Advertisement

ಕೋಮುಗಲಭೆಗೆ ಪ್ರಚೋದನೆ ಹೇಳಿಕೆಗೆ ಖಂಡನೆ

04:20 PM Apr 10, 2022 | Team Udayavani |

ಶಿರಾ: ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಧರ್ಮಗಳ ಮಧ್ಯೆ ದ್ವೇಷ ಹುಟ್ಟು ಹಾಕುತ್ತಿದೆ. ಭ್ರಷ್ಟಾಚಾರ ಮಿತಿಮೀರಿದೆ. ಇವುಗಳನ್ನು ಮರೆಮಾಚಲು ಜನರ ಗಮನ ಬೇರೆಡೆ ಸೆಳೆಯಲು, ಮುಂಬರುವ ಚುನಾವಣೆ ದೃಷ್ಟಿಯಿಂದ ಧರ್ಮದ ಹೆಸರಲ್ಲಿ ರಾಜಕೀಯ ಮಾಡುತ್ತಿದೆ ಎಂದು ಮಾಜಿ ಸಚಿವ ಟಿ.ಬಿ.ಜಯಚಂದ್ರ ಆಕ್ರೋಶ ವ್ಯಕ್ತಪಡಿಸಿದರು.

Advertisement

ನಗರದ ಅಂಬೇಡ್ಕರ್‌ ವೃತ್ತದಲ್ಲಿ ಶನಿವಾರ ತಾಲೂಕು ಬ್ಲಾಕ್‌ ಕಾಂಗ್ರೆಸ್‌ ಸಮಿತಿ ವತಿಯಿಂದ ಗೃಹ ಸಚಿವ ಆರಗ ಜ್ಞಾನೇಂದ್ರ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ಕೋಮುಗಲಭೆಗೆ ಪ್ರಚೋದನೆ ನೀಡುವ ಹೇಳಿಕೆ ನೀಡುತ್ತಿದ್ದಾರೆ. ಅವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.

ದ್ವೇಷ ಹುಟ್ಟು ಹಾಕುತ್ತಿದೆ: ಬಿಜೆಪಿ ಸರ್ಕಾರವು ಜನರ ಮನಸ್ಸಿನಲ್ಲಿ ಕೋಮು ಭಾವನೆ ಹುಟ್ಟು ಹಾಕಿ ಧರ್ಮ, ಜಾತಿಗಳ ಮಧ್ಯೆ ದ್ವೇಷ ಹುಟ್ಟಿಸುತ್ತಿದೆ. ತಿನ್ನುವ ಅನ್ನದಿಂದ ಹಿಡಿದು ಎಲ್ಲರದಲ್ಲೂ ರಾಜಕೀಯ ಮಾಡುತ್ತಿದೆ. ದ್ವೇಷಕ್ಕೆ ಪ್ರಚೋದನೆ ಮಾಡುತ್ತಿದೆ. ಇವರಿಗೆ ಆಳುವ ನೈತಿಕತೆ ಇಲ್ಲ, ಭಾರತ ದೇಶ ವೈವಿಧ್ಯಮವಾದ ಭಾಷೆ, ಪರಂಪರೆ, ಸಂಸ್ಕೃತಿ, ಅನೇಕ ಧರ್ಮ ಜಾತಿಗಳಿಂದ ಕೂಡಿರುವ ದೇಶ. ಇಂತಹ ದೇಶದಲ್ಲಿ ಎಲ್ಲರೂ ಸಾಮರಸ್ಯದಿಂದ ಬದುಕು ಸಾಗಿಸುತ್ತಿದ್ದಾರೆ. ಇಂತಹವರ ಮಧ್ಯೆ ದ್ವೇಷ ರಾಜಕಾರಣ ಮಾಡುತ್ತಿದ್ದಾರೆ ಎಂದು ಹೇಳಿದರು.

ಜಾತಿ, ಧರ್ಮಗಳ ಮಧ್ಯೆ ದ್ವೇಷ: ಕಳೆದ ಎರಡು ತಿಂಗಳಿಂದ ನಡೆಯುತ್ತಿರುವ ವಿದ್ಯಾಮಾನಗಳನ್ನು ನೋಡುತ್ತಿದ್ದರೆ ದುಃಖ ಬರುತ್ತದೆ. ಶಾಸಕಾಂಗ ನ್ಯಾಯಾಂಗ, ಕಾರ್ಯಾಂಗ ಎಲ್ಲದಕ್ಕೂ ಮುಖ್ಯವಾಗಿ ಮಾಧ್ಯಮಗಳಲ್ಲಿ ಜಾತಿ, ಧರ್ಮಗಳ ಮಧ್ಯೆ ದ್ವೇಷ ಹುಟ್ಟು ಹಾಕುತ್ತಿರುವುದನ್ನು ವಿಜೃಂಭಿಸುತ್ತಿದ್ದಾರೆ. ತಿನ್ನುವ ಅನ್ನದಲ್ಲಿ ಕೇಸರೀಕರಣ ಮಾಡುತ್ತಿದ್ದಾರೆ. ಗೃಹಮಂತ್ರಿ ಆರಗ ಜ್ಞಾನೇಂದ್ರ ಅವರು ಸಂವಿಧಾನದ ಹೆಸರಿನಲ್ಲಿ ಪ್ರಮಾಣ ಮಾಡಿ, ಅಧಿಕಾರ ಸ್ವೀಕರಿಸಿ ಅದಕ್ಕೆ ವಿರುದ್ಧ ಹೇಳಿಕೆ ಕೊಡುತ್ತಾರೆ ಎಂದು ತಿಳಿಸಿದರು.

