ಹುಬ್ಬಳ್ಳಿ: ಉತ್ತರ ಕರ್ನಾಟಕ ಭಾಗದ ಯುವಕರಿಗೆ ಉದ್ಯೋಗ ಹಾಗೂ ರಾಜ್ಯದ ಜನರಿಗೆ ಆರೋಗ್ಯ ಮಾಹಿತಿ ನೀಡುತ್ತಿದ್ದ 104 ಆರೋಗ್ಯ ಸಹಾಯವಾಣಿಗೆ ಬೀಗ ಜಡಿದು ಎರಡು ವರ್ಷ ಕಳೆದಿವೆ. ಯೋಜನೆ ಪುನಾರಂಭಿಸುವ ಭರವಸೆ ನೀಡಿದ್ದ ಕಾಂಗ್ರೆಸ್ ಸರ್ಕಾರ ಮೌನಕ್ಕೆ ಜಾರಿದೆ.
ಸಾಮಾನ್ಯ ವ್ಯಕ್ತಿಗೂ ಬೆರಳು ತುದಿಯಲ್ಲಿ ಆರೋಗ್ಯ ಸೇವೆ ದೊರೆಯಬೇಕು ಎನ್ನುವ ಕಾರಣಕ್ಕೆ ಅಂದಿನ ಮುಖ್ಯಮಂತ್ರಿಯಾಗಿದ್ದ ಜಗದೀಶ ಶೆಟ್ಟರ್ ಅವರು 104 ಸಹಾಯವಾಣಿ ಯೋಜನೆಗೆ 2013ರಲ್ಲಿ ಚಾಲನೆ ನೀಡಿದರು. 2018ರಲ್ಲಿ ಬೆಂಗಳೂರಿನಲ್ಲಿ ಮತ್ತೊಂದು ಕೇಂದ್ರ ಆರಂಭವಾಯಿತು. ಈ ಸಹಾಯವಾಣಿ ಕೇಂದ್ರವನ್ನು ಹುಬ್ಬಳ್ಳಿಯ ಐಟಿ ಪಾರ್ಕ್‌ನಲ್ಲಿ ಆರಂಭಿಸುವ ಮೂಲಕ ಈ ಭಾಗದ ಸುಮಾರು 300 ಯುವಕರಿಗೆ ಉದ್ಯೋಗ ನೀಡಲಾಗಿತ್ತು. ಬಿಜೆಪಿ ಸರ್ಕಾರ 2021ರ ನವೆಂಬರ್ ಕೊನೆ ವಾರದಲ್ಲಿ ಯೋಜನೆಗೆ ತಿಲಾಂಜಲಿ ಇಟ್ಟಿತು. 2022 ಫೆಬ್ರವರಿ ತಿಂಗಳಲ್ಲಿ ಅಧಿಕೃತವಾಗಿ ಬೀಗ ಜಡಿಯಲಾಯಿತು.
ಭರವಸೆ ಈಡೇರಿಸಲಿಲ್ಲ: ವ್ಯವಸ್ಥಿತವಾಗಿ ಯೋಜನೆಗೆ ಸ್ಥಗಿತಗೊಳಿಸಲಾಗಿದೆ. ಆರಂಭದಲ್ಲಿ ಬಿಎಸ್‌ಎನ್ ಎಲ್‌ಗೆ ಪಾವತಿ ಮಾಡಬೇಕಾದ 40 ಲಕ್ಷ ರೂ. ಬಾಕಿ ನಂತರದಲ್ಲಿ ಯೋಜನೆ ವೆಚ್ಚದಾಯಕ ಎನ್ನುವ ಕಾರಣ ನೀಡಿ ಹಂತ ಹಂತವಾಗಿ ದುರ್ಬಲಗೊಳಿಸಿ ಬೀಗ ಜಡಿಯಲಾಯಿತು. ಕೇಂದ್ರ ಉಳಿಸಿಕೊಳ್ಳಲು ಸಿಬ್ಬಂದಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಮನೆ ಬಾಗಿಲಿಗೆ ಅಲೆದಾಡಿ ಸುಸ್ತಾದರು. ಆಗ ಕಾಂಗ್ರೆಸ್ ಶಾಸಕರು ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಪುನಾರಂಭಿಸುತ್ತೇವೆ ಎನ್ನುವ ಭರವಸೆ ನೀಡಿದ್ದರು. ಅಷ್ಟೇ ಏಕೆ ಆರೋಗ್ಯ ಸಚಿವ ದಿನೇಶ ಗುಂಡೂರಾವ್ ಅವರನ್ನು ಭೇಟಿಯಾದ ಸಂದರ್ಭ ಮತ್ತೆ ಚಾಲನೆ ನೀಡಲಾಗುವುದು ಎನ್ನುವ ನಿರೀಕ್ಷೆ ಮೂಡಿಸಿದ್ದರು. ಆದರೆ ಈತನಕ ಪುನಾರಂಭವಾಗುವ ನಿರೀಕ್ಷೆಗಳು ಕಾಣುತ್ತಿಲ್ಲ ಎಂಬುದು ಸಿಬ್ಬಂದಿ ಅಳಲಾಗಿದೆ.
