Advertisement

ಸಾಫ್ಟ್ ಹಿಂದುತ್ವ: ಕಾಂಗ್ರೆಸ್‌ನಲ್ಲಿ ಭಿನ್ನ ರಾಗ

12:50 AM May 16, 2022 | Team Udayavani |

ಉದಯಪುರ: ರಾಜಸ್ಥಾನದ ಉದಯಪುರದಲ್ಲಿ 3 ದಿನಗಳ ಕಾಲ ನಡೆದ ಕಾಂಗ್ರೆಸ್‌ನ ಚಿಂತನ ಶಿಬಿರದಲ್ಲಿ “ಹಿಂದುತ್ವ’ದ ಚರ್ಚೆಯು ಪಕ್ಷದೊಳಗಿನ ಭಿನ್ನಮತವನ್ನು ಜಗಜ್ಜಾಹೀರು ಮಾಡಿದೆ. ಕಾಂಗ್ರೆಸ್‌ “ಮೃದು ಹಿಂದುತ್ವ’ ಧೋರಣೆಯನ್ನು ಅನುಸರಿಸಬೇಕೇ, ಬೇಡವೇ ಎಂಬ ಕುರಿತು ನಡೆದ ಚರ್ಚೆಯು ಪಕ್ಷದ ನಾಯಕರ ನಡುವೆ ಮಾತಿನ ಚಕಮಕಿಗೆ ಕಾರಣವಾಯಿತು.

Advertisement

ವಿಶೇಷವೆಂದರೆ, ಹಿರಿಯ ಮುಖಂಡರು ಸಾಫ್ಟ್ ಹಿಂದುತ್ವವನ್ನು ವಿರೋಧಿಸಿದರೆ, ಯುವ ಮುಖಂಡರು ಅದರ ಪರ ಮಾತನಾಡಿದ್ದಾರೆ.

ಛತ್ತೀಸ್‌ಗಢ‌ ಸಿಎಂ ಭೂಪೇಶ್‌ ಬಘೇಲ್‌ ಮತ್ತು ಮಧ್ಯಪ್ರದೇಶ ಮಾಜಿ ಮುಖ್ಯಮಂತ್ರಿ ಕಮಲ್‌ನಾಥ್‌ ಅವರು “ಸಾಫ್ಟ್ ಹಿಂದುತ್ವ’ದ ಪರ ಮಾತನಾಡಿದರೆ ಮಹಾರಾಷ್ಟ್ರ ಮಾಜಿ ಸಿಎಂ ಪೃಥ್ವೀರಾಜ್‌ ಚೌಹಾಣ್‌ ಸೇರಿದಂತೆ ದಕ್ಷಿಣ ಭಾರತದ ಕಾಂಗ್ರೆಸ್‌ ನಾಯಕರಿಂದ ಇದಕ್ಕೆ ವಿರೋಧ ವ್ಯಕ್ತವಾಯಿತು. ಸೈದ್ಧಾಂತಿಕ ವಿಚಾರದಲ್ಲಿ ನಮಗೆ ಸ್ಪಷ್ಟನೆ ಇರಬೇಕು. ಅದು ಬಿಜೆಪಿಯನ್ನು ಕಾಪಿ ಮಾಡಿದಂತಿರ­ಬಾರದು ಎಂದು ಚೌಹಾಣ್‌ ಕಿವಿಮಾತು ಹೇಳಿದರು.

