ಕೋಲಾರ: ಕರ್ನಾಟಕ ಹಾಗೂ ತಮಿಳುನಾಡು ಜನರ ಬಾಂಧವ್ಯ ಬೆಸೆಯಲು ಹಲವು ಉತ್ತಮ ಅಂಶಗಳಿದ್ದರೂ, ಮೇಕೆದಾಟು ಯೋಜನೆ ಮೂಲಕ ರಾಜ್ಯಗಳ ನಡುವೆ ಕಂದಕ ಸೃಷ್ಟಿಸಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ ಎಂದು ಮಾಜಿ ಐಪಿಎಸ್ ಅಧಿಕಾರಿ, ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆರೋಪಿಸಿದರು.
ರವಿವಾರ ಬಂಗಾರಪೇಟೆ ವೃತ್ತದಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಅನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಕರ್ನಾಟಕದಿಂದ ಹಲವು ಕೃಷಿ ಉತ್ಪನ್ನಗಳು ತಮಿಳುನಾಡಿಗೆ ಬಂದರೆ, ತಮಿಳುನಾಡಿನಿಂದ ಹಲವು ಉತ್ಪನ್ನಗಳು ಕರ್ನಾಟಕಕ್ಕೆ ಬರುತ್ತಿವೆ. ಎರಡೂ ರಾಜ್ಯಗಳು ಸಾಮರಸ್ಯದಿಂದ ಜೀವನ ನಡೆಸುತ್ತಿದ್ದು, ಕಾಂಗ್ರೆಸ್ ವಿಭಾಗಿಸುವ ಕೆಲಸ ಮಾಡುತ್ತಿದೆ ಎಂದರು.
ಮೇಕೆದಾಟು ಯೋಜನೆ ಕುರಿತಂತೆ ಕೇಂದ್ರ ಸಚಿವರು ಈಗಾಗಲೇ ಸ್ಪಷ್ಟನೆ ನೀಡಿದ್ದು, ಎರಡೂ ರಾಜ್ಯಗಳ ಮುಖ್ಯಮಂತ್ರಿಗಳು ಈ ಕುರಿತು ಮಾತನಾಡಿದ್ದಾರೆ. ವಿಷಯ ಸುಪ್ರೀಂ ಕೋರ್ಟ್‌ನಲ್ಲಿದ್ದು, ಎಲ್ಲರಿಗೂ ನ್ಯಾಯ ಕೊಡುವಂತಹ ತೀರ್ಪು ನ್ಯಾಯಾಲಯ ನೀಡುವ ಭರವಸೆಯಿದೆ ಎಂದವರು ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ:ಉದ್ಧವ್ ಠಾಕ್ರೆಗೆ ಮತ್ತೊಂದು ಸವಾಲೆಸೆದ ನವನೀತ್ ಕೌರ್
ಪಿಎಸ್‌ಐ ನೇಮಕಾತಿ ಅವ್ಯವಹಾರ ಕುರಿತಂತೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದ ಅವರು, ಏನಾಗಿದೆ ಎನ್ನುವುದು ನಿಜವಾಗಿಯೂ ನನಗೆ ಗೊತ್ತಿಲ್ಲ. ನಾನು ತಮಿಳುನಾಡಿನಲ್ಲಿ ಪಕ್ಷ ಸಂಘಟನೆಯಲ್ಲಿ ತೊಡಗಿದ್ದು, ತನಿಖೆ ಪಾರದರ್ಶಕವಾಗಿ ಆಗಬೇಕು ಎಂದು ಹೇಳಿದರು.