ಚಿಕ್ಕಬಳ್ಳಾಪುರ: “ರಾಜ್ಯವನ್ನು ಹಸಿವು ಮುಕ್ತ ಮಾಡಲು ಅನ್ನಭಾಗ್ಯ ಯೋಜನೆ ಜಾರಿಗೊಳಿಸಿ 7 ಕೆ.ಜಿ.ಅಕ್ಕಿ ಯೋಜನೆ ಜಾರಿಗೊಳಿಸಿದರೆ ಬಿಜೆಪಿ ಸರ್ಕಾರ 5 ಕೆ.ಜಿ.ಗೆ ಇಳಿಸಿದೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪ್ರತಿ ಕುಟುಂಬದ ಸದಸ್ಯರಿಗೆ ತಲಾ 10 ಕೆ.ಜಿ.ಅಕ್ಕಿ ನೀಡುವ ಯೋಜನೆ ಜಾರಿಗೊಳಿಸುತ್ತೇವೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.
ನಗರದ ಶಿಡ್ಲಘಟ್ಟ ವೃತ್ತದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ನಡೆದ ಜನಧ್ವನಿ ಜಾಥಾದಲ್ಲಿ ಮಾತನಾಡಿದರು. ಸಮಾಜದಲ್ಲಿನ ಎಲ್ಲಾ ವರ್ಗಗಳಿಗೆ ಸಾಮಾಜಿಕ ನ್ಯಾಯ ಕಲ್ಪಿಸುವ ಯೋಜನೆ ಜಾರಿಗೊಳಿಸಿ ರೈತರ ಸಾಲ ಮನ್ನಾ ಮಾಡಿದ್ದೇವೆ. ಬಡವರಿಗೆ ಅಕ್ಕಿ ಯೋಜನೆ ಜಾರಿಗೆ ತಂದಿದ್ದೆವು. ರೈತರಿಗೆ ಕೃಷಿಭಾಗ್ಯ, ಪಶುಭಾಗ್ಯ ಹಾಗೂ ಬಡ ಹೆಣ್ಣುಮಕ್ಕಳಿಗೆ ಶಾದಿಭಾಗ್ಯ ಯೋಜನೆ ಸಹಿತ ಅನೇಕ ಕಾರ್ಯಕ್ರಮ ಜಾರಿಗೊಳಿಸಿದ್ದೆವು. ಯಾವುದೇ ಒಂದು ಹಗರಣ ಇಲ್ಲದೇ ಕೊಟ್ಟ ಮಾತಿನಂತೆ ನಡೆದುಕೊಂಡು ಅಧಿಕಾರ ನಡೆಸಿದ್ದೇವೆ. ಆದರೆ, ಕೇಂದ್ರದಲ್ಲಿ 7 ವರ್ಷಗಳಿಂದ ಅಧಿಕಾರ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಎಲ್ಲಾ ರಂಗಗಳಲ್ಲಿ ವಿಫಲವಾಗಿದ್ದು ಬಡವರಿಗೆ ನೀಡುತ್ತಿದ್ದ ಅಕ್ಕಿ ಕಡಿತಗೊಳಿಸಿದ್ದಾರೆ. ಇಂತಹ ಜನ ವಿರೋಧಿ ಸರ್ಕಾರಗಳನ್ನು ಅಧಿಕಾರದಿಂದ ತೊಲಗಿಸಬೇಕೆಂದರು.
ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿದ್ದು ರೈತರು, ಬಡವರು, ಮಹಿಳೆಯರು, ಯುವಕರು ಕೂಲಿ ಕಾರ್ಮಿಕರು ಸಂಕಷ್ಟದಲ್ಲಿ ಜೀವನ ನಡೆಸುತ್ತಿದ್ದಾರೆ. ಸರ್ಕಾರ ಜನ ವಿರೋಧಿ ಧೋರಣೆ ಅನುಸರಿಸಿ ಶೋಷಣೆ ಮಾಡುತ್ತಿದೆ. ಅದಕ್ಕಾಗಿ ಜನಧ್ವನಿ ಹೋರಾಟ ಆರಂಭಿಸಿದ್ದೇವೆಂದರು. ಕರ್ನಾಟಕ ರಾಜ್ಯದ ಇತಿಹಾದಲ್ಲಿ ಇಂತಹ ಭ್ರಷ್ಟ-ಹೇಡಿ ಸರ್ಕಾರ ಎಂದೆಂದಿಗೂ ಬಂದಿಲ್ಲ. ಜನಸಾಮಾನ್ಯರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲು ಸಾಧ್ಯವಿಲ್ಲ ಎಂದರೆ ಅಧಿಕಾರದಲ್ಲಿ ಉಳಿಯಲು ಯಾವ ನೈತಿಕ ಹಕ್ಕಿದೆ. ಈ ಹಿಂದೆ ಅಪ್ಪ(ಸಿಎಂ ಯಡಿಯೂರಪ್ಪ) ಅವರು ಚೆಕ್ ಮೂಲಕ ಲಂಚ ಸ್ವೀಕರಿಸಿದರೆ ಮಗ ವಿಜಯೇಂದ್ರ ಆರ್‌ಟಿಜಿಎಸ್ ಮೂಲಕ ಲಂಚ ಸ್ವೀಕರಿಸುತ್ತಿದ್ದಾನೆ. ಇನ್ನೂ ಮೊಮ್ಮಗ ಇನ್ನೊಂದೆ ಹೆಜ್ಜೆ ಮುಂದೆ ಹೋಗಿದ್ದಾನೆ. ಮಾನ ಮರ್ಯಾದೆ ಇಲ್ಲದ ಜನ ಅಧಿಕಾರದಲ್ಲಿ ಇರಬಾರದೆಂದರು.
