ಹುಬ್ಬಳ್ಳಿ: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಶಾಸಕ ಪ್ರಸಾದ ಅಬ್ಬಯ್ಯ ನೇತೃತ್ವದಲ್ಲಿ ಶುಕ್ರವಾರ ಬಂಕಾಪುರ ಚೌಕ ಬಳಿಯ ಪೆಟ್ರೋಲ್ ಪಂಪ್ ಹತ್ತಿರ ಚಕ್ಕಡಿ ಸವಾರಿ ಮೂಲಕ ಪ್ರತಿಭಟನೆ ನಡೆಸಲಾಯಿತು.
ಶಾಸಕ ಪ್ರಸಾದ ಅಬ್ಬಯ್ಯ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಯವರು ಅಚ್ಛೇ ದಿನ ಎಂದು ಇಡೀ ದೇಶವನ್ನೇ ಯಾಮಾರಿಸಿದ್ದಾರೆ. ಈ ಹಿಂದೆ ಯುಪಿಎ ಸರಕಾರ ಇದ್ದಾಗ ತೈಲಬೆಲೆ ಹೆಚ್ಚಳ ಕುರಿತಾಗಿ ಬಿಜೆಪಿ ನಾಯಕರು ಮಾಡಿದ ಆರೋಪ, ಹೋರಾಟ ಏನೆಲ್ಲಾ ಇತ್ತು. ಇದೀಗ ಬಿಜೆಪಿ ನಾಯಕರಿಗೆ ದೇಶದಲ್ಲಿ ಏನಾಗುತ್ತಿದೆ, ತೈಲ ಬೆಲೆ ಎಷ್ಟು ಹೆಚ್ಚಿದೆ ಎಂಬುದು ತಿಳಿಯದೇ ಇಲ್ಲ ಎಂಬಂತೆ ವರ್ತಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಪೆಟ್ರೋಲ್ 100 ನಾಟೌಟ್’ ಘೋಷಣೆಯಡಿ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು ಕೋವಿಡ್ ಲಾಕ್‌ಡೌನ್‌ನಿಂದ ಜನರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ಸಂದರ್ಭದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಿಸುವ ಮೂಲಕ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಇನ್ನಷ್ಟು ಸಂಕಷ್ಟ ಹೆಚ್ಚುವಂತೆ ಮಾಡಿವೆ ಎಂದು ದೂರಿದರು.
ಯುಪಿಎ ಸರಕಾರದಲ್ಲಿ ಕಚ್ಚಾ ತೈಲದ ದರ ಬ್ಯಾರಲ್‌ಗೆ 120 ರಿಂದ 145 ಡಾಲರ್ ಇದ್ದರೂ ಪೆಟ್ರೋಲ್, ಡೀಸೆಲ್ ಬೆಲೆ ಕಡಿಮೆ ಇತ್ತು. ಡಿಸೇಲ್ ಮೇಲೆ 3.45, ಪೆಟ್ರೋಲ್ ಮೇಲೆ 9.21 ರೂ. ಅಬಕಾರಿ ತೆರಿಗೆ ವಿ ಧಿಸುತ್ತಿತ್ತು. ಈಗ ಡೀಸೆಲ್ ಮೇಲೆ 31.84, ಪೆಟ್ರೋಲ್ ಮೇಲೆ 31.98 ರೂ. ತೆರಿಗೆ ವಸೂಲಿ ಮಾಡುತ್ತಿದ್ದು, ರಾಜ್ಯ ಸರಕಾರ ಶೇ. 24 ಮತ್ತು 35ರಷ್ಟು ಮಾರಾಟ ತೆರಿಗೆ ವಿ ಧಿಸುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರಕಾರಗಳು ವಿಧಿಸುತ್ತಿರುವ ತೆರಿಗೆ ಮತ್ತು ಏಜೆಂಟ್ ಕಮಿಶನ್ ಸೇರಿ 60-65 ರೂ. ಹಣ ಹರಿದು ಹೋಗುತ್ತಿದೆ. ಇಂಧನ ಮೂಲ ಬೆಲೆ 35 ರೂ. ಇದ್ದರೆ ತೆರಿಗೆ 65 ಸೇರಿ ಒಟ್ಟು 100 ರೂ. ಲೀಟರ್‌ನಂತೆ ಗ್ರಾಹಕರಿಗೆ ಪೆಟ್ರೋಲ್ ಸಿಗುತ್ತಿದೆ ಎಂದರು.
ಮಾಜಿ ಸಚಿವ ಎ.ಎಂ. ಹಿಂಡಸಗೇರಿ ಮಾತನಾಡಿ, ಕೇಂದ್ರ ಬಿಜೆಪಿ ಸರಕಾರ ಹಣವಂತರ ಸರಕಾರವಾಗಿದ್ದು ಜನಸಾಮಾನ್ಯರನ್ನು ಸಂಪೂರ್ಣವಾಗಿ ಕಡೆಗಣಿಸಿದೆ. ದೇಶದಲ್ಲಿ ಇಂಧನ ಉತ್ಪನ್ನಗಳ ಬೆಲೆ ಏರಿಕೆಯಾಗಿದ್ದರೂ ಯಾರೊಬ್ಬರು ಬೆಲೆ ಇಳಿಕೆ ಕುರಿತು ಚಕಾರ ಎತ್ತದೇ ಇರುವುದು ನೋಡಿದರೆ ಇವರೆಲ್ಲರೂ ದೇಶವನ್ನು ಹಾಳು ಮಾಡುತ್ತಿದ್ದಾರೆ ಎನ್ನುವುದು ಸ್ಪಷ್ಟವಾಗುತ್ತದೆ ಎಂದು ಹೇಳಿದರು.
ಮುಖಂಡರಾದ ಅನ್ವರ ಮುಧೋಳ, ಸದಾನಂದ ಡಂಗನವರ ಮಾತನಾಡಿದರು. ರಾಜಶೇಖರ ಮೆಣಸಿನಕಾಯಿ, ಮೋಹನ ಅಸುಂಡಿ, ಮೆಹಮೂದ್ ಕೋಳೂರು, ಪ್ರಸನ್ನ ಮಿರಜಕರ್, ದಶರಥ ವಾಲಿ, ಯಮನೂರು ಜಾಧವ್, ಯಮನೂರು ಗುಡಿಹಾಳ, ಅಲ್ತಾಫ್ ಕಿತ್ತೂರು, ವಿಜನಗೌಡ ಪಾಟೀಲ ಇನ್ನಿತರರಿದ್ದರು.