ಕೊಪ್ಪಳ: ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಜಿಲ್ಲಾ ಘಟಕದಿಂದ ನಗರದಲ್ಲಿ ಬಿಜೆಪಿ ಸರ್ಕಾರದ ಆಡಳಿತ ವೈಖರಿಯ ವಿರುದ್ಧ ಪ್ರತಿಭಟನೆ ನಡೆಯಿತು. ಇಲ್ಲಿನ ಬನ್ನಿಕಟ್ಟೆಯಿಂದ ಬೆಳಗ್ಗೆ 11:30ಕ್ಕೆ ಆರಂಭವಾದ ಪ್ರತಿಭಟನಾ ಮೆರವಣಿಗೆ 1:20ಕ್ಕೆ ಅಶೋಕ ವೃತ್ತಕ್ಕೆ ಆಗಮಿಸಿತು. ಪ್ರತಿಭಟನೆಯಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರಲ್ಲದೇ, ಧಿಕ್ಕಾರ ಕೂಗಿ ತಮ್ಮ ಅಸಮಾಧಾನ ಹೊರ ಹಾಕಿದರು.
ಅಶೋಕ ವೃತ್ತದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಿವರಾಜ ತಂಗಡಗಿ ಮಾತನಾಡಿ, ಬಿಜೆಪಿ ಸರ್ಕಾರ ಬಡವರ ಹೊಟ್ಟೆಯ ಮೇಲೆ ಹೊಡೆಯುತ್ತಿದೆ. ಪ್ರತಿಯೊಂದು ವಸ್ತುಗಳ ಬೆಲೆ ಗಗನಕ್ಕೇರುತ್ತಿದ್ದು, ಬಿಜೆಪಿ ಶ್ರೀಮಂತರ ಬಗ್ಗೆ ಕಾಳಜಿ ವಹಿಸದೆ, ಕಾರ್ಮಿಕರು, ಶೋಷಿತರು ದೇಶದಲ್ಲಿನ ಜನ ಸಾಮಾನ್ಯರನ್ನು ಸಂಪೂರ್ಣ ಮರೆತಿದೆ. ಅದರಲ್ಲೂ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರು ದೇಶವನ್ನೇ ಮಾರಾಟ ಮಾಡಲು ಮುಂದಾಗಿದ್ದಾರೆ. ಸ್ವಾತಂತ್ರ್ಯ ಬಂದ ಬಳಿಕ ಕಾಂಗ್ರೆಸ್ ಸರ್ಕಾರ ದೇಶದ ಹಿತಕ್ಕಾಗಿ ಸ್ಥಾಪನೆ ಮಾಡಿರುವ ಹಲವು ಸಂಸ್ಥೆಗಳನ್ನು ಮಾರಾಟ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಮೋದಿ, ಅಮಿತ್ ಶಾ ದೇಶ ಮಾರಾಟಕ್ಕೆ ನಿಂತಿದ್ದರೆ, ಅದಾನಿ ಹಾಗೂ ಅಂಬಾನಿ ದೇಶವನ್ನ ಖರೀದಿಸೋಕೆ ನಿಂತಿದ್ದಾರೆ. ಇವರು ನಾಲ್ವರ ಮೇಲೆ ದೇಶ ನಡೆಯುತ್ತಿದೆ. ಕೇಂದ್ರ ಸರ್ಕಾರವು ಜಾರಿ ತಂದ ಕೃಷಿ ಕಾಯ್ದೆಗಳ ವಿರುದ್ಧ ರೈತರು ರಣ ಕಹಳೆ ಮೊಳಗಿಸಿ ದೊಡ್ಡ ಮಟ್ಟದ ಹೋರಾಟ ಮಾಡುತ್ತಿದ್ದಾರೆ. ಆದರೆ ರೈತರ ಬಗ್ಗೆ ಮೋದಿ ಸರ್ಕಾರಕ್ಕೆ ಕಿಂಚಿತ್ತು ಕಾಳಜಿ ವಹಿಸಿಲ್ಲ ಎಂದರು.
ಪೆಟ್ರೋಲ್, ಡೀಸೆಲ್ ಬೆಲೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಮೋದಿ ಸರ್ಕಾರವು ಅದನ್ನು ಕಡಿಮೆ ಮಾಡುವ ಮನಸ್ಸು ಮಾಡುತ್ತಿಲ್ಲ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆಯು ಕಡಿಮೆಯಿದ್ದರೂ ದೇಶದಲ್ಲಿ ದುಬಾರಿಯಾಗಿದೆ. ಅದರ ಮೇಲಿನ ಸುಂಕವನ್ನು ಹೆಚ್ಚಿಸುತ್ತಲೇ ಇದ್ದಾರೆ ಎಂದು ಗುಡುಗಿದರು.