ಜೆಡಿಎಸ್ ಮಣ್ಣಿನ ಮಕ್ಕಳು, ರೈತರ ಪಕ್ಷ ಎನ್ನುತ್ತಾರೆ. ನಾವೇನು ಮಣ್ಣಿನ ಮಕ್ಕಳು ಅಲ್ಲವಾ?. ನಾವು ಕೃಷಿಕರಲ್ಲವಾ? ಎಂದು ಪ್ರಶ್ನಿಸಿದ ಮಾಜಿ ಮುಖ್ಯಮಂತ್ರಿ, ರಾಜ್ಯದ ಅಭಿವೃದ್ಧಿಗೆ ಬಿಜೆಪಿ-ಜೆಡಿಎಸ್‌ನ ಯಾವುದೇ ಕೊಡುಗೆ ಇಲ್ಲ. ಜನ ಇಂತಹ ಅವಕಾಶವಾದಿ ಪಕ್ಷಗಳಿಗೆ ಪಾಠ ಕಲಿಸಿ. ಎಲ್ಲಾ ಜನರ ಕಲ್ಯಾಣ ಬಯಸುವ, ನುಡಿದಂತೆ ನಡೆಯುವ ಕಾಂಗ್ರೆಸ್ ಅನ್ನು ಬೆಂಬಲಿಸಿ ಪೆಟ್ರೋಲ್-ಡೀಸೆಲ್-ಅಡುಗೆ ಅನಿಲ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿರುವ ಬಿಜೆಪಿ ಸರ್ಕಾರಗಳ ವಿರುದ್ಧ ಸಿಡಿದೇಳಬೇಕೆಂದು ಕರೆ ನೀಡಿದರು.
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ್, ಮಾಜಿ ಕೇಂದ್ರ ಸಚಿವ ಡಾ.ವೀರಪ್ಪ ಮೊಯ್ಲಿ, ಕೆ.ಎಚ್.ಮುನಿಯಪ್ಪ, ಎಐಸಿಸಿ ಕಾರ್ಯದರ್ಶಿ ಮಧುಯಕ್ಷಿಗೌಡ, ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ, ಸಲೀಂ ಅಹಮದ್, ಈಶ್ವರ ಖಂಡ್ರೆ, ಶಾಸಕರಾದ ವಿ.ಮುನಿಯಪ್ಪ, ಎನ್.ಎಚ್.ಶಿವಶಂಕರರೆಡ್ಡಿ, ಎಸ್. ಎನ್.ಸುಬ್ಟಾರೆಡ್ಡಿ, ಕೃಷ್ಣಬೈರೇಗೌಡ, ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಡಾ.ಪುಷ್ಪಾಅಮರನಾಥ್, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೇಶವರೆಡ್ಡಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ಮೋಹನ್‌ರೆಡ್ಡಿ, ಕೋಚಿಮುಲ್ ನಿರ್ದೇಶಕ ಭರಣಿ ವೆಂಕಟೇಶ್, ಬಿ.ಎಸ್.ರಫೀವುಲ್ಲಾ, ವಕೀಲೆ ಯಾಸ್ಮಿನ್‌ತಾಜ್, ಚಿಕ್ಕಬಳ್ಳಾಪುರ ಮಾಜಿ ಶಾಸಕ ಎಸ್.ಎಂ.ಮುನಿಯಪ್ಪ, ಮುಖಂಡರಾದ ವಿನಯ್ ಎನ್. ಶ್ಯಾಮ್, ರಾಜ್ಯ ಖಾದಿ ಗ್ರಾಮೋದ್ಯೋಗ ಮಂಡಳಿ ಮಾಜಿ ಅಧ್ಯಕ್ಷ ಯಲುವಹಳ್ಳಿ ರಮೇಶ್, ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮುದಾಸೀರ್ ಮತ್ತಿತರರು ಇದ್ದರು.