರ್‌ ಹೇಳಿದ್ದಾರೆ.

ಅಭ್ಯರ್ಥಿಗಳೆಲ್ಲರನ್ನು ಪಣಜಿಯ ಮಹಾಲಕ್ಷ್ಮೀ ದೇಗುಲ, ಬಂಬೋಲಿಮ್‌ನಲ್ಲಿರುವ ಚರ್ಚ್‌ ಮತ್ತು ಬೇಟಿಂ ಗ್ರಾಮದಲ್ಲಿರುವ ದರ್ಗಾಗೆ ಕರೆದೊಯ್ದು ಈ ಪ್ರಮಾಣ ಮಾಡಿಸಲಾಗಿದೆ.

Advertisement

ಪಕ್ಷೇತರನಾಗಿ ಪಾರ್ಶೇಕರ್‌ ಸ್ಪರ್ಧೆ: ಟಿಕೆಟ್‌ ಸಿಗಲಿಲ್ಲವೆಂದು ಬಿಜೆಪಿಗೆ ರಾಜೀನಾಮೆ ನೀಡಿರುವ ಗೋವಾ ಮಾಜಿ ಸಿಎಂ ಲಕ್ಷ್ಮೀಕಾಂತ್‌ ಪಾರ್ಶೇಕರ್‌ ಅವರು ಪಕ್ಷೇತರರಾಗಿ ಕಣಕ್ಕಿಳಿಯಲು ನಿರ್ಧರಿಸಿದ್ದಾರೆ. ಹಲವು ರಾಜಕೀಯ ಪಕ್ಷಗಳು ನನಗೆ ಆಹ್ವಾನ ನೀಡಿದ್ದರೂ ನಾನು ನಿರಾಕರಿಸಿದ್ದೇನೆ. ಮಂದ್ರೇಮ್‌ ಕ್ಷೇತ್ರದಿಂದ ಪಕ್ಷೇತರನಾಗಿ ಸ್ಪರ್ಧಿಸುತ್ತೇನೆ ಎಂದು ಅವರು ಘೋಷಿಸಿದ್ದಾರೆ.

ಮಮತಾ ಬ್ಯಾನರ್ಜಿ ನೇತೃತ್ವದ ಪಕ್ಷವು ಕಾಂಗ್ರೆಸ್‌ನ ಹಲವು ನಾಯಕರನ್ನು ತನ್ನತ್ತ ಸೆಳೆದು ಕೊಂಡಿದೆ. ಇದೇ ಕಾರಣಕ್ಕಾಗಿ ನಾವು ಗೋವಾದಲ್ಲಿ ಟಿಎಂಸಿ ಜತೆ ಮೈತ್ರಿ ನಿರಾಕರಿಸಿದೆವು.
-ಪಿ. ಚಿದಂಬರಂ, ಕಾಂಗ್ರೆಸ್‌ ಹಿರಿಯ ನಾಯಕ

ಪಟಿಯಾಲಾದಿಂದ ಕ್ಯಾಪ್ಟನ್‌ ಸ್ಪರ್ಧೆ
ಪಂಜಾಬ್‌ ಮಾಜಿ ಸಿಎಂ ಕ್ಯಾ| ಅಮರೀಂದರ್‌ ಸಿಂಗ್‌ ರವಿವಾರ ತಮ್ಮ ಪಂಜಾಬ್‌ ಲೋಕ್‌ ಕಾಂಗ್ರೆಸ್‌ನ 22 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ. ಅಮರೀಂದರ್‌ ಅವರು ಸ್ವಕ್ಷೇತ್ರ ಪಟಿಯಾಲಾ ನಗರ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ. ಭಾರತ ಹಾಕಿ ತಂಡದ ಮಾಜಿ ಕ್ಯಾಪ್ಟನ್‌ ಅಜಿತ್‌ ಪಾಲ್‌ ಅವರಿಗೆ ನಾಕೋದರ್‌ನ ಟಿಕೆಟ್‌ ನೀಡಲಾಗಿದೆ. 117 ಕ್ಷೇತ್ರಗಳ ಪೈಕಿ 37ರಲ್ಲಿ ಪಂಜಾಬ್‌ ಲೋಕ್‌ ಕಾಂಗ್ರೆಸ್‌ ಸ್ಪರ್ಧಿಸಲಿದ್ದು, ಬಿಜೆಪಿ ಮತ್ತು ಎಸ್‌ಎಡಿ(ಸಂಯುಕ್‌¤) ಜತೆಗೆ ಈಗಾಗಲೇ ಮೈತ್ರಿ ಮಾಡಿಕೊಂಡಿದೆ.