ಬಿಎಸ್‌ವೈ ಲಕ್ಷ ಕೋಟಿ ತರಲಿ: ಚುನಾವಣಾ ಪೂರ್ವ ಕೊಪ್ಪಳದಲ್ಲಿ ಬಿ.ಎಸ್.ಯಡಿಯೂರಪ್ಪ ಅವರು ನೀರಾವರಿ ಯೋಜನೆಗಳಿಗೆ ಮೋದಿ ಅವರ ಕೈ ಕಾಲು ಹಿಡಿದು ಒಂದು ಲಕ್ಷ ಕೋಟಿ ಅನುದಾನ ತರುವೆ ಎಂದು ಬಹಿರಂಗವಾಗಿಯೇ ಹೇಳಿಕೆ ಕೊಟ್ಟಿದ್ದರು. ನೀರಾವರಿ ಯೋಜನೆಗಳಿಗೆ ಬಿಜೆಪಿ ಎಷ್ಟು ಅನುದಾನ ಕೊಟ್ಟಿದೆ ಎನ್ನುವುದನ್ನು ಜನತೆಗೆ ತಿಳಿಸಲಿ. ಬಿಜೆಪಿಯವರು ದೋಖಾಬಾಜಿಗಳು. ಮಾತೆತ್ತಿದರೆ ಹಿಂದೂ ವಿಷಯ ಮುಂದಿಟ್ಟು ಮಾತನಾಡುತ್ತಾರೆ. ನಾವೂ ಹಿಂದೂಗಳೇ, ನಾವೂ ಭಾರತ ದೇಶದ ಭಾವುಟವನ್ನು ಹೆಗಲ ಮೇಲಿಟ್ಟು ಗೌರವದಿಂದ ಕಾಣುತ್ತೇವೆ. ದೇಶದ ಸ್ವಾತಂತ್ರÂಕ್ಕೆ ಬಿಜೆಪಿಯ ಕೊಡುಗೆ ಏನು ಎಂದರಲ್ಲದೇ, ನಮ್ಮ ಪ್ರತಿಭಟನೆಯನ್ನು ಹತ್ತಿಕ್ಕುವ ಪ್ರಯತ್ನ ನಡೆದಿದೆ. ನೀವು ಎಷ್ಟು ನಮ್ಮ ಹೋರಾಟ ಹತ್ತಿಕ್ಕುವಿರೋ ಅಷ್ಟು ಹೋರಾಟ ಹೆಚ್ಚಾಗಲಿದೆ ಎಂದರು.
ಬಿಜೆಪಿಗೆ ಸವಾಲ್: ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನಾವು ಏನು ಮಾಡಿದ್ದೇವೆ ಎಂದು ಪಟ್ಟಿ ತರುತ್ತೇವೆ. ಬಿಜೆಪಿ ಸರ್ಕಾರ ಏನು ಮಾಡಿದೆ ಎಂದು ಪಟ್ಟಿ ತರಲಿ. ತಾಕತ್ತಿದ್ದರೆ ಅಶೋಕ ವೃತ್ತಕ್ಕೆ ಬಂದು ಏನು ಮಾಡಿದ್ದೇವೆ ಎನ್ನುವುದನ್ನು ತೋರಿಸಲಿ ಎಂದು ತಂಗಡಗಿ ಅವರು ಬಿಜೆಪಿ ನಾಯಕರಿಗೆ ಸವಾಲ್ ಹಾಕಿದರರಲ್ಲದೇ, ಬಿಜೆಪಿ ಚಮಚಾಗಿರಿ ಮಾಡಿದ ಪಕ್ಷ, ಕಾಂಗ್ರೆಸ್ ಸ್ವಾತಂತ್ರ್ಯ ತಂದುಕೊಟ್ಟ ಪಕ್ಷ ಎಂದರು.
ಪ್ರತಿಭಟೆಯಲ್ಲಿ ಶಾಸಕ ರಾಘವೇಂದ್ರ ಹಿಟ್ನಾಳ, ಜಿಪಂ ಅಧ್ಯಕ್ಷ ರಾಜಶೇಖರ ಹಿಟ್ನಾಳ, ಬಸವರಾಜ ಹಿಟ್ನಾಳ, ಜುಲ್ಲು ಖಾದ್ರಿ, ಎಸ್.ಬಿ. ನಾಗರಳ್ಳಿ, ಗೂಳಪ್ಪ ಹಲಗೇರಿ, ಅಮ್ಜದ್ ಪಟೇಲ್, ಮುತ್ತು ಕುಷ್ಟಗಿ, ಗುರುರಾಜ ಹಲಗೇರಿ, ಅಕºರ್ ಪಾಷಾ ಪಲ್ಟನ್, ಅಜೀಮ್ ಅತ್ತಾರ, ಪ್ರಸನ್ನ ಗಡಾದ, ಕಾಟನ್ ಪಾಷಾ, ನಾಗರಾಜ ಚಳ್ಳೊಳ್ಳಿ, ಬಾಲಚಂದ್ರನ್, ಶರಣಬಸವನಗೌಡ, ಅಮರೇಶ ಉಪಲಾಪೂರ, ಶರಣಪ್ಪ ಸಜ್ಜನ್ ಸೇರಿದಂತೆ ಇತರರಿದ್ದರು.