ಕಾಪು: ಪಡುಬಿದ್ರಿ – ಕಾರ್ಕಳ ರಾಜ್ಯ ಹೆದ್ದಾರಿಯ ಕಂಚಿನಡ್ಕದಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಟೋಲ್ ಗೇಟ್ ರದ್ಧು ಮತ್ತು ಈ ರಸ್ತೆಯಲ್ಲಿ ಟೋಲ್ ಸ್ಥಾಪನೆ ಹುನ್ನಾರವನ್ನು ಖಂಡಿಸಿ, ಸರಕಾರದ ಗಮನ ಸೆಳೆಯುವ ಉದ್ದೇಶದೊಂದಿಗೆ ಆ. 21 ರಂದು ಬೆಳಿಗ್ಗೆ 10 ಗಂಟೆಗೆ ಕಂಚಿನಡ್ಕದಲ್ಲಿ ಕಾಂಗ್ರೆಸ್ ಪಕ್ಷದ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಮತ್ತು ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಹೇಳಿದ್ದಾರೆ.
ಕಾಪು ಪ್ರೆಸ್ ಕ್ಲಬ್ ನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೃಹತ್ ಪ್ರತಿಭಟನೆಯ ಬಳಿಕ ಆ.22 ರಂದು ಬೆಂಗಳೂರಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಸಹಿತ ವಿವಿಧ ಸಚಿವರನ್ನೊಳಗೊಂಡ ನಿಯೋಗದೊಂದಿಗೆ ಮುಖ್ಯಮಂತ್ರಿಗಳ ಬಳಿ ತೆರಳಿ ಮನವಿ ಸಲ್ಲಿಸಲಾಗುವುದು ಎಂದರು.
ಪ್ರತಿಭಟನೆಗೆ ಸಾರ್ವಜನಿಕರ ಸಹಿತವಾಗಿ ಕಾಪು ಬ್ಲಾಕ್ ಕಾಂಗ್ರೆಸ್ ನ ದಕ್ಷಿಣ ಮತ್ತು ಉತ್ತರ ವಿಭಾಗ, ಜಿಲ್ಲಾ ಕಾಂಗ್ರೆಸ್ ಮತ್ತು ಜಿಲ್ಲೆಯ ಎಲ್ಲಾ ಬ್ಲಾಕ್ ಗಳ ಸಹಭಾಗಿತ್ವದೊಂದಿಗೆ ಈ ಪ್ರತಿಭಟನೆ ನಡೆಯಲಿದ್ದು ಈ ಮೂಲಕ ಸರಕಾರಕ್ಕೆ ಒತ್ತಡ ತರುವ ಪ್ರಯತ್ನ ನಡೆಸಲಾಗುವುದು ಎಂದರು.
ಕಾರ್ಕಳ – ಪಡುಬಿದ್ರಿ ರಾಜ್ಯ ಹೆದ್ದಾರಿಯ ಶೇ.80 ರಷ್ಟು ರಸ್ತೆಯು ಕಾರ್ಕಳ ಭಾಗಕ್ಕೆ ಸೇರಿದೆ. ಯಡಿಯೂರಪ್ಪ ಸರಕಾರ ಇರುವಾಗ ಆರಂಭಗೊಂಡ ಪ್ರಕ್ರಿಯೆ ಇದಾಗಿದ್ದು ಬೆಳ್ಮಣ್ ನಲ್ಲಿ ಟೋಲ್ ಹೋರಾಟಗಾರರ ಪ್ರತಿಭಟನೆಗೆ ಮಣಿದು ಬೊಮ್ಮಾಯಿ ಸರಕಾರ ಅದನ್ನು ಕಂಚಿನಡ್ಕಕ್ಕೆ ರವಾನಿಸಿದೆ. ಈಗ ಇಲ್ಲಿಂದಲೇ ಓಡಿಸುವ ಉದ್ದೇಶಕ್ಕಾಗಿ ಈ ಹೋರಾಟ ನಡೆಯಲಿದೆ ಎಂದರು.
ಪಡುಬಿದ್ರಿ ಭಾಗದ ಹೆಜಮಾಡಿಯಲ್ಲಿ ಟೋಲ್ ಇರುವಾಗ ಮೂರು ಕಿ.ಮೀ. ಅಂತರದಲ್ಲಿ ಮತ್ತೊಂದು ಟೋಲ್ ಅಳವಡಿಕೆ ಮೂಲಕ ಜನರನ್ನು ಸುಲಿಗೆ ಮಾಡುವ ಪ್ರಯತ್ನ ನಡೆಯುತ್ತಿದೆ. ಇದನ್ನು ಖಂಡಿಸಿ ಈ ಹೋರಾಟ ನಡೆಯಲಿದೆ ಎಂದರು.
ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನ್ ಚಂದ್ರ ಸುವರ್ಣ, ಕೆಪಿಸಿಸಿ ಕಾರ್ಯದರ್ಶಿ ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪು, ಕಾಪು ಬ್ಲಾಕ್ ಪ್ರಚಾರ ಸಮಿತಿ ಅಧ್ಯಕ್ಷ ಜಿತೇಂದ್ರ ಪುರ್ಟಾಡೋ, ಅಲ್ಪಸಂಖ್ಯಾತ ಜಿಲ್ಲಾ ಘಟಕದ ಅಧ್ಯಕ್ಷ ಶರ್ಪುದ್ದೀನ್ ಶೇಖ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಂತಲತಾ ಶೆಟ್ಟಿ, ಕಾಪು ಬ್ಲಾಕ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ರಮೀಜ್ ಹುಸೇನ್ ಪಡುಬಿದ್ರಿ ಮೊದಲಾದವರು ಸುದ್ದಿಗೋಷ್ಟಿಯಲ್ಲಿ ಉಪಸ್ಥಿತರಿದ್ದರು.