ಹೊಸದಿಲ್ಲಿ: ಕರ್ನಾಟಕದಲ್ಲಿ ಭರ್ಜರಿ ಗೆಲುವಿನ ನಂತರ ಕಾಂಗ್ರೆಸ್ ನಾಯಕತ್ವದ ಗಮನ ಮುಂದಿನ ರಾಜ್ಯಗಳ ವಿಧಾನಸಭಾ ಚುನಾವಣೆಯತ್ತ ನೆಟ್ಟಿದ್ದು, ಕೆಲವು ರಾಜ್ಯಗಳಲ್ಲಿ ಬಿಜೆಪಿಯೊಂದಿಗೆ ನೇರ ಸ್ಪರ್ಧೆ ಏರ್ಪಟ್ಟಿದೆ.ಇನ್ನು ಕೆಲವೇ ತಿಂಗಳುಗಳಲ್ಲಿ ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‌ಗಢ, ತೆಲಂಗಾಣ ಮತ್ತು ಮಿಜೋರಾಂನಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ಈ ರಾಜ್ಯಗಳಲ್ಲಿ ಕಾಂಗ್ರೆಸ್ ಚುನಾವಣಾ ಕಾರ್ಯತಂತ್ರಗಳನ್ನು ರೂಪಿಸುತ್ತಿದ್ದು, ಮೇ 24 ರಂದು ರಾಜ್ಯ ನಾಯಕರ ಸಭೆಯನ್ನು ಕರೆದಿದೆ.
ರಾಜಸ್ಥಾನ ಮತ್ತು ಛತ್ತೀಸ್‌ಗಢ ಕಾಂಗ್ರೆಸ್ ಆಳ್ವಿಕೆ ಇರುವ ಎರಡು ರಾಜ್ಯಗಳಾಗಿದ್ದು, ‘ಕರ್ನಾಟಕದ ತಂತ್ರ’ವನ್ನು ಪುನರಾವರ್ತಿಸುವ ಮೂಲಕ ಆಡಳಿತ ವಿರೋಧಿ ಅಂಶ ಮತ್ತು ಬಣಗಳ ಕಾದಾಟವನ್ನು ಸರಿದೂಗಿಸಲು ಆಶಿಸುತ್ತಿದೆ. ಅಧಿಕಾರ ಕಳೆದುಕೊಂಡ ಮಧ್ಯಪ್ರದೇಶದಲ್ಲಿಯೂ ಪಕ್ಷವು ಪುನರಾಗಮನ ಮಾಡಲು ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.
ಚುನಾವಣೆಗೆ ಕಾರ್ಯತಂತ್ರ ರೂಪಿಸಲು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ತೆಲಂಗಾಣ, ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್‌ಗಢದ ನಾಯಕರ ಸಭೆಯನ್ನು ಮೇ 24 ರಂದು ಕರೆದಿದ್ದಾರೆ. ಅವರು ರಾಜ್ಯ ನಾಯಕರ ಜತೆ ಪ್ರತ್ಯೇಕ ಸಭೆ ನಡೆಸಲಿದ್ದಾರೆ. ತಳಮಟ್ಟದವರೆಗೆ ತಲುಪಲು ಆರಂಭಿಕ ಕಾರ್ಯತಂತ್ರವನ್ನು ರೂಪಿಸುವ ಆಲೋಚನೆ ಇದೆ ಎಂದು ಹಿರಿಯ ನಾಯಕರೊಬ್ಬರು ಹೇಳಿದರು.
ತೆಲಂಗಾಣ, ಮಧ್ಯಪ್ರದೇಶ ಮತ್ತು ರಾಜಸ್ಥಾನದಂತಹ ರಾಜ್ಯಗಳ ಮೂಲಕ ಸಾಗಿದ ಭಾರತ್ ಜೋಡೋ ಯಾತ್ರೆಯು ಈಗಾಗಲೇ ಕಾರ್ಯಕರ್ತರು ಸಕ್ರಿಯವಾಗಿರುವ ಕಾರಣ ಪಕ್ಷಕ್ಕೆ ಲಾಭವಾಗಲಿದೆ ಮತ್ತು ಕರ್ನಾಟಕದಲ್ಲಿ ಮಾಡಿದಂತೆ ಯಾತ್ರೆಯ ಲಾಭವನ್ನು ಪಕ್ಷವು ಪಡೆಯುತ್ತದೆ ಎಂದು ಹಿರಿಯ ನಾಯಕರೊಬ್ಬರು ಪಿಟಿಐಗೆ ಹೇಳಿಕೆ ನೀಡಿದ್ದಾರೆ.
ವಿಶೇಷವಾಗಿ ಒಳಜಗಳ ಮತ್ತು ಗುಂಪುಗಾರಿಕೆಯಿಂದಾಗಿ ಈ ಹಲವು ರಾಜ್ಯಗಳಲ್ಲಿ ಕಾಂಗ್ರೆಸ್ ಕಠಿಣವಾದ ಸವಾಲುಗಳನ್ನು ಎದುರಿಸುತ್ತಿದೆ. ರಾಜಸ್ಥಾನದಲ್ಲಿ, ಸಚಿನ್ ಪೈಲಟ್ ಮತ್ತು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ನಡುವಿನ ಹದಗೆಟ್ಟ ದ್ವೇಷವನ್ನು ಕಾಂಗ್ರೆಸ್ ನಿಭಾಯಿಸಬೇಕಾಗಿದೆ.
ಛತ್ತೀಸ್‌ಗಢದ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಮತ್ತು ರಾಜ್ಯದ ಉನ್ನತ ಹುದ್ದೆಗೆ ಹಕ್ಕು ಚಲಾಯಿಸುತ್ತಿರುವ ರಾಜ್ಯ ಸಚಿವ ಟಿಎಸ್ ಸಿಂಗ್‌ದೇವ್ ನಡುವೆ ಬಹಿರಂಗ ಹೋರಾಟವೂ ಇದೆ. ತೆಲಂಗಾಣದಲ್ಲಿಯೂ, ರಾಜ್ಯ ಘಟಕದ ಮುಖ್ಯಸ್ಥ ರೇವಂತ್ ರೆಡ್ಡಿ ಅವರನ್ನು ಹೊರಗಿನವರು ಎಂದು ಪರಿಗಣಿಸುವ ರಾಜ್ಯ ನಾಯಕರಿಂದ ಆಂತರಿಕ ಜಗಳ ಎದುರಿಸುತ್ತಿದ್ದಾರೆ. ತೆಲಂಗಾಣದಲ್ಲಿ ಆಡಳಿತಾರೂಢ ಬಿಆರ್ ಎಸ್ , ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ತ್ರಿಕೋನ ಸ್ಪರ್ಧೆ ಕಂಡುಬರುತ್ತಿದೆ.
ಹಿಮಾಚಲ ಪ್ರದೇಶ ಮತ್ತು ಕರ್ನಾಟಕದಲ್ಲಿ ಬಿಜೆಪಿಯಿಂದ ಅಧಿಕಾರ ಕಸಿದುಕೊಂಡ ಬಳಿಕ ಕಾಂಗ್ರೆಸ್ ಹೊಸ ಉತ್ಸಾಹದಿಂದ ಚುನಾವಣೆಗೆ ಸಜ್ಜಾಗುತ್ತಿದೆ.