ಸಾಫ್ಟ್ ಹಿಂದುತ್ವದ ಪರ ನಿಂತ ಉತ್ತರಪ್ರದೇಶ ಕಾಂಗ್ರೆಸ್‌ ನಾಯಕ ಆಚಾರ್ಯ ಪ್ರಮೋದ್‌ ಕೃಷ್ಣನ್‌, “ಈ ವಿಚಾರದಲ್ಲಿ ಕಾಂಗ್ರೆಸ್‌ ನಾಚಿಕೆಪಟ್ಟುಕೊಳ್ಳಬಾರದು’ ಎಂದರೆ ಕರ್ನಾಟಕದ ಬಿ.ಕೆ.ಹರಿಪ್ರಸಾದ್‌, “ಕಾಂಗ್ರೆಸ್‌ ಯಾವತ್ತೂ ತನ್ನ ಮೂಲ ಸಿದ್ಧಾಂತಕ್ಕೆ ಬದ್ಧವಾಗಿರಬೇಕು’ ಎಂದು ಅಭಿಪ್ರಾಯಪಟ್ಟಿದ್ದಾರೆ.

ಅಲ್ಪಾವಧಿ ಚುನಾವಣ ಉದ್ದೇಶಕ್ಕಾಗಿ ಕಾಂಗ್ರೆಸ್‌ ಯಾವತ್ತೂ ಬಿಜೆಪಿ ಬಿ ಟೀಂನಂತೆ ಆಗಬಾರದು ಎಂದೂ ಕೆಲವು ನಾಯಕರು ಹೇಳಿದ್ದಾರೆ.

Advertisement

ಪ್ರಣಾಳಿಕೆಯಲ್ಲಿ ಇವಿಎಂಗೆ ಗುಡ್‌ಬೈ: ಕಳೆದ ಕೆಲವು ವರ್ಷ­ಗಳಿಂದೀಚೆಗೆ ವಿದ್ಯುನ್ಮಾನ ಮತಯಂತ್ರಗಳ ವಿಶ್ವಾಸಾರ್ಹತೆ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಾ ಬಂದಿರುವ ಕಾಂಗ್ರೆಸ್‌, ಈಗ ಚಿಂತನ ಶಿಬಿರದಲ್ಲೂ ಈ ವಿಚಾರ ಪ್ರಸ್ತಾವಿಸಿದೆ. ಇವಿಎಂ ವಿಚಾರವನ್ನು ಜನರ ಬಳಿ ಕೊಂಡೊಯ್ಯಲು ನಿರ್ಧರಿಸಿದ್ದೇವೆ.

2024ರ ಲೋಕಸಭೆ ಚುನಾವಣೆ ವೇಳೆ ಇವಿಎಂ ಬದಲು ಮತಪತ್ರಗಳನ್ನು ಅಳವಡಿಸುವ ಕುರಿತು ಕಾಂಗ್ರೆಸ್‌ನ ಪ್ರಣಾಳಿಕೆಯಲ್ಲಿ ಪ್ರಸ್ತಾವಿಸಲಿದ್ದೇವೆ ಎಂದು ಹಿರಿಯ ನಾಯಕ ಪೃಥ್ವೀರಾಜ್‌ ಚೌಹಾಣ್‌ ಹೇಳಿದ್ದಾರೆ.

ಇವಿಎಂ ಮೂಲಕ ಹೇಗೆ ವಂಚನೆ ನಡೆಯುತ್ತಿದೆ ಎಂಬ ಬಗ್ಗೆ ಸಾಕಷ್ಟು ಚರ್ಚೆ ನಡೆದಿದೆ. ಈ ಬಗ್ಗೆ ಪ್ರಧಾನಿ ಮೋದಿಯವರಿಗೆ ನಾವು ಮನವಿ ಸಲ್ಲಿಸಿದರೂ ಅವರು ಸ್ಪಂದಿಸುವುದಿಲ್ಲ ಎನ್ನುವುದು ನಮಗೆ ಗೊತ್ತು. ಈಗ ನಮಗಿರುವುದು ಒಂದೇ ದಾರಿ.

ಮೋದಿಯವರನ್ನು ಸೋಲಿಸು­ವುದು ಮತ್ತು ಇವಿಎಂಗೆ ನಿಷೇಧ ಹೇರುವುದಾಗಿ ಪ್ರಣಾಳಿಕೆಯಲ್ಲಿ ಘೋಷಿಸುವುದು ಎಂದೂ ಚೌಹಾಣ್‌ ಹೇಳಿದ್ದಾರೆ.