ಫೀಲ್ಡಿಗಿಳಿದ ಪಾಪ್‌ ಗಾಯಕರು: ಪಂಜಾಬ್‌ನ ಚುನಾವಣ ಕಣದಲ್ಲೀಗ ಖ್ಯಾತ ಗಾಯಕರು ರಂಗು ಮೂಡಿಸಿದ್ದಾರೆ. ಪಂಜಾಬಿ ಪಾಪ್‌ ಗಾಯಕರ ಜನಪ್ರಿಯತೆಯನ್ನೇ ದಾಳವಾಗಿಟ್ಟುಕೊಂಡು ವಿವಿಧ ರಾಜಕೀಯ ಪಕ್ಷಗಳು ಈಗ ಪ್ರಚಾರಕ್ಕೆ ಅವರನ್ನು ಬಳಸಿಕೊಳ್ಳಲು ಮುಂದಾಗಿವೆ. ಖ್ಯಾತ ಗಾಯಕ ಶುಭ್‌ದೀಪ್‌ ಸಿಂಗ್‌ ಸಿಧು ಅವರು ಕಾಂಗ್ರೆಸ್‌ ಪರ ಪ್ರಚಾರ ಶುರು ಮಾಡಿದ್ದರೆ, ಆಪ್‌ ಪರ ಅನ್‌ಮೋಲ್‌ ಗಗನ್‌ ಮನ್‌, ಬಲ್ಕಾರ್‌ ಸಿಧು ಪ್ರಚಾರದಲ್ಲಿ ತೊಡಗಿದ್ದಾರೆ.

ರ್‍ಯಾಲಿ, ರೋಡ್‌ಶೋಗೆ ನಿರ್ಬಂಧ: ಯೋಗಿ ಮನೆ-ಮನೆ ಪ್ರಚಾರ
ಚುನಾವಣಾ ರ್‍ಯಾಲಿ, ರೋಡ್‌ಶೋಗಳಿಗಿದ್ದ ನಿರ್ಬಂಧ ವಿಸ್ತರಣೆಯಾದ ಬೆನ್ನಲ್ಲೇ ರವಿವಾರ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ “ಮನೆ-ಮನೆ ಪ್ರಚಾರ’ದ ಮೊರೆ ಹೋಗಿದ್ದಾರೆ. ಗಾಜಿಯಾಬಾ ದ್‌ನ ಮೋಹನ್‌ ನಗರ ಪ್ರದೇಶದಲ್ಲಿ ಪ್ರಚಾರ ನಡೆಸಿದ್ದಾರೆ. ನಮ್ಮ ಸರಕಾರದ ಅವಧಿಯಲ್ಲಿ ಎಕ್ಸ್‌ಪ್ರಸ್‌ವೇಗಳು, ಏರ್‌ಪೋರ್ಟ್‌ಗಳು ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳು ನಡೆದಿವೆ. ಗಾಜಿಯಾಬಾದ್‌ನಲ್ಲಿ ಫಿಲಂ ಸಿಟಿಯನ್ನೂ ನಿರ್ಮಿಸಲಾಗುತ್ತಿದೆ. ಹೀಗಾಗಿ ಮತ್ತೆ ಬಿಜೆಪಿ ಸರಕಾರವೇ ಅಧಿಕಾರಕ್ಕೇರಲಿದೆ ಎಂಬ ವಿಶ್ವಾಸವನ್ನೂ ಅವರು ವ್ಯಕ್ತಪಡಿಸಿದ್ದಾರೆ.

ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್‌: ಬಿಜೆಪಿಯ ಮಿತ್ರಪಕ್ಷ ಅಪ್ನಾ ದಳ್‌ ರವಿವಾರ ತನ್ನ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ವಿಶೇಷವೆಂದರೆ ಸುವಾರ್‌ ಕ್ಷೇತ್ರದಿಂದ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್‌ ನೀಡಲಾಗಿದೆ. ಹೈದರ್‌ ಅಲಿ ಖಾನ್‌ ಎಂಬವರು ಇಲ್ಲಿ ಕಣಕ್ಕಿಳಿಯಲಿದ್ದಾರೆ. ಜೈಲಲ್ಲಿರುವ ಎಸ್‌ಪಿ ಸಂಸದ ಅಜಂ ಖಾನ್‌ ಅವರ ಪುತ್ರ ಅಬ್ದುಲ್ಲಾ ಅಜಂ ವಿರುದ್ಧ ಹೈದರ್‌ ಅಲಿ ಸ್ಪರ್ಧಿಸಲಿದ್ದಾರೆ.

