ಹುಬ್ಬಳ್ಳಿ: ಕುಂದಗೋಳ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ಹಾಲಿ-ಮಾಜಿ ಸಚಿವರು, ಶಾಸಕರು, ಕೆಪಿಸಿಸಿ ಪದಾಧಿಕಾರಿಗಳು ಹಾಗೂ ಜೆಡಿಎಸ್ ಪ್ರಮುಖರ ಮಹತ್ವದ ಸಭೆ ಶುಕ್ರವಾರ ಇಲ್ಲಿನ ಕಾಟನ್ ಕೌಂಟಿ ಕ್ಲಬ್‌ನಲ್ಲಿ ನಡೆಯಿತು. ಕ್ಷೇತ್ರದ ನಾಡಿ ಮಿಡಿತ ಹಾಗೂ ಗೆಲುವಿನ ಕಾರ್ಯತಂತ್ರ ಬಗ್ಗೆ ಚರ್ಚಿಸಲಾಯಿತು.
ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್, ಸಚಿವ ಡಿ.ಕೆ.ಶಿವಕುಮಾರ, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಚ್.ಕೆ. ಪಾಟೀಲ ಇನ್ನಿತರ ಮುಖಂಡರು ಸಭೆಯಲ್ಲಿ ಪಾಲ್ಗೊಂಡಿದ್ದರು.
ಕುಂದಗೋಳ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ಕುಸುಮಾವತಿ ಶಿವಳ್ಳಿ ಅವರ ಗೆಲುವಿನ ನಿಟ್ಟಿನಲ್ಲಿ ಜಿಪಂ, ಗ್ರಾಪಂವಾರು ಹಂಚಿಕೆ ಮಾಡಿದ ಜವಾಬ್ದಾರಿ ನಿರ್ವಹಣೆ, ಪ್ರಚಾರ, ಮಾಹಿತಿ ಸಂಗ್ರಹ ಕುರಿತಾಗಿ ಚರ್ಚಿಸಲಾಯಿತು ಎಂದು ಹೇಳಲಾಗುತ್ತಿದೆ.
ಮನೆ, ಮನೆ ಭೇಟಿ ಕಡ್ಡಾಯ: ಕ್ಷೇತ್ರದಲ್ಲಿ ರೋಡ್ ಶೋ ಹಾಗೂ ಸಾರ್ವಜನಿಕ ಸಭೆಗಳನ್ನು ಮಾಡುವುದು ಬೇಡ. ಬದಲಾಗಿ ಸಚಿವರು, ಶಾಸಕರು ಯಾರೇ ಇರಲಿ ಮನೆ ಮನೆಗಳಿಗೆ ಭೇಟಿ ನೀಡಿ ಮತಯಾಚಿಸಬೇಕು. ನಿಮ್ಮ ಕುಟುಂಬ ವಿವಾಹ ಮಹೋತ್ಸವ ಆಹ್ವಾನ ಪತ್ರಿಕೆ ನೀಡಲು ಯಾವ ರೀತಿ ಹೋಗುತ್ತೀರೋ ಅದೇ ರೀತಿ ನಗುಮೊಗದೊಂದಿಗೆ ಹೋಗಿ ಮತದಾರರ ಮನವೊಲಿಸಬೇಕೆಂದು ಸೂಚಿಸಲಾಯಿತು ಎನ್ನಲಾಗಿದೆ.
ಬೂತ್‌ವಾರು ಮನೆ, ಮನೆ ಭೇಟಿ ವೇಳೆ ಮನೆಗಳಲ್ಲಿರುವ ಮತದಾರರ ಸಂಖ್ಯೆ, ಮೊಬೈಲ್ ಸಂಖ್ಯೆ, ಮತದಾರ ಪಟ್ಟಿಯಲ್ಲಿ ಅವರ ಹೆಸರು ಇದೆಯೋ ಇಲ್ಲವೋ ಎಂಬುದರ ಮಾಹಿತಿ ಸಂಗ್ರಹಿಸಬೇಕು. ಪ್ರತಿ ದಿನದ ಪ್ರಚಾರದ ಮಾಹಿತಿ ವರದಿಯನ್ನು ಕಡ್ಡಾಯವಾಗಿ ನೀಡಬೇಕು. ಪ್ರತಿದಿನ ಬೆಳಿಗ್ಗೆ 7:30ಗಂಟೆಗೆ ಹೊರಟು, ಬೆಳಿಗ್ಗೆ 8:00ರಿಂದ ರಾತ್ರಿ 8:00ಗಂಟೆವರೆಗೂ ಕ್ಷೇತ್ರದಲ್ಲಿ ನಿಗದಿ ಪಡಿಸಿದ ಬೂತ್‌ಗಳಲ್ಲಿ ಮನೆ, ಮನೆ ಪ್ರಚಾರ ಕೈಗೊಳ್ಳಬೇಕೆಂದು ಸೂಚಸಲಾಗಿದೆ ಎಂದು ಹೇಳಲಾಗುತ್ತಿದೆ.
ತಮ್ಮ ತಮ್ಮ ಬೂತ್‌ನಲ್ಲಿ ಕೈಗೊಂಡ ಪ್ರಚಾರ ಕಾರ್ಯ, ಸಂಗ್ರಹಿಸಿದ ಮಾಹಿತಿ, ಪಡೆಯಬಹುದಾದ ಲೀಡ್ ನಿರೀಕ್ಷೆ ಕುರಿತಾಗಿ ಅನೇಕರು ಮಾಹಿತಿ ನೀಡಿದರು ಎನ್ನಲಾಗುತಿದೆ.
ಕಾಂಗ್ರೆಸ್ ಮುಖಂಡರಾದ ಆರ್.ಬಿ.ತಿಮ್ಮಾಪುರ, ಶಿವಾನಂದ ಪಾಟೀಲ, ಡಾ|ಪುಷ್ಪಾ ಅಮರನಾಥ, ವೀರಕುಮಾರ ಪಾಟೀಲ, ಪ್ರಸಾದ ಅಬ್ಬಯ್ಯ, ಶ್ರೀನಿವಾಸ ಮಾನೆ, ಲಕ್ಷ್ಮೀ ಹೆಬ್ಟಾಳಕರ, ಅಂಜಲಿ ನಿಂಬಾಳ್ಕರ್, ಕಿಮ್ಮನೆ ರತ್ನಾಕರ, ಬಸವರಾಜ ಶಿವಣ್ಣವರ, ಬಿ.ಆರ್.ಯಾವಗಲ್ಲ, ಡಿ.ಆರ್.ಪಾಟೀಲ, ಬಿ.ಸಿ. ಪಾಟೀಲ, ರುದ್ರಪ್ಪ ಲಮಾಣಿ, ಜೆ.ಟಿ.ಪಾಟೀಲ, ಸಂತೋಷ ಲಾಡ್, ಮಹೇಶ ಕುಮಠಳ್ಳಿ, ಶ್ರೀಮಂತ ಪಾಟೀಲ, ಎಸ್.ಜಿ.ನಂಜಯ್ಯನಮಠ, ವೀರಣ್ಣ ಮತ್ತಿಕಟ್ಟಿ, ಜೆಡಿಎಸ್ ಮುಖಂಡರಾದ ಎನ್.ಎಚ್.ಕೋನರಡ್ಡಿ, ಎಂ.ಎಸ್.ಅಕ್ಕಿ ಇನ್ನಿತರರು ಇದ್ದರು.