ಹೊಸದಿಲ್ಲಿ: ಬಹುಕೋಟಿ ರೂಪಾಯಿ ಮೌಲ್ಯದ ಬಿಟ್‌ಕಾಯಿನ್ ಹಗರಣವು ಕರ್ನಾಟಕದ ಆಡಳಿತ ಮತ್ತು ವಿಪಕ್ಷಗಳ ನಡುವೆ ತೀವ್ರ ವಾಕ್ಸಮರಕ್ಕೆ ಕಾರಣವಾಗಿದೆ. 5,650 ಕೋಟಿ ರೂ. ಮೊತ್ತದ ಈ ಹಗರಣದ ಕುರಿತು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತನಿಖೆಯಾಗಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ.
ಶನಿವಾರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲ ಅವರು ದಿಲ್ಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಕರ್ನಾಟಕದ ಬಿಜೆಪಿ ಸರಕಾರಕ್ಕೆ ಪ್ರಶ್ನೆಗಳ ಸುರಿಮಳೆ ಸುರಿಸಿದ್ದಾರೆ. ದೇಶವು ಈವರೆಗೆ ಕಂಡುಕೇಳರಿಯದ ಅತೀ ದೊಡ್ಡ ಬಿಟ್‌ಕಾಯಿನ್ ಹಗರಣ ಕರ್ನಾಟಕದಲ್ಲಿ ಬೆಳಕಿಗೆ ಬಂದಿದೆ. ಈ ಕುರಿತು ನ್ಯಾಯಯುತ ತನಿಖೆ ನಡೆಸುವ ಬದಲು ಕರ್ನಾಟಕ ಸರಕಾರವು “ಆಪರೇಷನ್ ಬಿಟ್ ಕಾಯಿನ್ ಕವರ್‌ಅಪ್’ (ಹಗರಣವನ್ನು ಮುಚ್ಚಿಹಾಕುವ ಕಾರ್ಯಾಚರಣೆ)ನಲ್ಲಿ ನಿರತವಾಗಿದೆ. ಇಷ್ಟೊಂದು ಗಂಭೀರವಾದ ಹಗರಣ ನಡೆದರೂ ಪ್ರಧಾನಿ ಮೋದಿ ಮತ್ತು ಕೇಂದ್ರ ಗೃಹ ಸಚಿವರು ಮೌನಕ್ಕೆ ಶರಣಾಗಿರುವುದು ಆಘಾತಕಾರಿ ಎಂದು ರಣದೀಪ್ ಸುರ್ಜೇವಾಲ ಅವರು ಕಿಡಿಕಾರಿದ್ದಾರೆ.
ಮೋದಿ ನೇತೃತ್ವದಲ್ಲಿ ಸಭೆ :
ಹೊಸದಿಲ್ಲಿ: ಕ್ರಿಪ್ಟೋಕರೆನ್ಸಿ ಹೂಡಿಕೆ, ಕ್ರಿಪ್ಟೋ ಮೂಲಕ ಹಣಕಾಸು ಅಕ್ರಮ ವರ್ಗಾವಣೆ, ಉಗ್ರರಿಗೆ ಹಣಕಾಸು ನೆರವು ಮತ್ತಿತರ ವಿಚಾರಗಳಿಗೆ ಸಂಬಂಧಿಸಿ ಪ್ರಧಾನಿ ಮೋದಿ ನೇತೃತ್ವದಲ್ಲಿ ಶನಿವಾರ ರಾತ್ರಿ ಉನ್ನತ ಸಭೆ ನಡೆದಿದೆ. ಕ್ರಿಪ್ಟೋ ಕರೆನ್ಸಿಯಲ್ಲಿ ಹೂಡಿಕೆ ಮಾಡಿದರೆ ಭಾರೀ ಲಾಭ ಪಡೆಯಬಹುದು ಎಂಬ ಸುಳ್ಳು ಮಾಹಿತಿ ಹರಿದಾಡುತ್ತಿರುವ ಹಿನ್ನೆಲೆ ಮತ್ತು ಕ್ರಿಪ್ಟೋ ಮಾರುಕಟ್ಟೆಗಳು ಉಗ್ರರಿಗೆ ಹಣಕಾಸು ನೆರವು, ಹಣಕಾಸು ಅಕ್ರಮಕ್ಕೆ ದಾರಿ ಮಾಡಿಕೊಡುವ ಸಾಧ್ಯತೆ ಇರುವುದರಿಂದ ಈ ಸಭೆ ಕರೆಯಲಾಗಿತ್ತು ಎಂದು ಮೂಲಗಳು ತಿಳಿಸಿವೆ. ಕ್ರಿಪ್ಟೋಕರೆನ್ಸಿ ಗಳು ದೇಶದ ಆರ್ಥಿಕತೆಗೆ ಗಂಭೀರ ಅಪಾಯ ಉಂಟುಮಾಡಲಿದೆ ಎಂದು ಆರ್‌ಬಿಐ ಕಳವಳ ವ್ಯಕ್ತಪಡಿಸಿದೆ.
ಗಂಭೀರ ಅಂತಾರಾಷ್ಟ್ರೀಯ ಅಪರಾಧ ಪ್ರಕರಣವಾಗಿದ್ದರೂ 5 ತಿಂಗಳ ಕಾಲ ಇಂಟರ್‌ಪೋಲ್‌ಗೆ ಸರಕಾರ ಮಾಹಿತಿ ನೀಡಿರಲಿಲ್ಲ. ಸಿಬಿಐ, ಎಸ್‌ಎಫ್ಐಒ, ಜಾರಿ ನಿರ್ದೇಶನಾಲಯಕ್ಕೂ ಮಾಹಿತಿ ನೀಡಿರಲಿಲ್ಲ. ಈ ಹಗರಣ ನಡೆದಿದ್ದ ಸಮಯದಲ್ಲಿ ಬೊಮ್ಮಾಯಿ ಗೃಹ ಸಚಿವರಾಗಿದ್ದರು. 2016ರಲ್ಲಿ ಬಿಟ್‌ಫಿನೆಕ್ಸ್‌ನಲ್ಲಿ 1.20 ಲಕ್ಷ ಬಿಟ್‌ಕಾಯಿನ್‌ಕಳವಾಗಿದ್ದವು. ಇದನ್ನು ಶ್ರೀಕೃಷ್ಣ ಒಪ್ಪಿಕೊಂಡಿದ್ದರೂ ರಾಜ್ಯ ಸರಕಾರ ಮತ್ತು ಬಿಜೆಪಿ ಎಲ್ಲರನ್ನೂ ಕತ್ತಲೆಯಲ್ಲಿಟ್ಟಿತು ಎಂದು ಸುರ್ಜೇವಾಲ ಆರೋಪಿಸಿದ್ದಾರೆ.
ಇದೇ ಜನವರಿಯಲ್ಲಿ ಶ್ರೀಕೃಷ್ಣನಿಂದ 9 ಕೋ.ರೂ. ಮೌಲ್ಯದ 31 ಬಿಟ್‌ಕಾಯಿನ್ ವಶಕ್ಕೆ ಪಡೆಯಲಾಗಿದೆ ಎಂದು ಪಂಚನಾಮೆಯಲ್ಲಿ ಪೊಲೀಸರು ಉಲ್ಲೇಖೀಸಿದ್ದಾರೆ. ಅವನಲ್ಲಿದ್ದ 186 ಬಿಟ್‌ಕಾಯಿನ್‌ಗಳನ್ನು ವಶಕ್ಕೆ ಪಡೆಯಲು ಪ್ರಯತ್ನಿಸಲಾಗುತ್ತಿದೆ ಎಂದು ಜ. 22ರಂದು ಪೊಲೀಸರು ಹೇಳಿದ್ದರು. ಆದರೆ ಪೊಲೀಸರ ಪ್ರಕಾರ, 31 ಮತ್ತು 186 ಬಿಟ್‌ಕಾಯಿನ್‌ಗಳು ವರ್ಗಾವಣೆ ಆಗಿಲ್ಲ. ಹಾಗಾದರೆ ಅವು ಎಲ್ಲಿ ಹೋದವು ಎಂದು ಸುರ್ಜೇವಾಲ ಪ್ರಶ್ನಿಸಿದ್ದಾರೆ.