Advertisement

ಕಾಂಗ್ರೆಸ್‌ ಬುಡ ಅಲ್ಲಾಡಿಸಿದ ಸಿಎಂ ಹೇಳಿಕೆ 

06:00 AM Aug 01, 2018 | |

ಬೆಂಗಳೂರು: “ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಬೇಕಾದರೆ ಮಾಡಿಕೊಳ್ಳಿ, ಹೇಗೆ ಅಭಿವೃದ್ಧಿ ಮಾಡಿಕೊಳ್ಳುತ್ತೀರೋ ನಾನು ನೋಡುತ್ತೇನೆ’
-ಹೀಗೆಂದು ಸಮ್ಮಿಶ್ರ ಸರ್ಕಾರದ ನೊಗ ಹೊತ್ತಿರುವ ಮುಖ್ಯಮಂತ್ರಿ ಎಚ್‌.ಡಿ.ಕುಮಾರ ಸ್ವಾಮಿ ತವರು ಕ್ಷೇತ್ರ ರಾಮನಗರದಲ್ಲಿ ನೀಡಿದ ಹೇಳಿಕೆ ಸಮ್ಮಿಶ್ರ ಸರ್ಕಾರದ ಮಿತ್ರ ಪಕ್ಷ ಕಾಂಗ್ರೆಸ್‌ ನ “ಬುಡ’ ಅಲ್ಲಾಡುವಂತೆ ಮಾಡಿದೆ. ಉತ್ತರ ಕರ್ನಾಟಕ ಭಾಗದ ಕಾಂಗ್ರೆಸ್‌ ನಾಯಕರಿಗೆ ಕುಮಾರಸ್ವಾಮಿ ಹೇಳಿಕೆ ನುಂಗಲಾರದ ತುತ್ತಾಗಿದೆ. ಅವರ ಹೇಳಿಕೆಯಿಂದ ಪಕ್ಷದ ಮೇಲೆ ಆಗುತ್ತಿರುವ ವ್ಯತಿರಿಕ್ತ ಪರಿಣಾಮ ಸರಿಪಡಿಸಲು ತಕ್ಷಣ ಮುಂದಾಗದಿದ್ದರೆ ಲೋಕಸಭೆ ಚುನಾವಣೆಯಲ್ಲಿ ಕಷ್ಟವಾಗಲಿದೆ ಎಂಬ ಆತಂಕ ಕಾಂಗ್ರೆಸ್‌ ನಾಯಕರಲ್ಲಿ ಮೂಡಿದೆ. ಮುಖ್ಯಮಂತ್ರಿ ಹೇಳಿಕೆಯನ್ನು ಪ್ರತಿಪಕ್ಷ ಬಿಜೆಪಿ ರಾಜಕೀಯವಾಗಿ ಬಳಸಿಕೊಳ್ಳಲು ಮುಂದಾಗಬಹುದು ಎಂಬ ಆತಂಕ ಕೂಡ ಅವರಿಗೆ ಎದುರಾಗಿದೆ.

