Advertisement

Congress Rally: ವೀಡಿಯೋ ತೋರಿಸಿ ಮೈತ್ರಿ ನಾಯಕರಿಗೆ ಡಿ.ಕೆ.ಶಿವಕುಮಾರ್‌ ಚಾಟಿ!

12:32 AM Aug 07, 2024 | Team Udayavani |

ಮಂಡ್ಯ: ಬಿಜೆಪಿ ಹಾಗೂ ಜೆಡಿಎಸ್‌ ನಾಯಕರು ಮೈತ್ರಿಗೂ ಮುನ್ನ ಹಾಗೂ ಮೈತ್ರಿ ಅನಂತರ ಆಡಿರುವ ಭಿನ್ನಾಭಿಪ್ರಾಯಗಳ ಮಾತು ಹಾಗೂ ಯೂಟರ್ನ್ ಹೊಡೆದಿರುವ ಮಾತುಗಳ ವೀಡಿಯೋ ಪ್ರದರ್ಶಿಸುವ ಮೂಲಕ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ನಿಮ್ಮ ಮಾತುಗಳಿಗೆ ನೀವೇ ಉತ್ತರ ನೀಡಿ ಎಂದು ವಾಗ್ಧಾಳಿ ನಡೆಸಿದರು.

Advertisement

ಮಂಗಳವಾರ ಮಂಡ್ಯದಲ್ಲಿ ನಡೆದ ಜನಾಂದೋಲನ ಸಮಾವೇಶ ಉದ್ಘಾಟಿಸಿ ಮಾತನಾಡಿ, ನಾನು ನನ್ನ ಸಚಿವ ಸಹೋದ್ಯೋಗಿಗಳನ್ನು ನಂಬುವುದಿಲ್ಲ. ನಾನು ನಂಬುವುದು ಯಡಿಯೂರಪ್ಪ, ಕುಮಾರಸ್ವಾಮಿ, ದೇವೇಗೌಡ, ಸಿ.ಪಿ. ಯೋಗೇಶ್ವರ್‌, ಬಸನಗೌಡ ಪಾಟೀಲ್‌ ಯತ್ನಾಳ್‌, ಜಿ.ಟಿ. ದೇವೇಗೌಡ, ಡಾ| ಅಶ್ವತ್ಥನಾರಾಯಣ ಅವರ ಮಾತುಗಳ ಮೇಲೆ ನಂಬಿಕೆ ಇದೆ ಎಂದು ವ್ಯಂಗ್ಯವಾಡಿದರು. ಜೆಡಿಎಸ್‌-ಬಿಜೆಪಿ ನಾಯಕರು ಆಡಿರುವ ಮಾತುಗಳನ್ನು ಒಮ್ಮೆ ಕೇಳಿ ಎಂದು ವೀಡಿಯೋ ಪ್ರದರ್ಶನ ಮಾಡಿದರು.

15 ನಿಮಿಷಗಳ ವೀಡಿಯೋ
ಯಡಿಯೂರಪ್ಪ ಸದನದಲ್ಲಿ ಕುಮಾರಸ್ವಾಮಿ ವಿರುದ್ಧ, ಯತ್ನಾಳ್‌ ವಿಜಯೇಂದ್ರ ವಿರುದ್ಧ, ಕುಮಾರಸ್ವಾಮಿ ಬಗ್ಗೆ ಸಿ.ಪಿ. ಯೋಗೇಶ್ವರ್‌, ಡಾ| ಅಶ್ವತ್ಥನಾರಾಯಣ, ಕುಮಾರಸ್ವಾಮಿ ಯಡಿಯೂರಪ್ಪ, ಮೋದಿ, ಅಶ್ವತ್ಥನಾರಾಯಣ ವಿರುದ್ಧ ಮಾತನಾಡಿರುವ ವೀಡಿಯೋ ಪ್ರದರ್ಶನ ನಡೆಯಿತು. ಅಲ್ಲದೆ ಕಾವೇರಿ, ಮೇಕೆದಾಟು ಯೋಜನೆಗೆ ನೀಡಿರುವ ವಾಗ್ಧಾನ, ಅನಂತರ ಯೂಟರ್ನ್ ಹೊಡೆದಿರುವ ಬಗ್ಗೆ ಮಾತನಾಡಿರುವ ವೀಡಿಯೋ ಬಿಡುಗಡೆ ಮಾಡಲಾಯಿತು.

