Advertisement
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಸತ್ ಸದಸ್ಯರು ಹಾಗೂ ಎಐಸಿಸಿ ಪದಾಧಿಕಾರಿಗಳು ದೆಹಲಿಯಲ್ಲಿ ನಡೆಯಲಿರುವ ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ. ದೆಹಲಿಯ ಕಾಂಗ್ರೆಸ್ ಕಚೇರಿಯಿಂದ ಇ.ಡಿ.ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಲಿದ್ದು ರಾಹುಲ್ ಗಾಂಧಿಯವರನ್ನು ಎಷ್ಟು ಹೊತ್ತು ವಿಚಾರಣೆ ನಡೆಸಲಾಗುವುದೋ ಅಷ್ಟೊತ್ತು ಪ್ರತಿಭಟನೆ ಮಾಡಲಾಗುವುದು. ಈ ಪ್ರತಿಭಟನೆಯಲ್ಲಿ ರಾಜ್ಯದ ಎಲ್ಲಾ ಶಾಸಕರು, ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಲಿದ್ದಾರೆ. ಈ ಪ್ರತಿಭಟನೆ ವಿಚಾರವಾಗಿ ಬ್ಲಾಕ್ ಹಾಗೂ ಜಿಲ್ಲಾ ಕಾಂಗ್ರೆಸ್ ಮುಖಂಡರ ಜೊತೆ ಚರ್ಚೆ ನಡೆಸಿದ್ದೇವೆ. ಹೆಚ್ಚಿನ ಸಂಖ್ಯೆಯಲ್ಲಿ ಜನ ಪ್ರತಿಭಟನೆಯಲ್ಲಿ ಭಾಗವಹಿಸಬೇಕು. ರಾಜ್ಯದ ಇತರೆ ಭಾಗಗಳಿಂದ ಪ್ರತಿಭಟನೆಗೆ ಆಗಮಿಸುವವರು ಹಿಂದಿನ ದಿನವೇ ಬೆಂಗಳೂರಿಗೆ ಬರಬೇಕೆಂದು ಈ ಮೂಲಕ ಕರೆ ನೀಡುತ್ತಿದ್ದೇವೆ ಎಂದರು.
Related Articles
Advertisement
ನಮ್ಮ ನಾಯಕರುಗಳು ಇಂತಹ ಬೆದರಿಕೆಗಳಿಗೆ ಹೆದರುವುದಿಲ್ಲ. ಅವರು ಜೈಲಿಗೆ ಹೋಗಲು ಸಿದ್ಧರಿದ್ದಾರೆ. ಗಾಂಧಿ ಕುಟುಂಬದ ಇಂದಿರಾಗಾಂಧಿ ಹಾಗೂ ರಾಜೀವ್ ಗಾಂಧಿಯವರು ಈ ದೇಶಕ್ಕಾಗಿ ಪ್ರಾಣವನ್ನೇ ತ್ಯಾಗ ಮಾಡಿದ್ದಾರೆ ಎಂದರು.
ರಾಜ್ಯಸಭೆ ಚುನಾವಣೆಯಲ್ಲಿ ಎರಡನೇ ಪ್ರಾಶಸ್ತ್ಯ ಮತಗಳು ಬಿಜೆಪಿಗೆ ಹೋಗಿವೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ ಬಿಜೆಪಿಗೆ ಮತ ಹಾಕಿರುವುದನ್ನು ಯಾರೂ ನೋಡಿಲ್ಲ. ಮೊದಲ ಪ್ರಾಶಸ್ತ್ಯದ ಅಷ್ಟೂ ಮತಗಳು ನಮಗೆ ಬಂದಿವೆ. ಎಲ್ಲ ಪಕ್ಷಗಳಿಗೂ ಅವರದೇ ಆದ ಒತ್ತಡವಿತ್ತು. 69 ಮತಗಳನ್ನು ನಾನೇ ಕಣ್ಣಾರೆ ಕಂಡಿದ್ದೇನೆ. ನಮ್ಮ ಪಕ್ಷದ ಯಾವುದೇ ಶಾಸಕರು ಬಿಜೆಪಿ ಅಭ್ಯರ್ಥಿಗೆ ಮತ ಹಾಕಿಲ್ಲ. ಬೇರೆ ಪಕ್ಷಕ್ಕೆ ಹೆಚ್ಚುವರಿ ಮತಗಳು ಬಂದಿರುವ ವಿಚಾರ ನನಗೆ ಗೊತ್ತಿಲ್ಲ’ ಎಂದು ತಿಳಿಸಿದರು.
ಕಾಂಗ್ರೆಸ್ ನಾಯಕರೇ ಬಿಜೆಪಿಗೆ ಬೆಂಬಲ ನೀಡಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನೋವಿನಲ್ಲಿ ಇರುವವರು ನೋವಿನಿಂದ ಮಾತನಾಡುತ್ತಾರೆ. ಸಂತೋಷದಲ್ಲಿ ಇರುವವರು ಸಂತೋಷದಲ್ಲಿ ಮಾತನಾಡುತ್ತಾರೆ. ಅವರು ತಮ್ಮದೇ ಆದ ಪದಗಳನ್ನು ಬಳಸಿ ಮಾತನಾಡುತ್ತಾರೆ. ಎಲ್ಲವನ್ನೂ ಸಂತೋಷದಿಂದ ಸ್ವೀಕರಿಸುತ್ತೇವೆ ‘ ಎಂದರು.
ಜೆಡಿಎಸ್ ನಿಂದ ಅಂತರ ಕಾಯ್ದುಕೊಂಡು ಯಾವ ಸಂದೇಶ ರವಾನಿಸುತ್ತಿದ್ದೀರಿ ಎಂಬ ಪ್ರಶ್ನೆಗೆ, ‘ ಪಕ್ಷದ ಕಾರ್ಯಕರ್ತರನ್ನು ಕೇಳಿ, ಹೇಳುತ್ತಾರೆ. ಇಲ್ಲಿ ಲಾಭ-ನಷ್ಟ ವಿಚಾರ ಬೇರೆ. ಇಲ್ಲಿ ನಮ್ಮ ಪಕ್ಷ ಸ್ವಾಭಿಮಾನದಿಂದ ತೆಗೆದುಕೊಂಡ ನಿರ್ಧಾರಕ್ಕೆ ನಾವು ಬದ್ಧರಾಗಿದ್ದೇವೆ. ಬೇರೆಯವರಿಗೆ ಸ್ವಾಭಿಮಾನ ಇರುವಂತೆ ನಮ್ಮ ಪಕ್ಷಕ್ಕೂ ಸ್ವಾಭಿಮಾನವಿದೆ’ ಎಂದು ಉತ್ತರಿಸಿದರು.