Advertisement

ಅಕ್ಟೋಬರ್ 17 ರಂದು ಕೈ ಅಧ್ಯಕ್ಷೀಯ ಚುನಾವಣೆ; ಸೆ.24ರಿಂದ ನಾಮಪತ್ರ ಸಲ್ಲಿಕೆ

07:48 PM Aug 28, 2022 | Team Udayavani |

ನವದೆಹಲಿ: ಭಾನುವಾರ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯು ಪಕ್ಷದ ಪೂರ್ಣಾವಧಿ ಅಧ್ಯಕ್ಷರ ಚುನಾವಣೆಯನ್ನು ಅಕ್ಟೋಬರ್ 17 ರಂದು ನಡೆಸಲು ನಿರ್ಧರಿಸಿದೆ.

Advertisement

ಚುನಾವಣಾ ಅಧಿಸೂಚನೆಯನ್ನು ಸೆಪ್ಟೆಂಬರ್ 22 ರಂದು ಹೊರಡಿಸಲಾಗುವುದು ಮತ್ತು ನಾಮಪತ್ರ ಸಲ್ಲಿಕೆ ಸೆ. 24 ರಂದು ಪ್ರಾರಂಭವಾಗಿ ಸೆ. 30 ರವರೆಗೆ ಮುಂದುವರಿಯುತ್ತದೆ ಎಂದು ಪಕ್ಷದ ಕೇಂದ್ರ ಚುನಾವಣಾ ಪ್ರಾಧಿಕಾರದ ಅಧ್ಯಕ್ಷ ಮಧುಸೂದನ್ ಮಿಸ್ತ್ರಿ ಸುಮಾರು 30 ನಿಮಿಷಗಳ ಸಭೆಯ ನಂತರ ಸುದ್ದಿಗಾರರಿಗೆ ತಿಳಿಸಿದರು.

ಒಂದಕ್ಕಿಂತ ಹೆಚ್ಚು ಅಭ್ಯರ್ಥಿಗಳಿದ್ದಲ್ಲಿ ಅಕ್ಟೋಬರ್ 17 ರಂದು ಚುನಾವಣೆ ನಡೆಯಲಿದೆ, ಅಗತ್ಯವಿದ್ದರೆ ಮತಗಳ ಎಣಿಕೆ ಅಕ್ಟೋಬರ್ 19 ರಂದು ನಡೆಯಲಿದೆ ಎಂದು ತಿಳಿಸಿದ್ದಾರೆ.

ಶುಕ್ರವಾರ ಹಿರಿಯ ನಾಯಕ ಗುಲಾಂ ನಬಿ ಆಜಾದ್ ಅವರ ಆಘಾತಕಾರಿ ರಾಜೀನಾಮೆ ಬಳಿಕ ಪಕ್ಷದಲ್ಲಿ ಹೊಸ ಕೋಲಾಹಲದ ನಡುವೆಯೇ ಕಾಂಗ್ರೆಸ್‌ನ ಅತ್ಯುನ್ನತ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆಯಾದ ಸಿಡಬ್ಲ್ಯೂಸಿ ಸಭೆ ನಡೆಯಿತು.

22 ವರ್ಷಗಳ ಹಿಂದೆ:
2 ಸಾವಿರನೇ ಇಸ್ವಿಯ ನವೆಂಬರ್‌ನಲ್ಲಿ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಿತ್ತು. ಆ ಸಂದರ್ಭದಲ್ಲಿ ಸದ್ಯ ಬಿಜೆಪಿಯಲ್ಲಿರುವ ಜಿತೇಂದ್ರ ಪ್ರಸಾದ, ಸೋನಿಯಾ ಗಾಂಧಿ ವಿರುದ್ಧ ಸ್ಪರ್ಧಿಸಿ ಸೋತಿದ್ದರು. 1997ರಲ್ಲಿ ನಡೆದಿದ್ದ ಚುನಾವಣೆಯಲ್ಲಿ ಸೀತಾರಾಂ ಕೇಸರಿ ಅವರು ಶರದ್‌ ಪವಾರ್‌ ಮತ್ತು ರಾಜೇಶ್‌ ಪೈಲಟ್‌ ಅವರನ್ನು ಸೋಲಿಸಿದ್ದರು.

Advertisement

ಕಾಂಗ್ರೆಸ್‌ನಲ್ಲಿ ಪ್ರಜಾಪ್ರಭುತ್ವಕ್ಕೆ ಅವಕಾಶವೇ ಇಲ್ಲ ಮತ್ತು ವಂಶಪಾರಂರಪರ್ಯ ಅಧಿಕಾರಕ್ಕೆ ಪ್ರೋತ್ಸಾಹ ನೀಡಲಾಗುತ್ತಿದೆ ಎಂಬ ಬಿಜೆಪಿಯ ಕಟು ಟೀಕೆ ಮಾಡುತ್ತಾ ಬಂದಿರುವಂತೆಯೇ ಹೊಸ ವೇಳಾಪಟ್ಟಿ ಪ್ರಕಟಿಸಲಾಗಿದೆ. 2017ರಿಂದ 2019ರ ವರೆಗೆ ರಾಹುಲ್‌ ಗಾಂಧಿಯವರು ಕಾಂಗ್ರೆಸ್‌ನ ಅಧ್ಯಕ್ಷರಾಗಿದ್ದರು. ಉಳಿದಂತೆ ಸೋನಿಯಾ ಗಾಂಧಿಯವರೇ 1999ರಿಂದ 2017ರ ವರೆಗೆ ಸತತವಾಗಿ ಅಧ್ಯಕ್ಷರಾಗಿದ್ದರು. 2019ರ ಚುನಾವಣೆಯಲ್ಲಿ ಕಾಂಗ್ರೆಸ್‌ ಸೋತ ಬಳಿಕ ಅಧ್ಯಕ್ಷ ಸ್ಥಾನಕ್ಕೆ ರಾಹುಲ್‌ ಗಾಂಧಿಯವರು ರಾಜೀನಾಮೆ ನೀಡಿದ್ದರು. ಅಲ್ಲಿಂದ ಇದುವರೆಗೆ ಸೋನಿಯಾ ಗಾಂಧಿಯವರು ಹಂಗಾಮಿ ಅಧ್ಯಕ್ಷರಾಗಿ ಮುಂದುವರಿದಿದ್ದಾರೆ.

ಮುಂದೂಡಿಕೆ:
ಈ ವರ್ಷದ ಆ.21ರಿಂದ ಸೆ.20ರ ಒಳಗಾಗಿ ಅಧ್ಯಕ್ಷೀಯ ಚುನಾವಣೆ ನಡೆಯಲಿದೆ ಎಂದು 2021ರ ಅಕ್ಟೋಬರ್‌ನಲ್ಲಿ ಕಾಂಗ್ರೆಸ್‌ ಪ್ರಕಟಿಸಿತ್ತು. ಈಗ ಈ ವೇಳಾಪಟ್ಟಿಯನ್ನು ಬದಲಿಸಿ, ಅಕ್ಟೋಬರ್‌ 19ರ ಒಳಗೆ ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next