ಮೇಕೆದಾಟು ಯೋಜನೆಗೆ ಅನುಮತಿ ಕೊಡಿಸಿ
ಅನಂತರ ಮಾತು ಮುಂದುವರಿಸಿದ ಡಿ.ಕೆ. ಶಿವಕುಮಾರ್‌, ನಿಮ್ಮ ಮಾತುಗಳಿಗೆ ನೀವೇ ಉತ್ತರ ಕೊಡಿ, ಹಿಂದೆ ಮಂಡ್ಯದಲ್ಲಿ ವರುಣಾ ನಾಲೆಗಾಗಿ ಚೆಡ್ಡಿ ಪಾದಯಾತ್ರೆ, ಕಾವೇರಿಗಾಗಿ ಎಸ್‌.ಎಂ. ಕೃಷ್ಣ ಅವರ ಪಾದಯಾತ್ರೆ ಹಾಗೂ ಮೇಕೆದಾಟು ಯೋಜನೆಗಾಗಿ ನಾವು ಪಾದಯಾತ್ರೆ ಮಾಡಿದ್ದೆವು. ಆದರೆ ನೀವು ಯಾವ ಪುರುಷಾರ್ಥಕ್ಕೆ ಪಾದಯಾತ್ರೆ ಮಾಡುತ್ತಿದ್ದೀರಾ? ಈಗಾಗಲೇ ಕೆಆರ್‌ಎಸ್‌ ಜಲಾಶಯದಿಂದ ತಮಿಳುನಾಡಿಗೆ 147 ಟಿಎಂಸಿ ನೀರು ಹರಿದು ಹೋಗಿದೆ.

ಜುಲೈಯಲ್ಲಿ 41 ಟಿಎಂಸಿ ನೀರು ಹರಿಸಬೇಕಿತ್ತು. ಆದರೆ ಇಂದು ಅತಿ ಹೆಚ್ಚು ನೀರು ಹರಿದು ಹೋಗಿದೆ. ಇದರಲ್ಲಿ 60 ಟಿಎಂಸಿ ನೀರು ಸಮುದ್ರ ಸೇರಿದೆ. ಈ ಸಮುದ್ರ ಸೇರಿರುವ ಸಂಗ್ರಹಿಸಿ ಜನರಿಗೆ ನೀಡುವ ಉದ್ದೇಶವಿದೆ. ಆದ್ದರಿಂದ ಮೇಕೆದಾಟು ಯೋಜನೆಗೆ ಅನುಮತಿ ಕೊಡಿಸಿ ಎಂದು ಆಗ್ರಹಿಸಿದರು.

Advertisement

ಬಿಜೆಪಿ-ಜೆಡಿಎಸ್‌ ಮೇಲೆ 108 ಹಗರಣ: ಚಲುವರಾಯಸ್ವಾಮಿ
ಮಂಡ್ಯ: ಬಿಜೆಪಿ ಮತ್ತು ಜೆಡಿಎಸ್‌ ಮೇಲೆ ಒಂದಲ್ಲ, ಎರಡಲ್ಲ 108 ಹಗರಣಗಳಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್‌. ಚಲುವರಾಯಸ್ವಾಮಿ ಆರೋಪಿಸಿದರು. ಜನಾಂದೋಲನ ಸಮಾವೇಶದಲ್ಲಿ ಮಾತನಾಡಿ, ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ, ಮಾಜಿ ಸಿಎಂ ಯಡಿಯೂರಪ್ಪ, ಶಾಸಕ ಅಶ್ವತ್ಥ ನಾರಾಯಣ, ವಿಜಯೇಂದ್ರ ಅವರ ನಾಯಕತ್ವದಲ್ಲಿ ಬಿಜೆಪಿ-ಜೆಡಿಎಸ್‌ ಪಾದಯಾತ್ರೆ ನಡೆಯುತ್ತಿದೆ. ವಿಪಕ್ಷದ ನಾಯಕ ಆರ್‌. ಅಶೋಕ್‌ ಮತ್ತು ಅಶ್ವತ್ಥ ನಾರಾಯಣ ಅವರದ್ದು ಒಂದು ಗುಂಪು, ವಿಜಯೇಂದ್ರ ಅವರದ್ದು ಒಂದು ಗುಂಪಿದೆ ಎಂದರು.

ರಾಜ್ಯದ ಜನತೆ ರಾಹುಲ್‌ ಗಾಂಧಿ , ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ಡಿಕೆಶಿ ಅವರನ್ನು ನಂಬಿ 136 ಸೀಟುಗಳನ್ನು ಗೆಲ್ಲಿಸಿದ್ದಾರೆ. ರಾಜ್ಯದ ಜನತೆಯ ಸಮಸ್ಯೆಗಳು ನಮಗೆ ಮುಖ್ಯ. ಒಂದು ವರ್ಷ ರಾಜ್ಯದಲ್ಲಿ ರೈತರ ಬರಗಾಲ ಸಮಸ್ಯೆ ಹಾಗೂ ಜನರ ಸಮಸ್ಯೆಗೆ ಸ್ಪಂದಿಸಿದ್ದೇವೆ. ಇದು ತಪ್ಪಾ ಎಂದು ಜೆಡಿಎಸ್‌-ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದರು.

Advertisement

Udayavani is now on Telegram. Click here to join our channel and stay updated with the latest news.

Next