Advertisement
ಪ್ರತಿಭಟನೆ ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್, ಲೋಕಸಭೆ ಚುನಾವಣೆಯಲ್ಲಿ 7 ಲಕ್ಷ ಮತಗಳ ಅಂತರದಲ್ಲಿ ಗೆದ್ದಿರುವ ರಾಹುಲ್ ಗಾಂಧಿ ಅವರ ಅನರ್ಹತೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕರಾಳ ಅಧ್ಯಾಯ. ನಮ್ಮ ರಾಜ್ಯದಲ್ಲಿ ಮಾಡಿದ ಭಾಷಣ ಇಟ್ಟುಕೊಂಡು ಬಿಜೆಪಿ ಕುತಂತ್ರ ಮಾಡಿದೆ. ನ್ಯಾಯಾಲಯದಲ್ಲಿ ನ್ಯಾಯ ಸಿಗುವ ನಿರೀಕ್ಷೆ ಇತ್ತು. ತೀರ್ಪಿನ ವಿಚಾರವಾಗಿ ನಾವು ಮಾತನಾಡುವುದಿಲ್ಲ. ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಪ್ರಧಾನಿ ಆಗಬಹುದಿತ್ತು. ಆದರೆ, ದೇಶಕ್ಕೆ ಆರ್ಥಿಕ ತಜ್ಞ ಅಗತ್ಯವಿದೆ ಎಂದು ಅಧಿಕಾರ ತ್ಯಾಗ ಮಾಡಿದರು. ರಾಹುಲ್ ಗಾಂಧಿ ಭಾರತ ಜೋಡೋ ಯಾತ್ರೆ ಮೂಲಕ ಬೆಲೆ ಏರಿಕೆ, ನಿರುದ್ಯೋಗದ ಬಗ್ಗೆ ಧ್ವನಿ ಎತ್ತಿ ಭಾರತ ಒಂದುಗೂಡಿಸಲು ಪ್ರಯತ್ನಿಸಿದರು. ಅದರಿಂದ ಅವರಿಗೆ ಸಿಕ್ಕ ಜನಬೆಂಬಲ ಸಹಿಸದೆ ಬಿಜೆಪಿ ಅವರ ಸದಸ್ಯತ್ವ ಅನರ್ಹಗೊಳಿಸಲಾಗಿದೆ ಎಂದು ಆರೋಪಿಸಿದರು.
ಬಿಜೆಪಿ ಸೋಲಿನಿಂದ ಹತಾಶರಾಗಿ ಒಡೆದ ಮನೆ ಆಗಿದೆ. ಅವರಿಗೆ ವಿಪಕ್ಷದ ನಾಯಕನ ಆಯ್ಕೆ ಮಾಡುವ ಸಾಮರ್ಥ್ಯ ಇಲ್ಲವಾಗಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಕುಟುಕಿದರು.