Advertisement

Congress ಭದ್ರಕೋಟೆಯಲ್ಲಿ ಕಮಲ ಅರಳಿಸುವ ತವಕ

12:53 AM Apr 21, 2024 | Team Udayavani |

ರಾಮನಗರ: ಕಾಂಗ್ರೆಸ್‌ ಭದ್ರಕೋಟೆಯಲ್ಲಿ ಕಮಲ ಅರಳಿಸುವ ತವಕದಲ್ಲಿ ಬಿಜೆಪಿ ಮತ್ತು ಜೆಡಿಎಸ್‌ ನಾಯಕರು, ಕ್ಷೇತ್ರ ಉಳಿಸಿಕೊಂಡು ಪ್ರಾಬಲ್ಯ ಮೆರೆಯುವ ತವಕದಲ್ಲಿ ಡಿಕೆಎಸ್‌ ಸಹೋದರರು. ಇದು ರಾಜ್ಯದ ಹೈವೋಲ್ಟೆàಜ್‌ ಕ್ಷೇತ್ರಗಳಲ್ಲಿ ಒಂದೆನಿಸಿರುವ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಚಿತ್ರಣ.

Advertisement

ಕಳೆದ ಬಾರಿ ರಾಜ್ಯದಲ್ಲಿ ಕಾಂಗ್ರೆಸ್‌ ಗೆದ್ದಿದ್ದ ಏಕೈಕ ಲೋಕಸಭಾ ಕ್ಷೇತ್ರವನ್ನು ವಶಕ್ಕೆ ಪಡೆಯಲು ಬಿಜೆಪಿಯ ಹೊಸದಿಲ್ಲಿ ನಾಯಕರು ಕಣ್ಣಿರಿಸಿದ್ದಾರೆ. ಅವರಿಗೆ ಜೆಡಿಎಸ್‌ ನಾಯಕರು ಸಾಥ್‌ ನೀಡುವ ಮೂಲಕ ಡಿ.ಕೆ.ಶಿವಕುಮಾರ್‌ ಭದ್ರಕೋಟೆಯನ್ನು ವಶಪಡಿಸಿಕೊಳ್ಳಲು ತಂತ್ರ ನಡೆಸುತ್ತಿದ್ದಾರೆ. ಮೈತ್ರಿ ಪಕ್ಷಗಳಿಗೆ ತಿರುಗೇಟು ನೀಡುವ ಮೂಲಕ ತಮ್ಮ ಶಕ್ತಿ ಪ್ರದರ್ಶನ ಮಾಡುವ ನಿಟ್ಟಿನಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್‌ ಮತ್ತು ಸಂಸದ ಡಿ.ಕೆ.ಸುರೇಶ್‌ ಪ್ರತಿತಂತ್ರ ಹೂಡಿದ್ದಾರೆ.

ಕಾಂಗ್ರೆಸ್‌ ಭದ್ರಕೋಟೆ
1952ರಿಂದ ಇಲ್ಲಿಯವರೆಗೆ ನಾಲ್ಕು ಬಾರಿ ಪುನರ್‌ವಿಂಗಡನೆ ಕಂಡಿರುವ ಈ ಲೋಕಸಭಾ ಕ್ಷೇತ್ರದಲ್ಲಿ ಇದುವರೆಗೆ 17 ಸಾರ್ವತ್ರಿಕ ಚುನಾವಣೆ, 3 ಉಪಚುನಾವಣೆಗಳು ನಡೆದಿದೆ. ಇದರಲ್ಲಿ 14 ಚುನಾವಣೆಗಳಲ್ಲಿ ಕಾಂಗ್ರೆಸ್‌, 2 ಬಾರಿ ಜನತಾ ಪರಿವಾರ ಮತ್ತು 1 ಬಾರಿ ಬಿಜೆಪಿ ಗೆಲುವು ಸಾಧಿಸಿದೆ. 3 ಉಪ ಚುನಾವಣೆಗಳಲ್ಲಿ 2 ಬಾರಿ ಕಾಂಗ್ರೆಸ್‌, 1 ಬಾರಿ ಜೆಡಿಎಸ್‌ ಗೆಲುವು ಸಾಧಿಸಿದ್ದು, ಕಾಂಗ್ರೆಸ್‌ ಭದ್ರಕೋಟೆ ಎನಿಸಿದೆ.

