ರಾಂಚಿ: ಬಂಗಾಳದ ಹೌರಾದಲ್ಲಿ ಭಾರೀ ಮೊತ್ತದ ಹಣದೊಂದಿಗೆ ಸಿಕ್ಕಿಬಿದ್ದ ಜಾರ್ಖಂಡ್‌ನ ಮೂವರು ಶಾಸಕರನ್ನು ಕಾಂಗ್ರೆಸ್ ಭಾನುವಾರ ಅಮಾನತುಗೊಳಿಸಿದೆ.
ಎಐಸಿಸಿ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಪಕ್ಷದ ಜಾರ್ಖಂಡ್ ಉಸ್ತುವಾರಿ ಅವಿನಾಶ್ ಪಾಂಡೆ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ತಕ್ಷಣದಿಂದ ಜಾರಿಗೆ ಬರುವಂತೆ ಮೂವರು ಶಾಸಕರನ್ನು ಅಮಾನತುಗೊಳಿಸಿದ್ದಾರೆ ಎಂದು ತಿಳಿಸಿದ್ದಾರೆ.
ಸುಳಿವಿನ ಮೇರೆಗೆ ಶನಿವಾರ ಪೊಲೀಸರು ಕಾಂಗ್ರೆಸ್ ಶಾಸಕರಾದ ಇರ್ಫಾನ್ ಅನ್ಸಾರಿ, ರಾಜೇಶ್ ಕಚ್ಚಪ್ ಮತ್ತು ನಮನ್ ಬಿಕ್ಸಲ್ ಕೊಂಗಾರಿ ಅವರು ಹೌರಾದ ರಾನಿಹಟಿಯಲ್ಲಿ ರಾಷ್ಟ್ರೀಯ ಹೆದ್ದಾರಿ-16 ರಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಎಸ್‌ಯುವಿಯನ್ನು ತಡೆದು ವಾಹನದಲ್ಲಿ ಅಪಾರ ಪ್ರಮಾಣದ ನಗದು ಪತ್ತೆ ಮಾಡಿದ್ದರು.
ಶನಿವಾರ ಮೂವರು ಶಾಸಕರು ಸಿಕ್ಕಿಬಿದ್ದ ನಂತರ, ಬಿಜೆಪಿ ಜಾರ್ಖಂಡ್‌ನಲ್ಲಿ ತನ್ನ ಸಮ್ಮಿಶ್ರ ಸರ್ಕಾರವನ್ನು ಉರುಳಿಸಲು ಪ್ರಯತ್ನಿಸುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿತ್ತು.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ಶನಿವಾರ ಟ್ವಿಟರ್‌ನಲ್ಲಿ “ಜಾರ್ಖಂಡ್‌ನಲ್ಲಿ ಬಿಜೆಪಿಯ ‘ಆಪರೇಷನ್ ಕಮಲ’ ಇಂದು ರಾತ್ರಿ ಹೌರಾದಲ್ಲಿ ಬಹಿರಂಗವಾಗಿದೆ. ಇ ಡಿ ಮೂಲಕ ಮಹಾರಾಷ್ಟ್ರದಲ್ಲಿ ಅವರು ಮಾಡಿದ್ದನ್ನು ಜಾರ್ಖಂಡ್‌ನಲ್ಲಿ ಮಾಡುವುದು ದೆಹಲಿಯಲ್ಲಿನ ‘ಹಮ್ ದೋ’ ಆಟದ ಯೋಜನೆಯಾಗಿದೆ ಎಂದು ಹೇಳಿದ್ದರು.