Advertisement

ಕುಮಾರಸ್ವಾಮಿ ನೀಡಿರುವ ಹೇಳಿಕೆಯಿಂದ ರಾಜಕೀಯವಾಗಿ ಜೆಡಿಎಸ್‌ಗೆ ಯಾವುದೇ ರೀತಿಯ ನಷ್ಟವಿಲ್ಲ. ಸಮ್ಮಿಶ್ರ ಸರ್ಕಾರದ ಭಾಗವಾಗಿರುವ ಕಾಂಗ್ರೆಸ್‌ಗೆ ಹೆಚ್ಚಿನ ನಷ್ಟವಾಗಲಿದ್ದು, ಲೋಕಸಭೆ ಚುನಾವಣೆಗೆ ಕ್ಷೇತ್ರ ಹೊಂದಾಣಿಕೆ ಮಾಡಿಕೊಂಡರೆ, ಕಾಂಗ್ರೆಸ್‌ ಪಾಲಿಗೆ ದೊರೆಯುವ 20 ಕ್ಷೇತ್ರಗಳಲ್ಲಿ ಕನಿಷ್ಠ 16 ಕ್ಷೇತ್ರಗಳು ಉತ್ತರ ಕರ್ನಾಟಕ ಭಾಗದಲ್ಲಿಯೇ ಬರುತ್ತವೆ. ಪ್ರಸ್ತುತ ಉತ್ತರ ಕರ್ನಾಟಕದಲ್ಲಿ ಕಲಬುರಗಿ, ರಾಯಚೂರು ಹಾಗೂ ಚಿಕ್ಕೋಡಿ ಕ್ಷೇತ್ರಗಳಲ್ಲಿ ಮಾತ್ರ ಕಾಂಗ್ರೆಸ್‌ ಸಂಸದರಿದ್ದು, ಉಳಿದ ಕ್ಷೇತ್ರಗಲ್ಲಿ ಬಿಜೆಪಿಯೊಂದಿಗೆ ನೇರ ಪೈಪೋಟಿ ನಡೆಸಬೇಕು. ಆದರೆ, ಬಿಜೆಪಿಯವರು ಇದೇ ಭಾವನಾತ್ಮಕ ವಿಷಯ ಮುಂದಿಟ್ಟುಕೊಂಡು ಜನರನ್ನು ಸೆಳೆಯುವ ಪ್ರಯತ್ನ ಮಾಡಿದರೆ ಕಾಂಗ್ರೆಸ್‌ಗೆ ಕಷ್ಟವಾಗಲಿದೆ ಎಂಬುದು ಆ ಭಾಗದ
ಮುಖಂಡರ ವಾದ.

ಲಿಂಗಾಯತ ಎಫೆಕ್ಟ್: ವಿಧಾನಸಭೆ ಚುನಾವಣೆಗೂ ಮುಂಚೆ ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಹೋರಾಟ ಮಾಡಿದ್ದರಿಂದ ಉ.ಕ. ಭಾಗದಲ್ಲಿ ಲಿಂಗಾಯತ ಸಮುದಾಯ ಬಿಜೆಪಿ ಪರವಾಗಿ ನಿಂತಿದ್ದು ಕಾಂಗ್ರೆಸ್‌ ಹಿನ್ನಡೆಗೆ ಕಾರಣವಾಗಿದೆ ಎಂಬ ಅಭಿಪ್ರಾಯ ಇದೆ. ಈಗ ಮತ್ತೂಂದು ಪ್ರತ್ಯೇಕತೆಯ ಹೇಳಿಕೆಯಿಂದ ಕಾಂಗ್ರೆಸ್‌ಗೆ ನಷ್ಟವಾಗಲಿದ್ದು, ಪಕ್ಷದ ನಾಯಕರು ಈ ಬಗ್ಗೆ ತಕ್ಷಣವೇ ಎಚ್ಚೆತ್ತುಕೊಳ್ಳದಿರುವುದು ಆ ಭಾಗದ ಕಾಂಗ್ರೆಸ್‌ ನಾಯಕರ ಮುನಿಸಿಗೆ ಕಾರಣವಾಗಿದೆ. ಈಗಲಾದರೂ ಪಕ್ಷದ ರಾಜ್ಯದ ನಾಯಕರು ಶಾಸಕಾಂಗ ಪಕ್ಷದ ಸಭೆ ಕರೆದು ಉತ್ತರ ಕರ್ನಾಟಕದ ಅಭಿವೃದ್ಧಿಗೆ ಕಾಂಗ್ರೆಸ್‌ ಬದ್ದವಾಗಿದೆ ಎಂಬ ಸಂದೇಶ ರವಾನಿಸಬೇಕು. ಅಲ್ಲದೇ ತಕ್ಷಣ ಸಮನ್ವಯ ಸಮಿತಿ ಸಭೆ ಕರೆದು ಇನ್ಮುಂದೆ ಮುಖ್ಯಮಂತ್ರಿ ಕುಮಾರಸ್ವಾಮಿಗೆ ವಿವಾದಾತ್ಮಕ ಹೇಳಿಕೆ ನೀಡದಂತೆ ಸೂಚನೆ ನೀಡಬೇಕು ಎಂದು ಆ ಭಾಗದ ಕಾಂಗ್ರೆಸ್‌ ನಾಯಕರು ಹೈಕಮಾಂಡ್‌ ಗಮನಕ್ಕೂ
ತಂದಿದ್ದಾರೆ ಎಂದು ತಿಳಿದು ಬಂದಿದೆ.

