Advertisement

ಸಣ್ಣ ಸಮುದಾಯಗಳನ್ನು ಕಾಂಗ್ರೆಸ್‌ ಗುರುತಿಸಿದೆ

12:43 PM Oct 15, 2018 | Team Udayavani |

ಬೆಂಗಳೂರು: ಕಾಂಗ್ರೆಸ್‌ ಪಕ್ಷ ಸಣ್ಣ ಸಮುದಾಯದವರನ್ನೂ ಗುರುತಿಸಿ ಉನ್ನತ ಹುದ್ದೆಯನ್ನು ನೀಡಲಿದೆ ಎಂಬುವುದಕ್ಕೆ ಸವಿತಾ ಸಮುದಾಯದ ಮುಖಂಡ ಎಂ.ಸಿ.ವೇಣುಗೋಪಾಲ್‌ ಅವರೇ ಸಾಕ್ಷಿ. ಸಾಮಾಜಿಕ, ಆರ್ಥಿಕವಾಗಿ ತೀರಾ ಹಿಂದುಳಿದಿರು ಸವಿತಾ ಸಮಾಜದ ಏಳ್ಗೆಗೆ ಅವರು ಶ್ರಮಿಸಲಿ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಆಶಿಸಿದರು.

Advertisement

ಜಯನಗರದ ನಾಗರಿಕ ವೇದಿಕೆ, ಪೂರ್ಣಿಮಾ ಕನ್ವೆಂನನ್‌ ಹಾಲ್‌ನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ವಿಧಾನ ಪರಿಷತ್‌ ಸದಸ್ಯ ವೇಣುಗೋಪಾಲ್‌ ಅವರ ಅಭಿನಂದನಾ ಸಮಾರಂಭದಲ್ಲಿ  ಮಾತನಾಡಿ, ವಿದ್ಯಾರ್ಥಿ ದಿಸೆಯಲ್ಲೇ ವೇಣುಗೋಪಾಲ್‌ ಅವರು ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಪಕ್ಷದ ಹಲವು ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿ ಪಕ್ಷ ಸಂಘಟನೆ ಮಾಡಿದ್ದಾರೆ.

ಹೀಗಾಗಿ ವೇಣುಗೋಪಾಲ್‌ ಅವರಿಗೆ ಮೇಲ್ಮನೆ ಸದಸ್ಯ ಹುದ್ದೆ ಒಲಿದು ಬಂದಿದ್ದು ಮುಂದಿನ ದಿನಗಳಲ್ಲಿ ಕಾಂಗ್ರೆಸ್‌ ಪಕ್ಷವನ್ನು ಮತ್ತಷ್ಟು ಸಂಘಟಿಸಲಿ ಎಂದು ಹೇಳಿದರು. ಇದೇ ವೇಳೆ ಮಾತನಾಡಿದ,  ಆಹಾರ ಮತ್ತು ನಾಗರೀಕ ಖಾತೆ ಸಚಿವ ಜಮೀರ್‌ ಅಹಮದ್‌ ಖಾನ್‌, ಉಪ ಚುನಾವಣೆ ನಂತರ ಜೆಡಿಎಸ್‌-ಕಾಂಗ್ರೆಸ್‌ ಸಮಿಶ್ರ ಸರ್ಕಾರ ಪತನವಾಗುತ್ತೆ ಎಂದು ಭವಿಷ್ಯ ಹೇಳುತ್ತಿರುವ ರಾಜ್ಯ ಬಿಜೆಪಿ ಮುಖಂಡರು, ಅಧಿಕಾರಕ್ಕಾಗಿ ಹಗಲುಗನಸು ಕಾಣುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು. 

ಸುಸ್ಥಿರ ಸರ್ಕಾರದ ಗುರಿ ಕಾಂಗ್ರೆಸ್‌ ಪಕ್ಷದ್ದಾಗಿದ್ದು, ಈ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಹೈಕಮಾಂಡ್‌ ಎಚ್‌.ಡಿ.ಕುಮಾರ ಸ್ವಾಮಿ ಅವರಿಗೆ ಮುಖ್ಯಮಂತ್ರಿ ಹುದ್ದೆಯನ್ನು ಬಿಟ್ಟುಕೊಟ್ಟಿದೆ. ಐದು ವರ್ಷಗಳ ಕಾಲ ಕುಮಾರಸ್ವಾಮಿ ಅವರೇ ಮುಖ್ಯಮಂತ್ರಿಯಾಗಿರಲಿದ್ದು, ಇದರಲ್ಲಿ ಯಾವುದೇ ಅನುಮಾನ ಬೇಡ. ರಾಜ್ಯದ ಅಭಿವೃದ್ಧಿಗಾಗಿ ಸಮಿಶ್ರ ಸರ್ಕಾರ ಶ್ರಮಿಸಲಿದೆ ಎಂದು ತಿಳಿಸಿದರು.

