ಬೆಂಗಳೂರು: ರಫೇಲ್ ಯುದ್ಧ ವಿಮಾನ ಖರೀದಿಯಲ್ಲಿನ ಅವ್ಯವಹಾರದ ಬಗೆಗೆ ತನಿಖೆ ನಡೆಸಲು ಮುಂದಾಗಿದ್ದ ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಅವರನ್ನು ಬಲವಂತವಾಗಿ ರಜೆ ಮೇಲೆ ಕಳುಹಿಸಿರುವ ಕ್ರಮ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಶುಕ್ರವಾರ ಗಂಗಾನಗರದ ಸಿಬಿಐ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.
ಸಿಬಿಐಯನ್ನು ರಕ್ಷಿಸಿ, ಪ್ರಧಾನಿ ನರೇಂದ್ರ ಮೋದಿ ಕ್ಷಮೆಯಾಚಸಲಿ ಎಂಬ ನಾಮಫಲಕಗಳನ್ನು ಪ್ರದರ್ಶಿಸಿ ಪ್ರಧಾನಿ ವಿರುದ್ಧ ಘೋಷಣೆ ಕೂಗಿದರು. ಅಲ್ಲದೇ ಮೋದಿ ಅವರು ಸಿಬಿಐ ಸಂಸ್ಥೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದು, ಈ ಸಂಬಂಧ ರಫೇಲ್ ಯುದ್ಧ ವಿಮಾನ ಖರೀದಿಯಲ್ಲಿನ ಹಗರಣದ ಕುರಿತು ತನಿಖೆ ನಡೆಸಲು ಮುಂದಾಗಿದ್ದ ವರ್ಮಾ ಅವರನ್ನು ರಾತ್ರೋರಾತ್ರಿ ರಜೆಯ ಮೇಲೆ ವರ್ಗಾಯಿಸಿದ್ದಾರೆ ಎಂದು ಆರೋಪಿಸಿದರು.
ಮೋದಿ ಮತ್ತು ಅಮಿತ್ ಶಾ ಸೇರಿ ಕೇಂದ್ರ ತನಿಖಾದಳದ(ಸಿಬಿಐ)ನ ನಿರ್ದೇಶಕರನ್ನು ಅಕ್ರಮವಾಗಿ, ಅಸಂವಿಧಾನಿಕವಾಗಿ ಹಾಗೂ ಕಾನೂನು ಬಾಹಿರವಾಗಿ ತೆಗೆದು ಹಾಕಿರುವುದು ಭಾರತದ ಅತ್ಯುನ್ನತ ತನಿಖಾ ಸಂಸ್ಥೆಗೆ ಮಾಡಿದ ಅವಮಾನವಾಗಿದೆ ಎಂದು ದೂರಿದೆ.
ಸಿಬಿಐ ಅಧಿಕಾರಿಯನ್ನು ಅಸಂವಿಧಾನಿಕವಾಗಿ ಹುದ್ದೆಯಿಂದ ತೆಗೆದು ಹಾಕಿರುವುದನ್ನು ಖಂಡಿಸುತ್ತೇವೆ. ಕೂಡಲೇ ಅವರನ್ನು ಮತ್ತೆ ಅದೇ ಸ್ಥಾನದಲ್ಲಿ ಪುನರ್ ನಿಯುಕ್ತಿಗೊಳಿಸಬೇಕು ಎಂದು ಕಾಂಗ್ರೆಸ್ ಕಾರ್ಯಕರ್ತರು ಒತ್ತಾಯಿಸಿದ್ದಾರೆ.
ವಿಡಿಯೋ: ಫಕ್ರುದ್ದೀನ್