“ಗೆದ್ದೇ ಗೆಲ್ಲುವೆವು’ ಎಂದು 3 ಬಾರಿ ಹೇಳಿದ ಸೋನಿಯಾ!
ನಾವು ಗೆದ್ದೇ ಗೆಲ್ಲುತ್ತೇವೆ, ನಾವು ಗೆದ್ದೇ ಗೆಲ್ಲುತ್ತೇವೆ, ನಾವು ಗೆದ್ದೇ ಗೆಲ್ಲುತ್ತೇವೆ – ಇದುವೇ ನಮ್ಮ ಬದ್ಧತೆ, ಇದುವೇ ನಮ್ಮ ಸಂಕಲ್ಪ’. ಚಿಂತನ ಶಿಬಿರದ ಸಮಾರೋಪ ಭಾಷಣದಲ್ಲಿ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಈ ರೀತಿ ಘೋಷಿಸುತ್ತಿದ್ದಂತೆ ನೆರೆದವರೆಲ್ಲರಿಂದ ಚಪ್ಪಾಳೆಯ ಸುರಿಮಳೆ ಕೇಳಿಬಂತು. “ನನಗೆ ಇಂದಿನ ಸಾಯಂಕಾಲವನ್ನು ನನ್ನ ಕುಟುಂಬದೊಂದಿಗೆ ಕಳೆದಂತೆ ಭಾಸವಾಗಿದೆ. ಈ ಶಿಬಿರವು ನಮ್ಮೆಲ್ಲರಿಗೂ ಹೊಸ ಶಕ್ತಿ ಹಾಗೂ ಚೈತನ್ಯವನ್ನು ತಂದುಕೊಟ್ಟಿದೆ. ಎಲ್ಲರೂ ಒಗ್ಗಟ್ಟಾಗಿ ಸಾಮೂಹಿಕ ಉದ್ದೇಶ­ ವನ್ನು ಈಡೇರಿಸಬೇಕಿದೆ’ ಎಂದು ಸೋನಿಯಾ ಹೇಳಿದರು.

ಸಲಹಾ ಸಮಿತಿ
ಕಾಂಗ್ರೆಸ್‌ ಕಾರ್ಯಕಾರಿ ಸಮಿತಿಯ ಸದಸ್ಯರ ಪೈಕಿಯೇ ಕೆಲವರನ್ನು ಆಯ್ಕೆ ಮಾಡಿ ಸಲಹಾ ಸಮಿತಿಯೊಂದನ್ನು ರಚಿಸುವುದಾಗಿ ಸೋನಿಯಾ ಘೋಷಿಸಿದ್ದಾರೆ. ಈ ಸಮಿತಿಯು ನಿಯಮಿತವಾಗಿ ಸಭೆ ನಡೆಸಿ, ರಾಜಕೀಯ ವಿಚಾರಗಳ ಕುರಿತು ಚರ್ಚಿಸಬೇಕು. ಆದರೆ ಇದು “ಸಾಮೂಹಿಕ ನಿರ್ಧಾರ ಕೈಗೊಳ್ಳುವ ಸಮಿತಿ’ಯಾಗಿ ಕಾರ್ಯ ನಿರ್ವಹಿಸುವುದಿಲ್ಲ. ಬದಲಿಗೆ ಪಕ್ಷಕ್ಕೆ ಈ ಸಮಿತಿಯು ಸಲಹೆಗಳನ್ನು ನೀಡಲಿದೆ. ಈ ಹಿರಿಯ ಸಹೋದ್ಯೋಗಿಗಳ ವ್ಯಾಪಕ ಅನುಭವವು ನಮಗೆ ನೆರವಾಗಲಿದೆ ಎಂದು ಸೋನಿಯಾ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next