ಪೊಲೀಸರಿಗೆ ದೂರು: ಒಬ್ಬ ಯುವಕನ ಸಾವಿಗೆ ಏನೇನೋ ಕಾರಣ ಕೊಡುತ್ತಾರೆ. ಗೃಹ ಮಂತ್ರಿ ಎಂದರೆ ಜವಾಬ್ದಾರಿ ಇರುವ ಹುದ್ದೆ. ಇವರಿಗೆ ಆಳುವ ಯೋಗ್ಯತೆ, ಶಕ್ತಿ ಇಲ್ಲ. ನೈತಿಕತೆ ಕಳೆದುಕೊಂಡಿದ್ದಾರೆ. ಇವರ ಮೇಲೆ ಕೇಸು ದಾಖಲಿಸಬೇಕು. ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಈ ದೇಶದ ನೆಲದ ಕಾನೂನುಗಳಿಗೆ ಅಪಚಾರ ಮಾಡುವ ಹೇಳಿಕೆ ಕೊಡುತ್ತಿದ್ದಾರೆ. ಇವರ ಮೇಲೆ ಪೊಲೀಸರಿಗೆ ದೂರು ಕೊಡುತ್ತಿದ್ದೇವೆ. ಪೊಲೀಸರು ಆಳುವವರ ಮೇಲೆ ಕೇಸು ದಾಖಲಿಸಿ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

Advertisement

ಪ್ರತಿಭಟನೆಯಲ್ಲಿ ನಗರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಪಿ.ಆರ್‌.ಮಂಜುನಾಥ್‌, ಗ್ರಾಮಾಂತರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ನಟರಾಜ್‌ ಬರಗೂರು, ಸೂಡಾ ಮಾಜಿ ಅಧ್ಯಕ್ಷ ಗುಳಿಗೇನಹಳ್ಳಿ ನಾಗರಾಜ್‌, ಕಾಂಗ್ರೆಸ್‌ ಕಾನೂನು ಮತ್ತು ಮಾನವ ಹಕ್ಕುಗಳ ಘಟಕದ ಅಧ್ಯಕ್ಷ ಎಚ್‌. ಗುರುಮೂರ್ತಿ, ಮುಖಂಡ ಸೊರೆಕುಂಟೆ ಸತ್ಯನಾರಾಯಣ, ಡಿ.ಸಿ.ಅಶೋಕ್‌, ವಕೀಲರಾದ ರಘು, ನಗರಸಭಾ ಸದಸ್ಯರಾದ ಶಿವಶಂಕರ್‌, ಪೂಜಾ ಪೆದ್ದರಾಜು, ನಗರ ಯುವ ಕಾಂಗ್ರೆಸ್‌ ಅಧ್ಯಕ್ಷ ಸುನಿಲ್‌, ಭಾನುಪ್ರಕಾಶ್‌, ನಗರ ಎಸ್ಟಿ ಘಟಕದ ಅಧ್ಯಕ್ಷ ಶರತ್‌ ಬಾಬು, ಭೂವನಹಳ್ಳಿ ಸತ್ಯನಾರಾಯಣ, ಶೇಷಾನಾಯ್ಕ, ದೊಡ್ಡಗುಳ ರಾಜಣ್ಣ, ನೂರುದ್ದೀನ್‌, ರಫಿವುಲ್ಲಾ, ಬಿಲಾಲ್‌, ಚೆನ್ನನಕುಂಟೆ ತಿಪ್ಪೇಶ್‌, ಲಕ್ಷ್ಮೀಸಾಗರ ಗ್ರಾಪಂ ಅಧ್ಯಕ್ಷ ಮಿಟ್ಯಾನಾಯ್ಕ, ಗಂಗನಹಳ್ಳಿ ಸೋಮಶೇಖರ್‌, ಸೊರೆಕುಂಟೆ ವಿನಯ್‌ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next