ಕೊಟ್ಟಿಗೆಹಾರ: ಮೋದಿ ಸರ್ಕಾರದಿಂದ ಆಧುನಿಕ ತುಘಲಕ್ ದರ್ಬಾರಿನ ಆಡಳಿತ ನಡೆಸಲಾಗುತ್ತಿದ್ದುಸರ್ಕಾರ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿರುವುದರಿಂದ ಜನಸಾಮಾನ್ಯರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಸುಧಿಧೀರ್ ಕುಮಾರ್ ಮುರೋಳಿ ಹೇಳಿದರು.
ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರಕಾರದ ಜನವಿರೋಧಿ ನೀತಿ ಖಂಡಿಸಿ ಬಣಕಲ್ ಹೋಬಳಿಕಾಂಗ್ರೆಸ್ ಘಟಕದ ವತಿಯಿಂದ ಸೋಮವಾರ ಬಣಕಲ್‌ನಲ್ಲಿ ನಡೆದ ಪ್ರತಿಭಟನಾ ಮೆರವಣಿಗೆ ಮತ್ತು ಸಭೆಯಲ್ಲಿ ಅವರು ಮಾತನಾಡಿದರು. ಬಿಜೆಪಿ ಸರ್ಕಾರ ಇಂಧನದ ದರ ಏರಿಕೆ ಮಾಡಿ ಜನರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ. ಕಾಫಿನಾಡು ಭಾಗದಲ್ಲಿ ನೆರೆಬಂದು ಜನರು ಸಂತ್ರಸ್ತರಾದರು.
ಆದರೆ ಬಿಜೆಪಿಯ ಸಂಸದೆ ಶೋಭಾ ಕರಂದ್ಲಾಜೆ ಆಗಲಿ, ಸಿ.ಟಿ.ರವಿ ಆಗಲಿ ಜನರ ಸಮಸ್ಯೆಗೆ ಸ್ಪಂದಿಸಿಲ್ಲ. ಇದು ಬಿಜೆಪಿ ಸರ್ಕಾರದ ವೈಫಲ್ಯಕ್ಕೆ ಹಿಡಿದ ಕೈಗನ್ನಡಿ. ಬೆಲೆ ಏರಿಕೆ ಇಳಿಸಿ ಜನಪರ ಕೆಲಸವನ್ನು ಬಿಜೆಪಿ ಮಾಡಬೇಕು. ಇಲ್ಲವಾದರೆ ಜನರು ಮುಂದಿನ ದಿನಗಳಲ್ಲಿ ಬಿಜೆಪಿಯನ್ನು ಆಡಳಿತದಿಂದ ಇಳಿಸುವ ಕೆಲಸ ಮಾಡಲಿದ್ದಾರೆ ಎಂದರು.
ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಡಾ| ಕೆ.ಪಿ. ಅಂಶುಮಂತ್ ಮಾತನಾಡಿ, ಸರ್ಕಾರದ ದುರಾಡಳಿತದ ವಿರುದ್ಧ ದ್ವನಿ ಎತ್ತಿದರೆ ದೇಶದ್ರೋಹಿಗಳೆಂದು ಬಿಂಬಿಸುವ ಕೆಲಸ ಮಾಡಲಾಗುತ್ತಿದೆ. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ದಿನಬಳಕೆ ವಸ್ತುಗಳು, ಅಡುಗೆ ಅನಿಲ, ಪಟ್ರೋಲ್, ಡಿಸೇಲ್ ಬೆಲೆ ನಿರಂತರವಾಗಿ ಹೆಚ್ಚಿಸುವ ಮೂಲಕ ಜನಸಾಮಾನ್ಯರ ಬದುಕು ನಾಶ ಮಾಡಲಾಗುತ್ತಿದೆ ಎಂದರು.
ರಾಜ್ಯ ಮಹಿಳಾ ಕಾಂಗ್ರೆಸ್ ಕಾರ್ಯದರ್ಶಿ ನಯನ ಮೋಟಮ್ಮ ಮಾತನಾಡಿ, ಬಿಜೆಪಿಯು ಜನಪರಸರ್ಕಾರವಾಗದೇ ಬೆಲೆ ಏರಿಸಿ ಜನವಿರೋಧಿ ಕೆಲಸಮಾಡುತ್ತಿದೆ. ಕೃಷಿಕರು, ಕಾಫಿ ಬೆಳೆಗಾರರು, ರೈತರು, ಕಾರ್ಮಿಕ ವರ್ಗದವರ ಸಂಕಷ್ಟವನ್ನು ಅರಿತುಕೊಳ್ಳದೆಬದುಕಿನ ಜೊತೆ ಆಟವಾಡುತ್ತಿದೆ. ಮುಂದೆಯೂ ಬಿಜೆಪಿ ಸರ್ಕಾರಕ್ಕೆ ಎಚ್ಚರವಾಗುವವರೆಗೂ ಕಾಂಗ್ರೆಸ್ ಪ್ರತಿಭಟನೆ ಮುಂದುವರಿಸಲಿದೆ ಎಂದರು.
ಪ್ರತಿಭಟನಾ ಸಭೆಯಲ್ಲಿ ಕಾಂಗ್ರೆಸ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಂದ್ರ ಗೌಡ, ಬಣಕಲ್ ಹೋಬಳಿ ಘಟಕದ ಅಧ್ಯಕ್ಷ ಟಿ.ಎಂ. ಸುಬ್ರಹ್ಮಣ್ಯ ಮಾತನಾಡಿದರು.
ಈ ಸಂದರ್ಭದಲ್ಲಿ ಬಾಳೂರು ಹೋಬಳಿ ಘಟಕದ ಅಧ್ಯಕ ಬಿ.ಜಿ.ಶ್ರೀನಾಥ್, ಎಂ.ವಿ. ಚೆನ್ನಕೇಶವಗೌಡ, ಪ್ರಭಾಕರ್ ಬಿನ್ನಡಿ, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಮೆಲ್ವಿನ್ ಲಸ್ರಾದೊ, ಎಸ್.ಟಿ. ಬ್ಲಾಕ್ ಅಧ್ಯಕ್ಷ ಹರೀಶ್, ಅಭಿಲಕ್ಷ್ಮಣ್ ಗೌಡ, ಕೆ.ಆರ್.ಸುಂದರೇಶ್,ಎಂ.ಡಿ. ಮುನಾವರ್, ಕಾಂಗ್ರೆಸ್ ಮುಖಂಡರಾದ ಬಿ.ಎ. ಉಮ್ಮರ್, ಸಬ್ಲಿ ದೇವರಾಜ್, ವೆಂಕಟೇಶ್, ಮನೋಜ್, ಸಿ.ಎಸ್. ವಿನಯ್, ಮನೋಹರ್, ಅಹ್ಮದ್ ಬಾವಾ, ಸುರೇಂದ್ರ ಇದ್ದರು.