ಈ ಸಹಾಯವಾಣಿಗೆ ಆರೋಗ್ಯ ಸಮಸ್ಯೆ, ಸಲಹೆ ಸೇರಿದಂತೆ ವಿವಿಧ ಸೇವೆಗಳ ರೂಪದಲ್ಲಿ ನಿತ್ಯ 18-20 ಸಾವಿರ ಕರೆಗಳು ಬರುತ್ತಿದ್ದವು. ಕೋವಿಡ್ ಸಂದರ್ಭ ಇದರ ಸಂಖ್ಯೆ ದುಪ್ಪಟ್ಟಾಗಿತ್ತು. 181 ಮಹಿಳಾ ಸಹಾಯವಾಣಿ, 14410 ಆಪ್ತಮಿತ್ರ ಹಾಗೂ ಕೋವಿಡ್ ಕೇಂದ್ರೀಕೃತ ಸಹಾಯವಾಣಿ 1075 ಕೂಡ ಇದೇ ಕೇಂದ್ರದ ಮೂಲಕ ಕಾರ್ಯನಿರ್ವಹಿಸುತ್ತಿತ್ತು. ಆದರೆ ಕೋವಿಡ್
ಸಂದರ್ಭ ಕರ್ತವ್ಯ ನಿರ್ವಹಿಸಿದವರಿಗೆ ಘೋಷಿಸಿದ್ದ ವಿಶೇಷ ಭತ್ಯೆ ಕೂಡ ದೊರೆಯಲಿಲ್ಲ.
ಬಹುಪಯೋಗಿ ಯೋಜನೆ: ಅದೆಷ್ಟೋ ಜನರಿಗೆ ಆರೋಗ್ಯ ಮಾಹಿತಿ, ಆರೋಗ್ಯ ಸಲಹೆ, ಸರ್ಕಾರಿ ಆಸ್ಪತ್ರೆಗಳ ಮಾಹಿತಿ, ವೈದ್ಯರ ವಿವರ, ಕಾಯಿಲೆಗೆ ಸೂಕ್ತ ಚಿಕಿತ್ಸೆ, ವೈದ್ಯರು, ಸಿಬ್ಬಂದಿ ಕರ್ತವ್ಯ ಲೋಪದ ದೂರು, ಕೇಂದ್ರ-ರಾಜ್ಯ ಸರ್ಕಾರದ ಆರೋಗ್ಯ ಯೋಜನೆಗಳು, ಅವುಗಳನ್ನು ಪಡೆಯುವ ವಿಧಾನ, ವೈದ್ಯರ ಭೇಟಿಗೆ ಹಿಂದೇಟು ಹಾಕುವವರು ಸಹಾಯವಾಣಿ ಮೂಲಕ ಆಪ್ತಸಮಾಲೋಚನೆ ಪಡೆಯುತ್ತಿದ್ದರು. ಇಷ್ಟೊಂದು ಬಹೋಪಯೋಗಿ ಯೋಜನೆಗೆ ಉಳಿಸಿಕೊಳ್ಳುವ ಬದಲು ಮುಚ್ಚಲಾಯಿತು. ನಿರ್ವಹಣಾ ಸಂಸ್ಥೆಯೊಂದಿಗೆ ಮಾಡಿಕೊಂಡಿದ್ದ ಒಡಂಬಡಿಕೆ ಪ್ರಕಾರ ಸರ್ಕಾರ ಅನುದಾನ ಬಿಡುಗಡೆ ಮಾಡಲಿಲ್ಲ ಎಂಬುದು ಅಂದು ಗುತ್ತಿಗೆ ಪಡೆದಿದ್ದ ಸಂಸ್ಥೆಯ ಆರೋಪವಾಗಿತ್ತು.