ಎಚ್‌ಡಿಡಿ-ಡಿಕೆಶಿ ಕುಟುಂಬದ ಹಣಾಹಣಿ: ರಾಜಕೀಯವಾಗಿ ಮಾಜಿ ಪ್ರಧಾನಿ ದೇವೇಗೌಡರಿಗೆ ಪುನರ್‌ಜನ್ಮ ನೀಡಿದ್ದು, ಈ ಕ್ಷೇತ್ರದ ಇತಿಹಾಸ. ಕ್ಷೇತ್ರದಲ್ಲಿ ಎಚ್‌ಡಿಡಿ ಮತ್ತು ಡಿಕೆಶಿ ಕುಟುಂಬದ ನಡುವಿನ ರಾಜಕೀಯ ಸಮರಕ್ಕೆ ಸರಿ ಸುಮಾರು 4 ದಶಕಗಳ ಇತಿಹಾಸವಿದೆ. ಇದೀಗ ಐದನೇ ಬಾರಿಗೆ ಎರಡೂ ಕುಟುಂಬಗಳು ಮತ ಸಮರದಲ್ಲಿ ಮುಖಾಮುಖೀಯಾಗಿವೆ. ವೈದ್ಯಕೀಯ ಕ್ಷೇತ್ರದಲ್ಲಿ ಸಾಕಷ್ಟು ಹೆಸರು ಮಾಡಿರುವ ಮಾಜಿ ಪ್ರಧಾನಿ ದೇವೇಗೌಡರ ಅಳಿಯ ಡಾ| ಸಿ.ಎನ್‌.ಮಂಜುನಾಥ್‌ ಅವರನ್ನು ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಸಿದ್ದು, ಕಾಂಗ್ರೆಸ್‌ನಿಂದ ಡಿಸಿಎಂ ಡಿ.ಕೆ.ಶಿವಕುಮಾರ್‌ ಸಹೋದರ ಡಿ.ಕೆ.ಸುರೇಶ್‌ ನಾಲ್ಕನೇ ಬಾರಿಗೆ ಮರು ಆಯ್ಕೆ ಬಯಸಿದ್ದಾರೆ. ಮೈತ್ರಿ ಪಡೆ ಪ್ರಧಾನಿ ಮೋದಿ ಅಲೆ, ಡಾ| ಮಂಜುನಾಥ್‌ ಹೆಸರು, ಮೈತ್ರಿ ಪಕ್ಷಗಳ ಶಕ್ತಿಯನ್ನು ಮುಂದಿಟ್ಟುಕೊಂಡು ಮತದಾರರ ಮುಂದೆ ನಿಂತಿದೆ. ಇತ್ತ ಕಾಂಗ್ರೆಸ್‌ ಪಕ್ಷ ಕಳೆದ 10 ವರ್ಷಗಳಲ್ಲಿ ಡಿ.ಕೆ.ಸುರೇಶ್‌ ಮಾಡಿರುವ ಸಾಧನೆ, ರಾಜ್ಯ ಕಾಂಗ್ರೆಸ್‌ ಸರಕಾರದ ಗ್ಯಾರಂಟಿಗಳು ಹಾಗೂ ಡಿ.ಕೆ.ಶಿವಕುಮಾರ್‌ ಅವರ ಪ್ರಾಬಲ್ಯವನ್ನು ನೆಚ್ಚಿಕೊಂಡು ಮತದಾರರ ಮನಗೆಲ್ಲಲು ಮುಂದಾಗಿದೆ.