ಕುಮಾರಸ್ವಾಮಿ ಮೊದಲು ಉತ್ತರ ಕರ್ನಾಟಕ ಹೋರಾಟಗಾರರ ಮನಸ್ಸು ಗೆಲ್ಲಬೇಕು. ಆ ಭಾಗದ ಅಭಿವೃದ್ಧಿಗೆ ನ್ಯಾಯಯುತವಾಗಿ ಆರ್ಥಿಕ ಅನುದಾನ ಸಿಗುವಂತೆ ಮಾಡಲು ವಿಶೇಷ ಕಾಳಜಿ ವಹಿಸಬೇಕು. ಕಾಂಗ್ರೆಸ್‌ ಕೂಡ ಅಖಂಡ ಕರ್ನಾಟಕದ ಪರವಾಗಿದೆ ಎನ್ನುವ ವಾತಾವರಣ ಮೂಡಿಸುವ ಪ್ರಯತ್ನ ಮಾಡಬೇಕು.
● ಎಚ್‌.ಕೆ. ಪಾಟೀಲ್‌, ಮಾಜಿ ಸಚಿವ

ಕುಮಾರಸ್ವಾಮಿ ತಮ್ಮ ಪಕ್ಷದ ಪರವಾಗಿ ಮಾತನಾಡಿರಬಹುದು. ಆದರೆ, ಸಮ್ಮಿಶ್ರ ಸರ್ಕಾರದಲ್ಲಿರುವಾಗ ಎಲ್ಲವನ್ನೂ ಅರಿತು ನಡೆಯಬೇಕು.
ಎರಡೂ ಪಕ್ಷದ ಆಗುಹೋಗುಗಳನ್ನು ನೋಡಿಕೊಂಡು ನಡೆಯಬೇಕು. ಉ.ಕ.ಭಾಗದಲ್ಲಿ ಕಾಂಗ್ರೆಸ್‌ಗೆ 40 ಸ್ಥಾನ ದೊರೆತಿದೆ. ಸಮಗ್ರ ಕರ್ನಾಟಕ ನಮ್ಮೆಲ್ಲರ ಅಭಿಪ್ರಾಯ. ಈ ಬಗ್ಗೆ ಚರ್ಚೆ ಮಾಡುತ್ತೇವೆ.

● ಎಂ.ಬಿ. ಪಾಟೀಲ್‌, ಮಾಜಿ ಸಚಿವ

Advertisement

ಮುಖ್ಯಮಂತ್ರಿ ಕುಮಾರಸ್ವಾಮಿಯವರು ಪ್ರತ್ಯೇಕ ರಾಜ್ಯದ ಕೂಗು ಕೇಳಿ ಬರುತ್ತಿರುವ ಜಿಲ್ಲೆಗಳ ಎಲ್ಲ ಶಾಸಕರು ಮತ್ತು ಮಠಾಧಿಪತಿಗಳ ಸಭೆ ಕರೆದು
ಅವರಲ್ಲಿ ವಿಶ್ವಾಸ ಮೂಡಿಸಬೇಕು. ಒಂದು ವೇಳೆ, ಪ್ರತ್ಯೇಕತೆಯ ಧ್ವನಿ ಗಟ್ಟಿಯಾದರೆ ಅದಕ್ಕೆ ಜೆಡಿಎಸ್‌ -ಕಾಂಗ್ರೆಸ್‌ ಜಂಟಿ ಸರಕಾರ ಹಾಗೂ ಮುಖ್ಯಮಂತ್ರಿ ಕುಮಾರಸ್ವಾಮಿ ಕಾರಣರಾಗುತ್ತಾರೆ. 

● ಕೋಟ ಶ್ರೀನಿವಾಸ  ಪೂಜಾರಿ, ವಿಧಾನಪರಿಷತ್‌ ವಿಪಕ್ಷ ನಾಯಕ

 ಶಂಕರ ಪಾಗೋಜಿ

Advertisement

Udayavani is now on Telegram. Click here to join our channel and stay updated with the latest news.

Next