ಮೈಸೂರು: ಕಾಂಗ್ರೆಸ್ ಪಕ್ಷ ಏನು ಎಂಬುದು ಜನರಿಗೆ ಗೊತ್ತಿದೆ. ಅವರೀಗ ಜಲ ಮತ್ತು ಎಸ್ಸಿ/ಎಸ್ಟಿ ಮೀಸಲಾತಿ ವಿಚಾರದ ಬಗ್ಗೆ ಸಮಾವೇಶ ಮಾಡುತ್ತಿದ್ದಾರೆ. ಆದರೆ ಮಹದಾಯಿ ವಿವಾದವಾಗಲು ಕಾಂಗ್ರೆಸ್ ಕಾರಣ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ನಗರದ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸೋನಿಯಾ ಗಾಂಧಿ ಗೋವಾ ಚುನಾವಣೆಗೆ ಹೋಗಿ ಮಹದಾಯಿಯ ಒಂದು ಹನಿ ನೀರನ್ನೂ ಕೊಡಲ್ಲ ಎಂದದ್ದು ಜನ ಮರೆತಿಲ್ಲ ಎಂದು ವಾಗ್ಧಾಳಿ ನಡೆಸಿದರು.
ಕಾಂಗ್ರೆಸ್ ನವರು ಐದು ವರ್ಷ ಅಧಿಕಾರದಲ್ಲಿ ಏನು ಮಾಡಿದರು? ಕೆನಾಲ್‌ಗೆ ಅಡ್ಡಲಾಗಿ ನೀರು ಬರಬಾರದೆಂದು ಗೋಡೆ ಕಟ್ಟಿಸಿದರು. ಕೃಷ್ಣಾ ವಿಚಾರದಲ್ಲೂ ನಮ್ಮ ಹಕ್ಕನ್ನು ಮಂಡಿಸಲು ಮೀನಮೇಷ ಮಾಡಿದರು. ಇವರಿಗೆ ಯಾವ ನೈತಿಕತೆ ಇದೆ? ಎಸ್‌ಸಿ, ಎಸ್ ಟಿ ಮೀಸಲಾತಿ ಬಗ್ಗೆ 40 ವರ್ಷವಾದರೂ ತಿರುಗಿ ನೋಡಿರಲಿಲ್ಲ. ನಿನ್ನೆ ಸಿದ್ದರಾಮಯ್ಯ ನಾವು ಅಧಿಕಾರಕ್ಕೆ ಬಂದರೆ ಪರಿಶಿಷ್ಟ ಜಾತಿಯ ಒಳ ಮೀಸಲಾತಿ ಜಾರಿಗೆ ತರುತ್ತೇವೆ ಎಂದು ಟ್ವೀಟ್ ಮಾಡಿದರು.
ಸಿದ್ದರಾಮಯ್ಯನವರು ಐದು ವರ್ಷ ಮುಖ್ಯಮಂತ್ರಿ ಆಗಿದ್ದರೂ ಆ ವರದಿ ಮಂಡನೆ ಮಾಡಲಿಲ್ಲ. ಮೊನ್ನೆ ನಡೆದ ಸಮಾವೇಶದಲ್ಲಿ ಇವರು ಹೋಗಿ ಕೇವಲ ದೀಪ ಹಚ್ಚಿ ಬಂದರು. ಇವೆಲ್ಲವೂ ಜನರ ಮನದಾಳದಲ್ಲಿ ಇದೆ. ಎಲ್ಲ ಮುಚ್ಚಿ ಹಾಕಿಕೊಳ್ಳಲು ಸಮಾವೇಶ ಮಾಡುತ್ತಿದ್ದಾರೆ. ಜನರನ್ನು ಪದೇ ಪದೆ ಮರಳು ಮಾಡಲು ಸಾಧ್ಯವಿಲ್ಲ ಎಂದು ತಿರುಗೇಟು ನೀಡಿದರು.
ಮಾಂಡೋಸ್ ಚಂಡಮಾರುತ ವಿಚಾರವಾಗಿ ಮಾತನಾಡಿ, ಕೆಲವೊಂದು ಗೊಂದಲಗಳಾಗಿವೆ, ಸಂಬಂಧಪಟ್ಟ ಇಲಾಖೆಯಿಂದ ವರದಿ ತರಸಿ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು. ಸಂಪುಟ ವಿಸ್ತರಣೆ ಕುರಿತು ಮಾತನಾಡಿ, ಈಗ ಪ್ರಮುಖವಾಗಿರುವುದು ಗಡಿ ವಿಚಾರ. ಅಲ್ಲಿ ಏನಾದರೂ ಪ್ರಸ್ತಾಪ ಮಾಡಿದರೆ ಎಲ್ಲ ರೆಡಿ ಮಾಡಿಕೊಂಡು ಹೋಗಿರುತ್ತೇನೆ ಎಂದರು.