ಜಾತಿ ಲೆಕ್ಕಾಚಾರ: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಒಕ್ಕಲಿಗರೇ ಪ್ರಬಲ ಕೋಮು. ಒಕ್ಕಲಿಗ ಮತದಾರರ ಸಂಖ್ಯೆ 8.70ಲಕ್ಷದಷ್ಟಿದ್ದಾರೆ. ಇನ್ನು ದಲಿತರು 6.80 ಲಕ್ಷದಷ್ಟಿದ್ದು, ಮುಸ್ಲಿಮರು 3.33 ಲಕ್ಷ, ಲಿಂಗಾಯತರು 2.30 ಲಕ್ಷ, ಕುರುಬರು 1.40 ಲಕ್ಷ, ಇತರ ಸಮುದಾಯದ ಮತಗಳು 4.80 ಲಕ್ಷದಷ್ಟಿದ್ದಾರೆ. ಜಾತಿ ಲೆಕ್ಕಾಚಾರವೂ ಕ್ಷೇತ್ರದಲ್ಲಿ ಜೋರಾಗಿದ್ದು, ಇಬ್ಬರು ಅಭ್ಯರ್ಥಿಗಳು ಒಕ್ಕಲಿಗ ಸಮುದಾಯದವರೇ ಆಗಿದ್ದಾರೆ. ಅಹಿಂದ ವರ್ಗ ಸೇರಿದಂತೆ ಇತರೆ ಸಮುದಾಯಗಳ ಮತಗಳು ಚುನಾವಣೆಯ ಫಲಿತಾಂಶದ ಮೇಲೆ ಪರಿಣಾಮ ಬೀರಲಿವೆ.

Advertisement

ಬಲಾಬಲ: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 8 ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕನಕಪುರ, ರಾಮನಗರ, ಮಾಗಡಿ, ಕುಣಿಗಲ್‌ ಮತ್ತು ಆನೇಕಲ್‌ನಲ್ಲಿ ಕಾಂಗ್ರೆಸ್‌ ಶಾಸಕರು ಇದ್ದು, ಬೆಂಗಳೂರು ದಕ್ಷಿಣ ಮತ್ತು ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ಬಿಜೆಪಿ ಶಾಸಕರು ಇದ್ದಾರೆ. ಚನ್ನಪಟ್ಟಣದಲ್ಲಿ ಜೆಡಿಎಸ್‌ ಶಾಸಕರು ಇದ್ದಾರೆ. ಒಟ್ಟಾರೆ 5 ಕ್ಷೇತ್ರಗಳಲ್ಲಿ ಕಾಂಗ್ರೆಸ್‌, 2ರಲ್ಲಿ ಬಿಜೆಪಿ ಒಂದು ಕ್ಷೇತ್ರದಲ್ಲಿ ಜೆಡಿಎಸ್‌ ಶಾಸಕರು ಗೆಲುವು ಸಾಧಿಸಿದ್ದಾರೆ.

ಪ್ರತಿಷ್ಠೆಯ ಕಣ
ಬೆಂಗಳೂರು ಗ್ರಾಮಾಂತರ ಎನ್‌ಡಿಎ ಮತ್ತು ಕಾಂಗ್ರೆಸ್‌ ಪಾಲಿನ ಪ್ರತಿಷ್ಠೆಯ ಕಣವಾಗಿದೆ. ಈಕ್ಷೇತ್ರದಲ್ಲಿ ಗೆಲುವು ಸಾಧಿಸುವ ಮೂಲಕ ಡಿಸಿಎಂ ಡಿ.ಕೆ.ಶಿವಕುಮಾರ್‌ ಸಹೋದರನನ್ನು ಮಣಿಸಿ ಅವರ ನಾಗಾಲೋಟಕ್ಕೆ ಬ್ರೇಕ್‌ ಹಾಕುವ ಹವಣಿಕೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್‌ ನಾಯಕರು ಕಾರ್ಯೋನ್ಮುಖಗೊಂಡಿದ್ದಾರೆ. ಇತ್ತ ತನ್ನ ಸಹೋದರರನನ್ನು ಬಹುಮತದಿಂದ ಗೆಲ್ಲಿಸಿಕೊಳ್ಳುವ ಮೂಲಕ ಎರಡೂ ಪಕ್ಷಗಳಿಗೆ ಟಾಂಗ್‌ ನೀಡಿ, ತನ್ನ ಪಾರುಪತ್ಯವನ್ನು ಮುಂದುವರಿಸಲು ಡಿ.ಕೆ.ಶಿವಕುಮಾರ್‌ ಕಸರತ್ತು ನಡೆಸುತ್ತಿದ್ದಾರೆ. ಹೀಗಾಗಿ ಕ್ಷೇತ್ರದಲ್ಲಿ ಪûಾಂತರ ಪರ್ವವೂ ಮುಗಿಲುಮುಟ್ಟಿದೆ. ಅಂತಿಮವಾಗಿ ಮತದಾರರ ಯಾರಿಗೆ ಆಶೀರ್ವಾದ ಮಾಡಿಯಾನು ಕಾಯ್ದು ನೋಡಬೇಕಿದೆ.