ಮುಲಾಯಂ, ಜಯಾ ತಾರಾ ಪ್ರಚಾರಕರು: ಉ.ಪ್ರದೇಶದ ಮೊದಲ ಹಂತದ ಮತದಾನಕ್ಕೆ 30 ಸ್ಟಾರ್‌ ಕ್ಯಾಂಪೇನರ್‌ಗಳ ಪಟ್ಟಿಯನ್ನು ಸಮಾಜವಾದಿ ಪಕ್ಷ ರವಿವಾರ ಬಿಡುಗಡೆ ಮಾಡಿದೆ. ಅದರಂತೆ, ಪಕ್ಷದ ವರಿಷ್ಠ ಮುಲಾಯಂ ಸಿಂಗ್‌ ಯಾದವ್‌, ಮಾಜಿ ಸಿಎಂ ಅಖಿಲೇಶ್ ಯಾದವ್‌, ಸೊಸೆ ಡಿಂಪಲ್‌ ಯಾದವ್‌, ರಾಜ್ಯಸಭಾ ಸದಸ್ಯೆ ಜಯಾಬಚ್ಚನ್‌, ಪ್ರಧಾನ ಕಾರ್ಯದರ್ಶಿ ರಾಮ್‌ ಗೋಪಾಲ್‌ ಯಾದವ್‌ ಸೇರಿದಂತೆ ಘಟಾನುಘಟಿಗಳು ಎಸ್ಪಿ ಅಭ್ಯರ್ಥಿಗಳ ಪರ ಪ್ರಚಾರದಲ್ಲಿ ತೊಡಗಲಿದ್ದಾರೆ.

ಸಮಾಜದ ಎಲ್ಲ ವರ್ಗಗಳೂ ಪ್ರಧಾನಿ ನರೇಂದ್ರ ಮೋದಿ ಮೇಲೆ ನಂಬಿಕೆಯಿಟ್ಟಿದೆ. ಹೀಗಾಗಿ ಒಬಿಸಿ ಸಚಿವರು, ಶಾಸಕರು ಬಿಜೆಪಿ  ತೊರೆದರೂ ಪಕ್ಷದ ಮೇಲೆ   ಪ್ರತಿಕೂಲ ಪರಿಣಾಮ ಬೀರುವುದಿಲ್ಲ.
ಕೇಶವ ಪ್ರಸಾದ್‌ ಮೌರ್ಯ,
ಉ.ಪ್ರದೇಶ ಡಿಸಿಎಂ

ನಿ. ಕರ್ನಲ್‌ ವಿಜಯ್‌ ರಾವತ್‌ ಸ್ಪರ್ಧೆ ಇಲ್ಲ
ರಕ್ಷಣ ಪಡೆಗಳ ಮುಖ್ಯಸ್ಥರಾಗಿದ್ದ ಹುತಾತ್ಮ ಜ| ಬಿಪಿನ್‌ ರಾವತ್‌ ಅವರ ಸಹೋದರ ನಿವೃತ್ತ ಕರ್ನಲ್‌ ವಿಜಯ್‌ ರಾವತ್‌ ಉತ್ತರಾಖಂಡ ವಿಧಾನಸಭೆ ಚುನಾವಣೆಯಲ್ಲಿ ಕಣಕ್ಕಿಳಿಯುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇತ್ತೀಚೆಗಷ್ಟೇ ಅವರು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ನಾನು ರಾಜ್ಯದ ಜನರ ಸೇವೆ ಮಾಡಲು ಬಯಸುತ್ತೇನೆ ಅಷ್ಟೆ. ಹಾಗಾಗಿ ಚುನಾವಣೆಯಲ್ಲಿ ಕಣಕ್ಕಿಳಿಯುವುದಿಲ್ಲ ಎಂದಿದ್ದಾರೆ. ಇದೇ ವೇಳೆ ಉತ್ತರಾಖಂಡದಲ್ಲಿ ಕಾಂಗ್ರೆಸ್‌ ರವಿವಾರ 53 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next