ಮುಖ್ಯಮಂತ್ರಿ ಎಚ್‌.ಡಿ.ಕುಮಾರ ಸ್ವಾಮಿ ಅವರು ಉತ್ತಮವಾದ ಆಡಳಿತ ನೀಡುತ್ತಿದ್ದಾರೆ. ರೈತರ ಸಾಲವನ್ನು ಮನ್ನಾ ಮಾಡಿ  ರಾಜ್ಯದ ಅನ್ನದಾತರ ಹಿತ ಕಾಯ್ದಿದ್ದಾರೆ. ಇದನ್ನು ಸಹಿಸಿಕೊಳ್ಳಲಾಗದ ಬಿಜೆಪಿ ಮುಖಂಡರು, ವ್ಯರ್ಥ ಆರೋಪದಲ್ಲಿ ನಿರತರಾಗಿದ್ದಾರೆ.ಅವರ ಮಾತುಗಳಿಗೆ ಕಿವಿಗೊಡಬೇಡಿ ಎಂದು ಹೇಳಿದರು.

Advertisement

ಶಾಸಕಿ ಸೌಮ್ಯ ರೆಡ್ಡಿ ಮಾತನಾಡಿ, ತಮಗಾಗಿ ವೇಣುಗೋಪಾಲ್‌ ಅವರು ಕ್ಷೇತ್ರ ತ್ಯಾಗ ಮಾಡಿದ್ದಾರೆ. ಅಲ್ಲದೆ ಜಯನಗರ ಕ್ಷೇತ್ರದಲ್ಲಿ ತಮ್ಮ ಗೆಲುವಿಗೆ ಕಾರಣರಾಗಿದ್ದಾರೆ. ಹೀಗಾಗಿ ಅವರಿಗೆ ಕೃತಜ್ಞತೆ ಸಲ್ಲಿಸುತ್ತಿರುವುದಾಗಿ ತಿಳಿಸಿದರು.

ಅಭಿನಂದನೆ ಸ್ವೀಕರಿಸಿ ಮಾತನಾಡಿದ ವೇಣುಗೋಪಾಲ್‌, ನನಗೆ ವಿಧಾನ ಪರಿಷತ್‌ ಸ್ಥಾನ ದೊರಕಲು ಸಹಾಯ ಮಾಡಿದೆ ಎಲ್ಲಾ ನಾಯಕರಿಗೂ ಧನ್ಯವಾದ ಹೇಳುವುದಾಗಿ ನುಡಿದರು. ಶಾಸಕ ರಾಮಲಿಂಗಾ ರೆಡ್ಡಿ, ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಚಂದ್ರಶೇಖರ ಕಂಬಾರ, ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷ ಮರುಳಸಿದ್ದಪ್ಪ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ತಬ್ಬಿಬ್ಬಾದ ಜಮೀರ್‌ ಅಹಮ್ಮದ್‌!: ವೇದಿಕೆಯಲ್ಲಿ ಮಾತನಾಡುತ್ತಿದ್ದಾಗ ದಿನೇಶ್‌ ಗುಂಡುರಾವ್‌, ಕಳೆದ ಬಾರಿಯೇ ವೇಣುಗೋಪಾಲ್‌ ಜಯನಗರದಲ್ಲಿ ಗೆಲ್ಲಬೇಕಾಗಿತ್ತು. ಆದರೆ, ಜಮೀರ್‌ ಖಾನ್‌ ಅವರಿಂದಾಗಿ ಸೋತರು ಎಂದು ಹೇಳಿದಾಗ. ಗುಂಡುರಾವ್‌ ಪಕ್ಕವೇ ಆಸೀನರಾಗಿದ್ದ ಸಚಿವ ಜಮೀರ್‌ ಅಹಮ್ಮದ್‌ ಖಾನ್‌ ಒಂದು ಸಲ ತಬ್ಬಿಬ್ಬಾದರು. 

ಆಗ ಎಚ್ಚೆತ್ತುಕೊಂಡ ದಿನೇಶ್‌ಗುಂಡೂರಾವ್‌, ಕಳೆದ ಬಾರಿ ಜಮೀರ್‌ ಅವರ ಜೆಡಿಎಸ್‌ ಪಕ್ಷದಲ್ಲಿದ್ದರು. ಹೀಗಾಗಿ, ಜೆಡಿಎಸ್‌ ಅಭ್ಯರ್ಥಿ ಬೆಂಬಲಿಸಿದ್ದರು. ಜೆಡಿಎಸ್‌ ಅಭ್ಯರ್ಥಿ ಹಾಕಿದ್ದು, ವೇಣುಗೋಪಾಲ್‌ ಅವರ ಸೋಲಿಗೆ ಕಾರಣವಾಯಿತು ಎಂದು ಹೇಳಿ ಸಭೆಯನ್ನು ನೆಗೆಗಡಲಲ್ಲಿ ತೇಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next