ಡಿ.ಕೆ.ಸುರೇಶ್‌ ಸಾಮರ್ಥ್ಯ
11 ವರ್ಷಗಳ ಕಾಲ ಸಂಸ ದರಾಗಿ ಮಾಡಿರುವ ಕೆಲಸ
ಕಾಂಗ್ರೆಸ್‌ ಸರಕಾರದ ಗ್ಯಾರಂಟಿಗಳು
ಡಿಸಿಎಂ ಡಿ.ಕೆ.ಶಿವಕುಮಾರ್‌ ಪ್ರಾಬಲ್ಯ

11 ವರ್ಷ ಸಂಸದನಾಗಿ ಮಾಡಿರುವ ಕೆಲಸಕ್ಕೆ ಕೂಲಿ ಕೇಳುತ್ತಿದ್ದೇನೆ. ಕೇಂದ್ರ ಸರಕಾರದಿಂದ ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯದ ವಿರುದ್ಧ ಹೋರಾಟ ಮುಂದುವರಿಸಲು ಜನರ ಆಶೀರ್ವಾದ ಕೇಳುತ್ತಿದ್ದೇನೆ.
ಡಿ.ಕೆ.ಸುರೇಶ್‌ ಕಾಂಗ್ರೆಸ್‌ ಅಭ್ಯರ್ಥಿ

ಡಾ|ಸಿ.ಎನ್‌. ಮಂಜುನಾಥ್‌ ಎನ್‌ಡಿಎ ಅಭ್ಯರ್ಥಿ ಸಾಮರ್ಥ್ಯ
ಬಿಜೆಪಿ-ಜೆಡಿಎಸ್‌ ಪಕ್ಷಗಳ ಮೈತ್ರಿ
ವೈದ್ಯರಾಗಿ ಸಲ್ಲಿಸಿರುವ ಸೇವೆ ಬಗ್ಗೆ ಇರುವ ಜನಪ್ರಿಯತೆ
ಪ್ರಧಾನಿ ಮೋದಿ, ದೇವೇಗೌಡರ ನಾಮಬಲ

ಇನ್ನಷ್ಟು ಹೆಚ್ಚು ಜನ ಸೇವೆ ಮಾಡುವ ಉದ್ದೇಶ ದಿಂದ ನಾನು ಈ ಚುನಾ ವಣೆಗೆ ಸ್ಪರ್ಧೆ ಮಾಡಿ  ದ್ದೇನೆ. ಪ್ರಧಾನಿ ಮೋದಿ ಅವರ ಅಲೆ, ಬಿಜೆಪಿ-ಜೆಡಿಎಸ್‌ ಕಾರ್ಯಕರ್ತರ ಉತ್ಸಾಹ, ಜನರ ಸ್ಪಂದನೆ ನನ್ನಲ್ಲಿ ಗೆಲುವಿನ ವಿಶ್ವಾಸ ಮೂಡಿಸಿದೆ.
ಡಾ|ಸಿ.ಎನ್‌.ಮಂಜುನಾಥ್‌ ಎನ್‌ಡಿಎ ಅಭ್ಯರ್ಥಿ

ಸು.ನಾ.ನಂದಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next