ಒಂದು ದಿನವೂ ಬಿಡುವಿಲ್ಲದೆ ಕಾರ್ಯನಿರ್ವಹಿಸುತ್ತಿದ್ದ ಯೋಜನೆ ಸ್ಥಗಿತಗೊಳಿಸಿ ಬರೋಬ್ಬರಿ ಎರಡು ವರ್ಷ ಕಳೆದಿವೆ. ಇದನ್ನೇ ನಂಬಿದ್ದ ಹಲವರು ವಯಸ್ಸು ಮೀರಿ ಬೇರೆಡೆ ಕೆಲಸವಿಲ್ಲದ ನಿರುದ್ಯೋಗಿಗಳಾಗಿದ್ದರೆ, ಕೆಲವರು ಇತರೆಡೆ ಸಣ್ಣ ಪುಟ್ಟ ಕೆಲಸ ಮಾಡಿಕೊಂಡು ಯೋಜನೆ ಆರಂಭವಾಗುವ ನಿರೀಕ್ಷೆಯಲ್ಲೇ ದಿನದೂಡುತ್ತಿದ್ದಾರೆ. ಸರ್ಕಾರ ಮನಸ್ಸು ಮಾಡಿದರೆ ರಾಜ್ಯದ ಜನರಿಗೆ ಬೆರಳ ತುದಿಯಲ್ಲಿ ಆರೋಗ್ಯ ಸೇವೆ, ಯುವಕರಿಗೆ ಉದ್ಯೋಗ ಕಲ್ಪಿಸಿದಂತಾಗಲಿದೆ.
ಹಿಂದಿನ ಸರ್ಕಾರ ವ್ಯವಸ್ಥಿತವಾಗಿ ಯೋಜನೆಯನ್ನು ಮುಚ್ಚಿತು. ಆದರೆ ಹೊಸದಾಗಿ ಬಂದ ಕಾಂಗ್ರೆಸ್ ಸರ್ಕಾರ ಪುನಾರಂಭಿಸುವ ದಟ್ಟವಾದ ಭವಸೆಗಳಿದ್ದವು. ಆದರೆ ಏಳು ತಿಂಗಳಾದರೂ ಯಾವ ಲಕ್ಷಣಗಳೂ ಕಾಣುತ್ತಿಲ್ಲ. ಯೋಜನೆ ಪುನಾರಂಭದಿಂದ ಜನರಿಗೆ ಆರೋಗ್ಯ ಮಾಹಿತಿ ಹಾಗೂ ನಮ್ಮಂತಹ ಯುವಕರಿಗೆ ಉದ್ಯೋಗ ದೊರೆಯಲಿದೆ.
*ಮಲ್ಲಿಕಾರ್ಜುನ ಶಾನಭೋಗರ,
ಮಾಜಿ ಸಿಬ್ಬಂದಿ
104 ಸಹಾಯವಾಣಿ ವಿಚಾರದಲ್ಲಿ ಹಿಂದಿನ ಸರ್ಕಾರ ಕೈಗೊಂಡ ನಿರ್ಧಾರ ನಮ್ಮಂತಹ ಸಾಕಷ್ಟು ಯುವಕರನ್ನು ಬೀದಿ ಪಾಲು ಮಾಡಿದೆ. ಈಗಿನ ಸರ್ಕಾರ ಇದನ್ನು ಪುನಾರಂಭಿಸಿದರೆ ಸಾಕಷ್ಟು ನೆರವಾಗಲಿದೆ.
*ರಾಜೇಶ ಪಾಟೀಲ, ಮಾಜಿ ಸಿಬ್ಬಂದಿ
*ಹೇಮರಡ್ಡಿ ಸೈದಾಪುರ